ದೇವನಹಳ್ಳಿ: ಜಿಲ್ಲೆಯಲ್ಲಿ ಮುಸ್ಲಿಮರು ತ್ಯಾಗ-ಬಲಿದಾನದ ಪ್ರತೀಕವಾದ ಬ್ರಕೀದ್ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ನಗರ ದ ಟಿಪ್ಪು ಸುಲ್ತಾನ್ ಮಸೀದಿಯ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಳಿಕ ನಿರ್ಗತಿಕರು, ಬಡವರಿಗೆ ತಮ್ಮ ಕೈಲಾಗುವ ದಾನ-ಧರ್ಮ ಮಾಡಿ ಸಂತೃಪ್ತರಾದರು.
ಸಾಮೂಹಿಕ ಪ್ರಾರ್ಥನೆಯಲ್ಲಿ ಚಿಣ್ಣರಿಂದ ಹಿಡಿದು ಅತ್ಯಂತ ಹಿರಿಯ ವಯಸ್ಸಿನವರೂ ಪಾಲ್ಗೊಂಡಿದ್ದರು. ಮೌಲ್ವಿಗಳು ನೆರೆದಿದ್ದವರಿಗೆ ಹಿತವಚನ ನುಡಿದರು. ಪ್ರತಿಯೊಬ್ಬರು ಹೊಸ ಹೊಸ ಉಡುವುಗಳೊಂದಿಗೆ, ಸುಗಂಧ ದ್ರವ್ಯ ಹಚ್ಚಿಕೊಂಡು ಎಲ್ಲರೂ ಒಟ್ಟಾಗಿ ಈದ್ಗಾ ಮೈದಾನದಲ್ಲಿ ಜಮಾ ಆಗುತ್ತಾರೆ. ನಂತರ ಪ್ರಾರ್ಥನೆ ಸಲ್ಲಿಸಿ, ಮನೆಗಳಿಗೆ ಹಿಂದುರಿಗೆ ತಂದಿದ್ದ ಪ್ರಾಣಿಯನ್ನು ಅಲ್ಲಹನಿಗೆ ಅರ್ಪಿಸಿ ಅದರಲ್ಲಿ ಮೂರು ಭಾಗ ಮಾಡುವ ಮೂಲಕ ಹಬ್ಬವನ್ನು ಆಚರಿಸುತ್ತಾರೆ.
ಮುಸ್ಲಿಂ ಹಿರಿಯ ಮುಖಂಡ ಮುನಾವರ್ ಮಾತನಾಡಿ, ತ್ಯಾಗ ಬಲಿದಾನದ ಪ್ರತೀಕ ಹಬ್ಬ. ಬಕ್ರೀದ್ ಹಬ್ಬ ವಿಶ್ವದ ಕೋಟ್ಯಂತರ ಮುಸಲ್ಮಾನರ ನೆಚ್ಚಿನ ಹಬ್ಬವಾಗಿದೆ. ಸಾಮೂಹಿಕವಾಗಿ ಪ್ರಾರ್ಥನೆ ನಡೆಸಿ ವಾರ್ಷಿಕ ದುಡಿಮೆ ಇಂತಿಷ್ಟು ಹಣದಲ್ಲಿ ಎಲ್ಲಾ ಸಮುದಾಯದ ಕಡು ಬಡವರಿಗೆ ಅಕ್ಕಿ, ಬಟ್ಟೆ, ಹಣ, ಮಾಂಸ ದಾನ ಮಾಡಿ ಸಾರ್ಥಕವಾಗುವುದು ಸಂಪ್ರದಾಯವಾಗಿದೆ. ನಾಡಿನ ರೈತರು ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಕಾಲಕಾಲಕ್ಕೆ ಮಳೆಯಾಗುವಂತೆ ಅಲ್ಲಾಹ್‌ನಲ್ಲಿ ಪ್ರಾರ್ಥಿಸಿದೆವು ಎಂದು ಹೇಳಿದರು.
ಉತ್ತರ ಕರ್ನಾಟಕದಲ್ಲಿ ಉಂಟಾಗಿರುವ ಪ್ರವಾಹದಿಂದ ಸಿಲುಕಿರುವ ಜನರು ಮತ್ತೇ ಮೊದಲಿನಂತೆ ಜೀವನ ಸಾಗಿಸುವಂತಾಗಲಿ ಎಂದು ಅಲ್ಲಾಹ್‌ನನ್ನು ಪ್ರಾರ್ಥಿಸಿದೆವು. ಇದು ನಮ್ಮ ಪವಿತ್ರ ಹಬ್ಬವಾಗಿರುವುದರಿಂದ ಪ್ರತಿ ಮುಸಲ್ಮಾನರು ಪ್ರತಿ ಮನೆಯಲ್ಲೂ ಹಬ್ಬ ಸಡಗರದಿಂದ ಆಚರಿಸುತ್ತೇವೆ. ಇಸ್ಲಾಮಿಕ್ ಕ್ಯಾಲೆಂಡರ್‌ನಲ್ಲಿ ಕೊನೆಯ ತಿಂಗಳಾದ ದುಲ್‌ಹಜ್‌ನ 10 ದಿನದಂದು ಆಚರಿಸುವ ಬಕ್ರೀದ್ ಧಾರ್ಮಿಕ ಚೌಕಟ್ಟಿನಲ್ಲಿ ಆಚರಿಸುವಂತಹ ಹಬ್ಬವಾಗಿದೆ.
ಚಾರಿತ್ರಿಕ ಹಿನ್ನಲೆಯೊಂದಿಗೆ ಧಾರ್ಮಿಕ ಚೌಕಟ್ಟಿನಲ್ಲಿ ಬಂಧಿಯಾಗಿ ಆಚರಿಸುವ ಈ ಹಬ್ಬ ಸಮಕಾಲೀನ ಜಗತ್ತಿನ ತ್ಯಾಗದ ಸಂದೇಶದೊಂದಿಗೆ ಸಮಾನತೆಯ ಸಂದೇಶ ಸಾರುತ್ತದೆ. ಬಕ್ರೀದ್ ಹಬ್ಬ ಬಲಿಕೊಡುವ ಹಬ್ಬ ಎನ್ನುವುದಕ್ಕಿಂತಲೂ ತ್ಯಾಗ ಬಲಿದಾನದ ಸಂಕೇತವಾಗಿ ಆಚರಿಸುವ ಹಬ್ಬವಾಗಿದೆ ಎಂದು ವಿವರಿಸಿದರು. ಮಾಜಿ ಪುರಸಭೆ ಅಧ್ಯಕ್ಷ ಇಕ್ಬಾಲ್ ಹುಸೇನ್, ಖಲೀಲ್ ಸಾಬ್, ಖಾದರ್ ಪಾಷ, ಆರೀಫ್, ಫಯಾಜ್ ಖಾನ್, ಅಮೀರ್ ಜಾನ್ ಇದ್ದರು.