Advertisement

ಮಾರುಕಟ್ಟೆಯಲ್ಲಿ ದಸರಾ ಹಬ್ಬದ ರಂಗು; ಕಳೆದ ವಾರಕ್ಕೆ ಹೋಲಿಸಿದರೆ ತರಕಾರಿ, ಹೂ ಬೆಲೆ ಹೆಚ್ಚಳ

04:13 PM Oct 11, 2024 | Team Udayavani |

ಬೆಂಗಳೂರು: ಆಯುಧ ಪೂಜೆ ಹಾಗೂ ವಿಜಯ ದಶಮಿ ಅಂಗವಾಗಿ ಕಳೆದ ವಾರಕ್ಕೆ ಹೋಲಿಸಿದರೆ, ಹೂವು- ಹಣ್ಣು-ತರಕಾರಿಗಳ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದು, ನಗರದ ಪ್ರಮುಖ ಮಾರುಕಟ್ಟೆಗಳಲ್ಲಿ ದಸರಾ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿ ಜೋರಾಗಿ ನಡೆಯಿತು.

Advertisement

ಸಿಲಿಕಾನ್‌ ಸಿಟಿ ಬೆಂಗಳೂರಿನ ಕೆ.ಆರ್‌.ಮಾರುಕಟ್ಟೆ, ಗಾಂಧಿಬಜಾರ್‌, ಕೆ.ಆರ್‌.ಪುರಂ, ಬಸವನಗುಡಿ, ಮಲ್ಲೇಶ್ವರ, ಬನಶಂಕರಿ, ಯಶವಂತಪುರ ಸೇರಿದಂತೆ ವಿವಿಧ ಮಾರುಕಟ್ಟೆಗಳಲ್ಲಿ ಗುರುವಾರ ಜನದಟ್ಟಣೆ ಕಂಡು ಬಂದಿತು. ಒಂದೆಡೆ ಬಾಳೆಕಂಬ-ಬೂದು ಕುಂಬಳ ಕಾಯಿ ಮತ್ತೂಂದೆಡೆ ಹೂ-ಹಣ್ಣು, ತರಕಾರಿ, ಅಲಂಕಾರಿಕ ವಸ್ತುಗಳನ್ನು ಒಳಗೊಂಡಿರುವ ಚೀಲಗಳನ್ನು ಹಿಡಿದು ಮಾರುಕಟ್ಟೆಯ ಕಿಕ್ಕಿರಿದ ಜಾಗದಲ್ಲಿ ಸಾಗಿದರು.

ಕೆ.ಆರ್‌. ಮಾರುಕಟ್ಟೆಯಲ್ಲಿ ಕೇವಲ ಒಂದು ವಾರದ ಹಿಂದೆ ಒಂದು ಕೆ.ಜಿ. ಸೇವಂತಿಗೆಯನ್ನು 80 ರಿಂದ 200ರೂ.ಗೆ ಮಾರಾಟ ಮಾಡಿದರೆ, ಹಬ್ಬದ ಪ್ರಯುಕ್ತ 100ರಿಂದ 300 ರೂ.ವರೆಗೆ ಮಾರಾಟ ಮಾಡ ಲಾಗಿದೆ. ಅದೇ ರೀತಿ, ಒಂದು ಕೆ.ಜಿ. ಮಲ್ಲಿಗೆ ಯನ್ನು 400 ರಿಂದ 800 ರೂ., ಕನಕಾಂಬರ 400 ರಿಂದ 2,000 ರೂ., ಗುಲಾಬಿ 300ರಿಂದ 400 ರೂ., ಸುಗಂಧರಾಜ 500 ರೂ. ಹಾಗೂ ಚೆಂಡು ಹೂವನ್ನು 50ರಿಂದ 100 ರೂ.ವರೆಗೆ ಮಾರಾಟ ಮಾಡಲಾಗಿದೆ ಎಂದು ಕೆ.ಆರ್‌.ಮಾರುಕಟ್ಟೆ ಸಗಟು ಹೂ ಮಾರಾಟಗಾರರ ಸಂಘದ ಅಧ್ಯಕ್ಷ ದಿವಾಕರ್‌ ತಿಳಿಸಿದರು.

ಅದೇ ರೀತಿ ಒಂದು ಮಾವಿನ ಸೊಪ್ಪಿನ ಕಟ್ಟನ್ನು 20 ರೂ.ಗೆ ಮಾರಾಟ ಮಾಡಿದರೆ, ಜೋಡಿ ಬಾಳೆ ಕಂಬಗಳಿಗೆ 50 ರೂ., ಒಂದು ಕಟ್ಟು ವೀಳ್ಯದೆಲೆಗೆ 100 ರೂ., ಮಾವಿನ ಸೊಪ್ಪಿನ ಕಟ್ಟು 20 ರೂ., ಬೂದುಗುಂಬಳ ಕೆ.ಜಿ.ಗೆ 30ರಿಂದ 40 ರೂ.ವರೆಗೆ ಮಾರಾಟ ಮಾಡಲಾಗಿದೆ. ಇನ್ನೂ ಹಣ್ಣುಗಳಲ್ಲಿ ಒಂದು ಕೆ.ಜಿ. ದ್ರಾಕ್ಷಿಯನ್ನು 200ರಿಂದ 240 ರೂ., ಸೇಬು 100 ರಿಂದ 120 ರೂ., ದಾಳಿಂಬೆ 80ರಿಂದ 120ರೂ., ಸೀತಾಫ‌ಲ ಮತ್ತು ಏಲಕ್ಕಿ ಬಾಳೆ 80 ರಿಂದ 100 ರೂ.ಗೆ ಮಾರಾಟ ಮಾಡಲಾಯಿತು.

Advertisement

ಆಯುಧ ಪೂಜೆ ಮತ್ತು ದಸರಾ ಹಬ್ಬದ ಹಿನ್ನೆಲೆಯಲ್ಲಿ ಹೂವಿನ ಬೆಲೆಯಲ್ಲಿ ತುಸು ಏರಿಕೆ ಯಾಗಿದ್ದು, ವ್ಯಾಪಾರವು ಚೆನ್ನಾಗಿ ನಡೆಯುತ್ತಿದೆ. ನಗರದಲ್ಲಿ ಬಹುತೇಕ ಐಬಿ-ಬಿಟಿ ಮತ್ತು ಇತರೆ ಕಂಪನಿಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಗುರುವಾರ ದಂದೆ ಆಯುಧ ಪೂಜೆ ಆಚರಿಸಿದ ನಿಟ್ಟಿನಲ್ಲಿ ಬುಧವಾರ, ಗುರುವಾರ ಮುಂಜಾನೆಯೇ ವ್ಯಾಪಾರ ಚೆನ್ನಾಗಿ ಆಗಿದೆ. ●ದಿವಾಕರ್‌, ಅಧ್ಯಕ್ಷ, ಕೆ.ಆರ್‌. ಮಾರುಕಟ್ಟೆ ಸಗಟು ಹೂ ಮಾರಾಟಗಾರರ ಸಂಘ.

ಕಡ್ಲೆಪುರಿ, ಸ್ವೀಟ್ಸ್‌ ಭರ್ಜರಿ ಮಾರಾಟ

ಅಂಗಡಿಗಳು, ಮಳಿಗೆಗಳು, ಕಚೇರಿಗಳಲ್ಲಿ ಆಯುಧ ಪೂಜೆ ಆಚರಿಸಿ ಸಿಬ್ಬಂದಿಗೆ ಕಡಲೆ ಪುರಿ ಹಾಗೂ ಸ್ವೀಟ್‌ ಹಂಚುವುದು ಸಾಮಾನ್ಯವಾಗಿದ್ದು, ನಗರದಲ್ಲಿ ಭರ್ಜರಿ ವಹಿವಾಟು ನಡೆಯಿತು. ಕೆ.ಆರ್‌. ಮಾರ್ಕೆಟ್‌, ಚಾಮರಾಜಪೇಟೆ ಸೇರಿದಂತೆ ವಿವಿಧೆಡೆ ರಸ್ತೆ ಬದಿಗಳಲ್ಲಿ ಕಡ್ಲೆಪುರಿ ಚೀಲಗಳನ್ನು ಇಟ್ಟುಕೊಂಡು ಲೀಟರ್‌ ಕಡ್ಲೆಪುರಿಯನ್ನು 15 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಇನ್ನೂ ಬೇಕರಿ, ಕಾಂಡಿಮೆಂಟ್ಸ್‌ಗಳಲ್ಲಿ ಜನರು ಸ್ವೀಟ್‌ ಬಾಕ್ಸ್‌ ಗಳನ್ನು ಖರೀದಿಸುವ ದೃಶ್ಯಗಳು ಕಂಡು ಬಂದವು.

ಬಹುತೇಕ ಕಡೆ ನಿನ್ನೆಯೇ ಆಯುಧ ಪೂಜೆ: 3 ದಿನ ರಜೆ

ಸಾಮಾನ್ಯವಾಗಿ ಆಯುಧಪೂಜೆ ಹಾಗೂ ವಿಜಯ ದಶಮಿ ಹಬ್ಬಕ್ಕೆ ಸರ್ಕಾರಿ ರಜೆ ಇರುವ ಕಾರಣ ಉದ್ಯೋಗಿಗಳು ತಮ್ಮ ತಮ್ಮ ಊರು ಗಳಿಗೆ ಹೋಗುವ ನಿಟ್ಟಿನಲ್ಲಿ ರಾಜಧಾನಿ ಬೆಂಗಳೂರಿನ ಬಹುತೇಕ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳಲ್ಲಿ, ಐಟಿ-ಬಿಟಿ ಕಂಪನಿಗಳಲ್ಲಿ ಗುರುವಾರ ದಂದೆ ಸಂಪ್ರದಾಯಿಕ ಉಡುಪುಗಳನ್ನು ಧರಿಸಿ, ಆಯುಧ ಪೂಜೆಯನ್ನು ಆಚರಿಸಿ ಸಂಭ್ರಮಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next