ಮಂಗಳೂರು/ಉಡುಪಿ: ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ (ಈದುಲ್ ಅಝ್ಹಾ) ಹಬ್ಬವನ್ನು ರವಿವಾರ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾದ್ಯಂತ ಶ್ರದ್ಧಾ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು. ಜುಮಾ ಮಸೀದಿ ಮತ್ತು ಈದ್ಗಾಗಳಲ್ಲಿ ನಮಾಜು ಮತ್ತು ಖುತ್ಬಾ ನೆರವೇರಿತು.
ಮಂಗಳೂರಿನ ಬಾವುಟಗುಡ್ಡೆಯ ಈದ್ಗಾ ಮಸೀದಿಯಲ್ಲಿ ಬಂದರ್ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಲ್‌ಹಾಜ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಅವರ ನೇತೃತ್ವದಲ್ಲಿ, ಉಳ್ಳಾಲ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಅನ್ವರ್ ಅಲಿ ದಾರಿಮಿ ಅವರ ನೇತೃತ್ವದಲ್ಲಿ ಈದ್ ನಮಾಜು ಮತ್ತು ಖುತ್ಬಾ ಪಾರಾಯಣ ನೆರವೇರಿತು.
ಉಡುಪಿ ಜಿಲ್ಲಾ ಸಂಯುಕ್ತ ಜಮಾತಿನ ಕೇಂದ್ರ ಮಸೀದಿಯಾದ ಮೂಳೂರು ಜುಮಾ ಮಸೀದಿಯ ಖತೀಬ್ ಹಾಫೀಳ್ ಅಶ್ರಫ್ ಸಖಾಫಿ ನೇತೃತ್ವದಲ್ಲಿ ವಿಶೇಷ ನಮಾಜು ಮತ್ತು ಖುತ್ಬಾ ಪಾರಾಯಣ ಮಾಡಲಾಯಿತು. ಕುಂದಾಪುರ, ಕಾರ್ಕಳ, ಬೈಂದೂರು, ಹೆಬ್ರಿ, ಕಾಪು ಸೇರಿದಂತೆ ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ನಡೆದ ಹಬ್ಬದ ವಿಶೇಷ ನಮಾಜ್‌ನಲ್ಲಿ ನೂರಾರು ಮಂದಿ ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು. ಕುಂಬಳೆಯ ಸೂರಂಬೈಲು ಮುಹಿಯುದ್ದಿನ್ ಮಸೀದಿ ಸಹಿತ ಕಾಸರಗೋಡು ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದ್ ನಮಾಜು ನಡೆಯಿತು.
ಸಿದ್ದೀಕ್ ಜುಮಾ ಮಸೀದಿ ಮರಕಡ, ಕುಂಜತ್ತಬೈಲ್ ಇಲ್ಲಿನ ಖತೀಬರಾದ ಮೊಹಮ್ಮದ್ ಅನ್ಸಾರ್ ಸಖಾಫಿ ಮುಕ್ವೆ ಅವರ ನೇತೃತ್ವದಲ್ಲಿ ಈದ್ ನಮಾಜು ನಡೆಯಿತು.
ಪಂಪ್‌ವೆಲ್‌ನ ಮಸ್ಜಿದುತ್ತಖ್ವಾ, ಹಂಪನಕಟ್ಟೆಯ ಮಸ್ಜಿದುನ್ನೂರ್, ಸ್ಟೇಟ್‌ಬ್ಯಾಂಕ್‌ನ ಇಬ್ರಾಹಿಂ ಖಲೀಲ್ ಮಸೀದಿ, ಕಂಕನಾಡಿಯ ರಹ್ಮಾನಿಯಾ ಜುಮಾ ಮಸೀದಿ, ಬಂದರ್‌ನ ಕಚ್ಚೀ ಮೇವನ್ ಜುಮಾ ಮಸೀದಿ, ಬಂದರ್ ಕಂದುಕ ಬದ್ರಿಯಾ ಜುಮಾ ಮಸೀದಿ, ಕುದ್ರೋಳಿಯ ಜಾಮೀಯಾ ಜುಮಾ ಮಸೀದಿ, ಬೋಳಾರದ ಮುಹಿಯುದ್ದೀನ್ ಜುಮ್ಮಾ ಮಸೀದಿ, ಬಿಕರ್ನಕಟ್ಟೆಯ ಅಹಸನುಲ್ ಮಸೀದಿ ಸೇರಿದಂತೆ ವಿವಿಧೆಡೆ ಜುಮಾ ಮಸೀದಿ ಮತ್ತು ಈದ್ಗಾಗಳಲ್ಲಿ ನಮಾಜು ಮತ್ತು ಖುತ್ಬಾ ನೆರವೇರಿಸಲಾಯಿತು.
ಈದ್ ನಮಾಜು-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಆ ಬಳಿಕ ಕುಟುಂಬಸ್ಥರು, ಸ್ನೇಹಿತರ ಮನೆಗೆ ತೆರಳಿ ಈದ್ ಶುಭಾಶಯ ಕೋರಿದರು.