ಬಜಪೆ: ಗ್ರಾಮ ಪಂಚಾಯತ್‌ಗಳಲ್ಲಿ ಕಟ್ಟಡ ಹಾಗೂ ಉದ್ಯಮ ಪರವಾನಿಗೆ ಪತ್ರವನ್ನು ಕೈಬರಹ ಮೂಲಕ ನೀಡಲಾಗುತ್ತದೆ. ಆದರೆ ಬಜಪೆ ಗ್ರಾ.ಪಂ. ಕಾಗದ ರಹಿತ ಡಿಜಿಟಲ್ ಸೇವೆಗೆ ಮುಂದಾಗಿದೆ. ಪರವಾನಿಗೆ ಪತ್ರವನ್ನು ಮುದ್ರಿತ ರೂಪದಲ್ಲಿ ನೀಡಲು ಹೊಸ ತಂತ್ರಾಂಶ ಅಳವಡಿಸಿಕೊಂಡಿದೆ.
ಜನರಿಗೆ ಶೀಘ್ರ ಮತ್ತು ಪರಿಪೂರ್ಣ ಸೇವೆಗಳನ್ನು ಸುಲಭ ರೀತಿಯಲ್ಲಿ ನೀಡಲು ಬಜಪೆ ಗ್ರಾ.ಪಂ. ಆದ್ಯತೆ ನೀಡಿದೆ. ಆಡಳಿತಕ್ಕೆ ಆಧುನಿಕ ಸ್ಪರ್ಶ ನೀಡುವುದು, ಸುಲಭ ಸೇವೆಯ ಜತೆಗೆ ಪಾರದರ್ಶಕತೆ ಇದರ ಉದ್ದೇಶ.
ಗ್ರಾ.ಪಂ.ಗಳಲ್ಲಿ ಕಟ್ಟಡ ಹಾಗೂ ಉದ್ಯಮ ಪರವಾನಿಗೆ ಪತ್ರ ಕೈಬರಹ ದಲ್ಲಿ ನೀಡುವುದರಿಂದ ಅವು ಅಳಿಸಿ ಹೋಗುವ ಸಾಧ್ಯತೆ ಇರುತ್ತದೆ. ಅದನ್ನು ಬದಲಾವಣೆ ಮಾಡವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇದಕ್ಕೆ ರಿಜಿಸ್ಟರ್ ಪುಸ್ತಕವನ್ನು ಕೂಡ ನಿರ್ವಹಿಸುವ ಅಗತ್ಯ ಗ್ರಾ.ಪಂ.ಗಿದೆ.
ಆದರೆ ಬಜಪೆ ಗ್ರಾ.ಪಂ. ಈ ಸಮಸ್ಯೆಯನ್ನು ಪರಿಹರಿಸಲು ಪರವಾನಿಗೆ ಪತ್ರವನ್ನು ಮುದ್ರಿತ ರೂಪದಲ್ಲಿ ನೀಡಲು ನಿರ್ಧರಿಸಿದೆ. ಅರ್ಜಿದಾರರು ಸಂಬಂಧಿಸಿದ ದಾಖಲೆಗಳನ್ನು ನೀಡಿದರೆ ಮುದ್ರಿತ ಪರವಾನಿಗೆ ಪತ್ರ ಪಡೆಯಬಹುದು.
ಈ ತಂತ್ರಾಂಶ ಅಳವಡಿಕೆಯಿಂದ ಅರ್ಜಿದಾರನ ಬಳಿಯಿದ್ದ ದಾಖಲೆ ಕಳೆದುಹೋದರೂ ಶುಲ್ಕ ಕಟ್ಟಿದರೆ ಇನ್ನೊಂದು ಪ್ರತಿ ಪಡೆಯಬಹುದು. ಪಂಚಾಯತ್ ಸಿಬಂದಿಗೂ ಕೈ ಬರಹದ ಶ್ರಮ ಕಡಿಮೆಯಾಗಲಿದೆ.
ಅರ್ಜಿದಾರರ ಸಮಯ ಉಳಿತಾಯವಾಗಲಿದೆ. ಪರವಾನಿಗೆದಾರನ ಭಾವಚಿತ್ರ ಸಹಿತ ಪತ್ರ ಸಿಗಲಿದೆ. ನೀಡಿದ ಅರ್ಜಿ ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯಬಹುದು. ಇದಕ್ಕೆ ಮೇಲ್ವಿಚಾರಕ ಅಭಿಯಂತರರ ವಿವರ ನಮೂದಿಸಬೇಕಾಗಿದೆ. ಪ್ರಮಾಣ ಪತ್ರದ ಹಿಂದುಗಡೆ 11 ಶರ್ತ ಹಾಗೂ 4 ವಿಶೇಷ ಶರ್ತಗಳಿಗೆ ಬದ್ಧನಾಗಿರುವ ಬಗ್ಗೆ ಪರವಾನಿಗೆದಾರ ಸಹಿ ಹಾಕಬೇಕಾಗುತ್ತದೆ. ಒಂದು ತಿಂಗಳಲ್ಲಿ, ವರ್ಷದಲ್ಲಿ ಎಷ್ಟು ಪರವಾನಿಗೆಗಳನ್ನು ನೀಡಲಾಗಿದೆ ಎಂದು ಕ್ಷಣಾರ್ಧದಲ್ಲಿ ಹೇಳಬಹುದು. ನೀಡಿದ ಎಲ್ಲ ಪರವಾನಿಗೆಗಳ ಕಾಗದ ರಹಿತ ದಾಖಲೆಗಳು ಪಂಚಾಯತ್ ತಂತ್ರಾಂಶದಲ್ಲಿ ದಾಖಲಾಗಿರುತ್ತವೆ.
ಸರಕಾರಿ ಸೇವೆ ಶೀಘ್ರ ತಲುಪುವ ಉದ್ದೇಶ
ಪಂಚಾಯತ್ ವ್ಯವಸ್ಥೆಯು ಜನರಿಗೆ ಬಹಳ ಹತ್ತಿರದಲ್ಲಿರುವ ಸರಕಾರಿ ವ್ಯವಸ್ಥೆ. ಸರಕಾರಿ ಯೋಜನೆ ಮತ್ತು ಸವಲತ್ತುಗಳು ಪಾರದರ್ಶಕವಾಗಿ ಶೀಘ್ರವಾಗಿ ಜನರಿಗೆ ತಲುಪಿದರೆ, ಪಂಚಾಯತ್‌ನ ಮೇಲಿನ ಗೌರವ ಮತ್ತು ನಂಬಿಕೆ ಉಳಿಯುತ್ತದೆ. ಈ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ, ಜನಸ್ನೇಹಿಯನ್ನಾಗಿಸುವುದು ಪಂಚಾಯತ್ ಆಡಳಿತ ಮಂಡಳಿಯ ಉದ್ದೇಶ.
ಸಾಯೀಶ್ ಚೌಟ ಪಿಡಿಒ, ಬಜಪೆ ಗ್ರಾ.ಪಂ.