Advertisement

ಬಜಪೆ: ಮರ ಉರುಳಿ ಹೊಟೇಲ್‌ ಮಾಲಕ ಸಾವು

12:07 PM May 04, 2017 | Team Udayavani |

ಬಜಪೆ: ಮಂಗಳವಾರ ರಾತ್ರಿ ವೇಳೆ ಸುರಿದ ಗಾಳಿ-ಮಳೆಗೆ ಬಜಪೆ ಪರಿಸರದಲ್ಲಿ ಮರಗಳು ಉರುಳಿ ಬಿದ್ದು ಅಪಾರ ಹಾನಿ ಸಂಭವಿಸಿವೆ. ಎಕ್ಕಾರು ಹುಣ್ಸೆಕಟ್ಟೆ ಸಮೀಪದ ಹೊಟೇಲೊಂದರ ಮೇಲೆ ಆಲದ ಮರ ಬುಡ ಸಹಿತ ಉರುಳಿಬಿದ್ದು ವ್ಯಕ್ತಿಯೋರ್ವರು ಮೃತ ಪಟ್ಟಿದ್ದಾರೆ.

Advertisement

ಹೊಟೇಲ್‌ ಮಾಲಕ ಸುಂದರ ಪೂಜಾರಿ (47) ಮೃತಪಟ್ಟವರು. ಮಂಗಳ ವಾರ ರಾತ್ರಿ ಸುಮಾರು 10 ಗಂಟೆ ವೇಳೆಗೆ ದುರ್ಘ‌ಟನೆ ಸಂಭವಿಸಿದೆ.

ರಾತ್ರಿ ಹೊಟೇಲ್‌ ಮುಚ್ಚಿದ ಬಳಿಕ ಮಾಲಕ ಸುಂದರ ಪೂಜಾರಿ ಅವರು ಪತ್ನಿ, ಓರ್ವ ಪುತ್ರನೊಂದಿಗೆ ಹೊಟೇಲ್‌ನಲ್ಲಿ ಮಲಗಿದ್ದರು. ಆ ಸಮಯದಲ್ಲಿ ಮಿಂಚು, ಗಾಳಿ-ಮಳೆ ಆರಂಭವಾಗಿದ್ದು ಭಾರೀ ಗಾಳಿಗೆ ಬೃಹತ್‌ ಆಲದ ಮರ ಬುಡ ಸಮೇತ‌ ಹೊಟೇಲ್‌ನ ಮೇಲೆ ಉರುಳಿತು. ಇದೇ ವೇಳೆಗೆ ನೀರು ಕುಡಿಯಲೆಂದು ಮಲಗಿದ್ದಲ್ಲಿಂದ ಎದ್ದು ಹೊಟೇಲ್‌ನ ಎದುರು ಭಾಗಕ್ಕೆ ಬಂದಿದ್ದ ಸುಂದರ ಪೂಜಾರಿ ಅವರು ಮರ ಹಾಗೂ ಕಲ್ಲುಗಳ ಅಡಿಯಲ್ಲಿ ಸಿಲುಕಿಕೊಂಡರು.

ಪತ್ನಿ ಶಶಿಕಲಾ ಮತ್ತು ಪುತ್ರ ವಿಕೇಶ್‌ ಅವರು ಮರ ಬೀಳುತ್ತಿದ್ದಂತೆ ಹೊಟೇಲಿನಿಂದ ಹಿಂಬದಿಯಿಂದ ಹೊರಗೆ ಓಡಿಬಂದು ಪಾರಾದರು.

ಶಶಿಕಲಾ ಅವರ ತಲೆಗೆ ಸ್ವಲ್ಪ ಏಟು ಬಿದ್ದಿದೆ. ತತ್‌ಕ್ಷಣ ಧಾವಿಸಿ ಬಂದ ಪರಿಸರದ ಮಂದಿ ಸುಂದರ ಅವರಿ ಗಾಗಿ ಹುಡುಕಾಡಿದರು. ಕಲ್ಲು ಹಾಗೂ ಮರದಡಿಯಲ್ಲಿ ಸಿಲುಕಿಕೊಂಡಿದ್ದ ಅವರನ್ನು ಪತ್ತೆಹಚ್ಚಲು ಸ್ವಲ್ಪ ಸಮಯವೇ ಬೇಕಾಯಿತು. ಬಳಿಕ ಹರ ಸಾಹಸಪಟ್ಟು ಅವರನ್ನು ಹೊರಗೆ ತೆಗೆದು ಕಾರಿನಲ್ಲಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಯಿತಾ ದರೂ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ದಾರಿಯ ನಡುವೆಯೇ ಕೊನೆಯುಸಿರೆಳೆದಿದ್ದರು.ಮೃತ ಸುಂದರ ಪೂಜಾರಿ ಅವರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಆಗಲಿದ್ದಾರೆ. 

Advertisement

ನೆರಳು ನೀಡುತ್ತಿದ್ದ ಮರ…
ಆಲದ ಮರದ ರಂಬೆಗಳು ಉದ್ದ ವಾಗಿ ಬೆಳೆದು ಸುತ್ತಲೂ ಹರಡಿಕೊಂಡಿತ್ತು. ನೆರಳು ನೀಡುತ್ತಿದ್ದ ಮರವನ್ನು ಯಾರೂ ಕಡಿಯುವ ಗೋಜಿಗೆ ಹೋಗಿರಲಿಲ್ಲ. ರಂಬೆಗಳು ವಿಶಾಲವಾಗಿ ಹರಡಿಕೊಂಡಿದ್ದರಿಂದ ಭಾರೀ ಗಾಳಿಗೆ ಸಿಲುಕಿ ಬುಡ ಸಮೇತ ಉರುಳಿ ಅವಘಡಕ್ಕೆ ಕಾರಣವಾಯಿತು ಎಂದು ಪರಿಸರದ ನಿವಾಸಿಗಳು ಹೇಳಿತ್ತಾರೆ. ಘಟನೆಯಲ್ಲಿ ವಿದ್ಯುತ್‌ ತಂತಿಗಳು ಕಡಿದು ಬಿದ್ದಿವೆ.

ಹಲವೆಡೆ ಹಾನಿ
ಮಂಗಳವಾರ ರಾತ್ರಿ ಸುರಿದ ಗಾಳಿ – ಮಳೆಯಿಂದಾಗಿ ಎಕ್ಕಾರಿನ ಹಲವೆಡೆ ಮರಗಳು ಉರುಳಿ ಹಾನಿ ಸಂಭವಿಸಿದೆ. ಸಮೀಪದ ವಿನೋದ್‌ ಸಾಲ್ಯಾನ್‌ ಅವರ ಮನೆಯ ಮೇಲೆ ಮುರಿದು ಬಿದ್ದು ಹಾನಿಯಾಗಿದೆ. ತಾಂಗಾಡಿಯಲ್ಲಿ ಮರಗಳು ಬಿದ್ದು ವಿದ್ಯುತ್‌ ತಂತಿಗಳು ಕಡಿದಿವೆ. ಪೆರ್ಮುದೆ ರಯ್ನಾನ ಹಾಲ್‌ ಸಮೀಪ ಮರ ಬಿದ್ದು ವಿದ್ಯುತ್‌ ಕಂಬ ತುಂಡಾಗಿ ತಂತಿಗಳು ನೆಲಕ್ಕೆ ಬಿದ್ದಿವೆ. ಕರಂಬಾರಿನಲ್ಲಿಯೂ ಮರ ಬಿದ್ದು ವಿದ್ಯುತ್‌ ತಂತಿ ತುಂಡಾಗಿದೆ.ರಾತ್ರಿ ಗಸ್ತಿನಲ್ಲಿದ್ದ ಬಜಪೆ ಪೊಲೀಸರು ರಸ್ತೆಯಲ್ಲಿ ಬಿದ್ದ ಮರಗಳನ್ನು ಕಡಿದು ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸುಂದರ ಪೂಜಾರಿ ಅವರು ಕೆಲವು ವರ್ಷದಿಂದ ಈ ಹೊಟೇಲ್‌ ವ್ಯವಹಾರ ನಡೆಸುತ್ತಿದ್ದಾರೆ. ಎಕ್ಕಾರು ಪಂಚಾಯತ್‌ ಎದುರಿನ ಪಳ್ಳದಕೋಡಿಯಲ್ಲಿ ಸ್ವಂತ ಮನೆ ಇದ್ದರೂ ರಾತ್ರಿ ವೇಳೆ ಪತ್ನಿ, ಪುತ್ರನೊಂದಿಗೆ ಹೊಟೇಲ್‌ನಲ್ಲಿಯೇ ಮಲಗುತ್ತಿದ್ದರು. ಅವರ ಇನ್ನೋರ್ವ ಪುತ್ರ ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next