Advertisement

Kundapura: ಶಾಲಾ ಶಾರದೋತ್ಸವಕ್ಕೆ 100 ವರ್ಷ!

03:45 PM Oct 10, 2024 | Team Udayavani |

ಕುಂದಾಪುರ: ನವರಾತ್ರಿಯ ಸಂಭ್ರಮದಲ್ಲಿ ಕರಾವಳಿಯ ಬಹುತೇಕ ಶಾಲೆಗಳಲ್ಲಿ ಶಾರದಾ ಪೂಜೆಯನ್ನು ನೆರವೇರಿಸಲಾಗುತ್ತಿದೆ. ಹೆಚ್ಚಿನ ಶಾಲೆಗಳಲ್ಲಿ ಸ್ವಾತಂತ್ರ್ಯ ಅನಂತರದ ದಿನಗಳಲ್ಲಿ ಈ ಆಚರಣೆ ಆರಂಭಗೊಂಡಿದ್ದರೆ, ಬಸ್ರೂರಿನ ಹಿಂದೂ ಮಾದರಿ ಅನುದಾನಿತ ಹಿ.ಪ್ರಾ. ಶಾಲೆಯ ಶಾರದಾ ಪೂಜೆಗೆ ಮಾತ್ರ ನೂರಕ್ಕೂ ಮಿಕ್ಕಿ ವರ್ಷ ಗಳ ಇತಿಹಾಸವಿರುವುದು ವಿಶೇಷ.

Advertisement

ಹೌದು, ಐತಿಹಾಸಿಕ ನಗರಿಯಾದ ಬಸ್ರೂರು ಪೇಟೆಯಲ್ಲಿರುವ ನಿವೇದಿತಾ ಪ್ರೌಢಶಾಲೆಯ ಪಕ್ಕದಲ್ಲಿರುವ ಹಿಂದೂ ಮಾದರಿ ಹಿ.ಪ್ರಾ. ಶಾಲೆಯಲ್ಲಿ ನೂರು ವರ್ಷಗಳಿಗೂ ಹಿಂದಿನಿಂದಲೂ ಶಾರದಾ ಪೂಜೆ ನಡೆಯುತ್ತಿದೆ. ಬಹುತೇಕ ಎಲ್ಲ ಶಾಲೆಗಳಲ್ಲಿ ಶಾರದೆಯ ಭಾವಚಿತ್ರ ಇಟ್ಟು ಪೂಜೆ ನಡೆಯುತ್ತದೆ. ಆದರೆ, ಇಲ್ಲಿ ಆರಂಭದಿಂದ ಈವರೆಗೂ ಕೂಡ ಶಾರದಾ ದೇವಿಯ ಮೂರ್ತಿಯನ್ನಿಟ್ಟೇ ವಿದ್ಯಾಧಿದೇವತೆಗೆ ಪೂಜೆ ನಡೆಯುತ್ತಿರುವುದು ಅಪರೂಪ.

1908ರಲ್ಲಿ ಆರಂಭ
ಮೂಡ್ಕೇರಿಯ ಹಳೆಯ ಕಟ್ಟಡದಲ್ಲಿ 1908ರಲ್ಲಿ ಈ ಶಾಲೆಯು ಆರಂಭಗೊಂಡಿದ್ದು, ಈಗ 116 ವರ್ಷಗಳನ್ನು ಪೂರೈಸಿದೆ. 1918 ರಲ್ಲಿ ಈ ಶಾಲೆಗೆ ಮಾನ್ಯತೆ ಸಿಕ್ಕಿದೆ. ಕೆಲ ವರ್ಷಗಳ ಹಿಂದೆ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದರಿಂದ ಈ ಸ್ಥಳವಕಾಶದ ಕೊರತೆಯಿಂದ ಈಗಿರುವ ನಿವೇದಿತಾ ಪ್ರೌಢಶಾಲೆಯ ಸಮೀಪದ ಕಟ್ಟಡಕ್ಕೆ ಶಾಲೆ ಸ್ಥಳಾಂತರಗೊಂಡಿತು. ಪ್ರಸ್ತುತ ಅಲ್ಲಿಯೇ ಪಾಠ- ಪ್ರವಚನ ನಡೆಯುತ್ತಿದೆ. ಆದರೆ ಶಾರದಾ ಪೂಜೆ ಮಾತ್ರ ಪ್ರತೀ ವರ್ಷ ಇದೇ ಹಳೆಯ ಕಟ್ಟಡದಲ್ಲಿ ನಡೆದುಕೊಂಡು ಬರುತ್ತಿದೆ. ಪ್ರಸ್ತುತ ಶಾಲೆಯಲ್ಲಿ 97 ಮಂದಿ ಮಕ್ಕಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಒಬ್ಬರು ಖಾಯಂ, 7 ಮಂದಿ ಗೌರವ ಶಿಕ್ಷಕಿಯರಿದ್ದಾರೆ.

ನೂರು ವರ್ಷಕ್ಕೂ ಹಿಂದಿನ ಆಚರಣೆ
ಈ ಶಾಲೆಯ ಅತ್ಯಂತ ಹಿರಿಯ ವಿದ್ಯಾರ್ಥಿ, ಪ್ರಸ್ತುತ ಸಂಚಾಲಕರಾಗಿರುವ 90ರ ಹೊಸ್ತಿಲಲ್ಲಿರುವ ಬಿ. ಅಪ್ಪಣ್ಣ ಹೆಗ್ಡೆಯವರ ಪ್ರಕಾರ ನನ್ನ ಹಿರಿಯರು ಹೇಳುವಂತೆ ಶಾಲೆ ಆರಂಭಗೊಂಡ 5ನೇ ವರ್ಷದಿಂದ ಈ ಶಾರದಾ ಪೂಜೆ ಆರಂಭಗೊಂಡಿತ್ತು. ನಾನು ಶಾಲೆಗೆ ಸೇರುವ ಮೊದಲಿನಿಂದಲೂ ಈ ಆಚರಣೆ ಇತ್ತು. ಅಂದಿನಿಂದ ಇಂದಿನವರೆಗೂ ಸತತವಾಗಿ ಶಾರದಾ ಪೂಜೆ ನಡೆಯುತ್ತಿದೆ ಎನ್ನುವುದಾಗಿ ಅವರು ನೆನಪಿಸಿಕೊಳ್ಳುತ್ತಾರೆ.

ಹಿಂದೆ 3 ದಿನಗಳ‌ ಆಚರಣೆ ಇತ್ತು..
ನಾನು ಶಾಲೆಗೆ ಹೋಗುತ್ತಿದ್ದ ವೇಳೆ 3 ದಿನಗಳ ಕಾಲ ಶಾರದಾ ಪೂಜೆ ನಡೆಯುತ್ತಿತ್ತು. ಈಗ ಒಂದು ದಿನ ಮಾತ್ರ ನಡೆಯುತ್ತಿದೆ. ನಮ್ಮ ಸಂಸ್ಕೃತಿ, ಸಂಸ್ಕಾರ ಉಳಿವಿಗೆ, ತನ್ಮೂಲಕ ವಿದ್ಯಾಧಿದೇವತೆಯ ಸ್ಮರಿಸುವ, ಮಕ್ಕಳಲ್ಲಿ ಹೆಚ್ಚಿನ ಹುರುಪು, ಬುದ್ಧಿ, ನೀತಿ, ಶಕ್ತಿವಂತರಾಗಬೇಕು, ಮಕ್ಕಳಲ್ಲಿ ಧಾರ್ಮಿಕ ಭಾವನೆ, ಅದರೊಂದಿಗೆ ಓದು, ಕಲಿಕೆ ಆಸಕ್ತಿ, ವಿದ್ಯೆಗೆ ಮಹತ್ವ ಕೊಡುವ ನಿಟ್ಟಿನಲ್ಲಿ ಶಾರದಾ ಪೂಜೆ ಆಚರಣೆ ನಡೆಯುತ್ತಿದೆ.
– ಬಿ. ಅಪ್ಪಣ್ಣ ಹೆಗ್ಡೆ, ಹಿರಿಯ ವಿದ್ಯಾರ್ಥಿ, ಶಾಲಾ ಸಂಚಾಲಕ

Advertisement

ನಿರಂತರ ಆಚರಣೆ
ಶಾಲೆಗೆ ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಆರಂಭದಿಂದಲೂ ಶಾರದಾ ಪೂಜೆ ನಡೆಯುತ್ತಿದೆ. ಯಾವ ವರ್ಷ ಆರಂಭಗೊಂಡಿತು ಅನ್ನುವ ನಿರ್ದಿಷ್ಟ ದಾಖಲೆಗಳು ಸಿಕ್ಕಿಲ್ಲ. ಅಪ್ಪಣ್ಣ ಹೆಗ್ಡೆಯವರು ಹೇಳುವ ಪ್ರಕಾರ ನೂರು ವರ್ಷಗಳಿಗೂ ಹೆಚ್ಚು ಕಾಲದಿಂದ ನಿರಂತರವಾಗಿ ನಡೆಯುತ್ತಿದೆ. ಕೊರೊನಾ ಕಾಲದಲ್ಲಿ ಒಂದು ವರ್ಷ ಹೊರತುಪಡಿಸಿದರೆ ಬೇರೆ ಯಾವ ವರ್ಷವೂ ಆಚರಣೆ ನಿಂತಿಲ್ಲ.
– ಮಂಜುನಾಥ ಕೆ.ಎಸ್‌., ಮುಖ್ಯ ಶಿಕ್ಷಕ.

ಶಾಲೆಯಲ್ಲೇ ಮೂರ್ತಿ ನಿರ್ಮಾಣ
ಇಲ್ಲಿ ಶಾರದಾ ದೇವಿಯ ಮಣ್ಣಿನ ಮೂರ್ತಿಯನ್ನು ಮಾಡಿ ಪೂಜೆ ಮಾಡಿ, ಆರಾಧಿಸಿಕೊಂಡು ಬರಲಾಗುತ್ತಿದೆ. ಗುಡಿಗಾರ್‌ ಕುಟುಂಬಸ್ಥರು ಈ ಶಾಲೆಯ ಹಳೆಯ ಕಟ್ಟಡದಲ್ಲಿ ಮೂರ್ತಿಯನ್ನು ರಚಿಸುತ್ತಿದ್ದು, ಅವರೇ ಈ ಶಾಲೆಗೂ ಮೂರ್ತಿಯನ್ನು ಮಾಡಿಕೊಡುತ್ತಿದ್ದಾರೆ. ಪೂಜೆಯ ಬಳಿಕ ವಾರಾಹಿ ನದಿಯಲ್ಲಿ ಮಣ್ಣಿನ ಮೂರ್ತಿಯನ್ನು ವಿಸರ್ಜನೆ ಮಾಡಲಾಗುತ್ತದೆ.

-ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next