Advertisement

ಕರಾವಳಿಯಾದ್ಯಂತ ಸಂಭ್ರಮದ ಬಕ್ರೀದ್‌ ಆಚರಣೆ

03:25 AM Aug 23, 2018 | Karthik A |

ಮಂಗಳೂರು/ಉಡುಪಿ/ಕಾಸರಗೋಡು: ಪ್ರವಾದಿ ಇಬ್ರಾಹಿಂ ಅವರ ತ್ಯಾಗ, ಬಲಿದಾನದ ದ್ಯೋತಕವಾಗಿ ಬಕ್ರೀದ್‌ (ಈದುಲ್‌ ಅಝ್ಹಾ) ಹಬ್ಬವನ್ನು ಸಂಭ್ರಮ, ಸಡಗರದಿಂದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಬುಧವಾರ ಆಚರಿಸಲಾಯಿತು. ತ್ರಿವಳಿ ಜಿಲ್ಲೆಗಳ ಎಲ್ಲ ಪ್ರಮುಖ ಮಸೀದಿಗಳಲ್ಲಿ ಬೆಳಗ್ಗೆ ಸಾಮೂಹಿಕ ನಮಾಜ್‌, ಧರ್ಮ ಗುರುಗಳಿಂದ ಈದ್‌ ಸಂದೇಶ ಮತ್ತು ಪ್ರವಚನ, ಪರಸ್ಪರ ಈದ್‌ ಶುಭಾಶಯ ವಿನಿಮಯ ನಡೆಯಿತು.

Advertisement

ಮಂಗಳೂರಿನ ಬಾವುಟಗುಡ್ಡೆಯ ಈದ್ಗಾದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಖಾ ಅಹ್ಮದ್‌ ಮುಸ್ಲಿಯಾರ್‌ ಹಬ್ಬದ ವಿಶೇಷ ಪ್ರಾರ್ಥನೆ ಹಾಗೂ ಖುತ್ಬಾ ಪ್ರವಚನ ನೀಡಿ ‘ಏಕದೇವ ವಿಶ್ವಾಸದ ಸಮಾಜ ಸ್ಥಾಪನೆಗಾಗಿ ಪ್ರವಾದಿ ಇಬ್ರಾಹಿಂ ಅವರು ಇಡೀ ಜೀವನವನ್ನೇ ಮುಡಿಪಾಗಿರಿಸಿ, ಹಲವಾರು ಸವಾಲು, ಸ್ವಪರೀಕ್ಷೆಗಳನ್ನು ಎದುರಿಸಿ, ತ್ಯಾಗ, ಬಲಿದಾನ ಮಾಡಿದ್ದರು. ಅವರ ಜೀವನ ಎಲ್ಲರಿಗೂ ಮಾದರಿಯಾಗಬೇಕು’ ಎಂದು ಹೇಳಿದರು.

ಝೀನತ್‌ ಬಕ್ಷ್ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ  ವೈ. ಅಬ್ದುಲ್ಲಾ ಕುಂಞಿ ಅವರು ಈದ್‌ ಸಂದೇಶದಲ್ಲಿ, ತ್ಯಾಗ, ಬಲಿದಾನ ಮತ್ತು ವಾಗ್ಧಾನದ ಮನೋಭಾವ ಗಟ್ಟಿಗೊಳಿಸಲು ನಮಗೆ ಬಕ್ರೀದ್‌ ಪ್ರೇರಣೆ ನೀಡುತ್ತದೆ. ನೆರೆಯ ಕೊಡಗು ಮತ್ತು ಕೇರಳದ ಜನರು ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವ ಮೂಲಕ ನಿಜಾರ್ಥದಲ್ಲಿ ಹಬ್ಬ ಆಚರಿಸಬೇಕಾದುದು ನಮ್ಮ ಕರ್ತವ್ಯ ಎಂದರು.

ನಗರಾಡಳಿತ ಮತ್ತು ವಸತಿ ಸಚಿವ ಯು.ಟಿ. ಖಾದರ್‌, ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ, ಮಹಾನಗರ ಪಾಲಿಕೆಯ ಆಯುಕ್ತ ಮೊಹಮ್ಮದ್‌ ನಝೀರ್‌, ಡಿಸಿಪಿ ಹನುಮಂತರಾಯ ಮೊದಲಾದವರು ಶುಭ ಹಾರೈಸಿದರು. ಕುದ್ರೋಳಿ ಜಾಮಿಯಾ ಮಸೀದಿಯಲ್ಲಿ ಧರ್ಮಗುರು ಮುಫ್ತಿ ಮನ್ನಾನ್‌ ಸಾಹೇಬ್‌ ನೇತೃತ್ವದಲ್ಲಿ ನಮಾಜ್‌ ಮತ್ತು ಪ್ರವಚನ ನಡೆಯಿತು.

ಉಡುಪಿ: ಈದ್‌ ಸಂದೇಶ


ಉಡುಪಿಯ ಜಾಮಿಯಾ ಮಸೀದಿ ಸಹಿತ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ನಮಾಜ್‌ ನಡೆದ ಬಳಿಕ ಈದ್‌ ಸಂದೇಶವನ್ನು ಸಾರಲಾಯಿತು. ಮೂಳೂರು ಜಿಲ್ಲಾ ಮಸೀದಿಗೆ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್‌ ಅವರು ಮಂಗಳವಾರ ಸಂಜೆ ಭೇಟಿ ನೀಡಿದರು.

Advertisement

ಮುಸ್ಲಿಮರು ಬೆಳಗ್ಗೆ ಸಿಹಿ ತಿಂಡಿ ಸ್ವೀಕರಿಸಿ, ಹೊಸ ಉಡುಪು ಧರಿಸಿ ವಿಶೇಷ ಪ್ರಾರ್ಥನೆಗಾಗಿ ಮಸೀದಿ ಮತ್ತು ಈದ್ಗಾಕ್ಕೆ ತೆರಳಿದರು. ಧರ್ಮಗುರುಗಳ ಪ್ರಾರ್ಥನೆ, ಪ್ರವಚನ ನಡೆದ ಬಳಿಕ ಎಲ್ಲರೂ ಪರಸ್ಪರ ಹಸ್ತ ಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ಹಂಚಿಕೊಂಡರು. ಕೆಲವರು ಬಡವರಿಗೆ ದಾನ, ಧರ್ಮ ಮಾಡಿ ನೆರವಾದರು. ಮನೆಯವರು, ನೆರೆಹೊರೆಯವರು, ಗೆಳೆಯರು, ಸಂಬಂಧಿಕರು ಸೇರಿದಂತೆ ಪ್ರತಿಯೊಬ್ಬರೂ ಹಬ್ಬದ ಶುಭಾಶಯ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next