ಬಜಪೆ: ಬಜಪೆ ಹದಗೆಟ್ಟ ರಾಜ್ಯ ಹೆದ್ದಾರಿಯಿಂದ ವಾಹನ ಸಂಚಾರಕ್ಕೆ ಹಾಗೂ ಪಾದಚಾರಿಗಳಿಗೆ ಅಪಾಯದ ಪರಿಸ್ಥಿತಿ ಎದುರಾಗುತ್ತಿದೆ. ಅಪಘಾತಕ್ಕೆ ಕಾರಣವಾಗುತ್ತಿದೆ. ಪಾದಚಾರಿಗಳಿಗೆ, ಶಾಲಾ ಮಕ್ಕಳಿಗೆ ಕೆಸರು ನೀರು ಸಿಂಪಡಣೆ ಯಾಗುವುದರ ಬಗ್ಗೆ ‘ಹದಗೆಟ್ಟ ರಾಜ್ಯ ಹೆದ್ದಾರಿ ಸಂಚಾರ ದುಸ್ತರ’ ಉದಯವಾಣಿ ಸುದಿನ ವರದಿ ಪ್ರಕಟಿಸಿತ್ತು.
ಇದೀಗ ವರದಿಗೆ ಸ್ಪಂದನೆ ದೊರೆತಿದೆ. ಹೊಂಡಗಳಿಗೆ ತೇಪೆ ಕಾರ್ಯ ಆರಂಭವಾಗಿದೆ.ಹೊಂಡಗಳಿಗೆ ಶೀಘ್ರ ತೇಪೆ ಕಾರ್ಯವಾದರೂ ನಡೆಯಲಿ ಎಂದು ತಿಳಿಸಿತ್ತು.
ಇಲಾಖೆ ಇದಕ್ಕೆ ಸ್ಪಂದಿಸಿ ಬೆಳಗ್ಗೆ ಟಿಪ್ಪರ್ ಮೂಲಕ ಜಲ್ಲಿಕಲ್ಲು ಮಿಶ್ರಣವನ್ನು ತಂದು ಹೊಂಡ ಬಿದ್ದಲ್ಲಿ ತುಂಬಿಸುವ ಕಾರ್ಯಕ್ಕೆ ಶುರು ಮಾಡಿದೆ. ಬಜಪೆ ವ್ಯವಸಾಯ ಸೇವಾ ಸಹ ಕಾರಿ ಬ್ಯಾಂಕ್ ಎದುರುಗಡೆ ಹಾಗೂ ಬಸ್ ನಿಲ್ದಾಣದ ಎದುರಿನ ರಸ್ತೆ ಸಂಪರ್ಕಿಸುವಲ್ಲಿ, ಮಾರುಕಟ್ಟೆ ಅಂಗಡಿ ಎದುರು ಮಧ್ಯಾಹ್ನ ತನಕ ಹೊಂಡಗಳ ಮುಚ್ಚುವ ಕಾರ್ಯ ನಡೆದಿದೆ.
ಇದರಿಂದ ದೊಡ್ಡ ಹೊಂಡಗಳು ಕೊಂಚ ಸುಧಾರಣೆ ಕಂಡಿದೆ. ಲಘುವಾಹನ ಹಾಗೂ ದ್ವಿಚಕ್ರ ವಾಹನಗಳಿಗೆ ಸಂಚಾರ ಕೊಂಚ ಸುಧಾರಣೆಯಾಯಿತು. ಹೊಂಡಗಳಿಗೆ ನೀರು ನಿಲ್ಲುವುದಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮಳೆಗೆ ಜಲ್ಲಿಕಲ್ಲು ಮಿಶ್ರಣ ರಸ್ತೆಯಲ್ಲಿ ಎಷ್ಟು ದಿನ ನಿಲ್ಲುತ್ತದೆ ಎಂಬುವುದು ಕಾದುನೋಡಬೇಕಾಗಿದೆ.
ಬಜಪೆ ವಾಹನ ಸಂಚಾರಕ್ಕೆ ತಾತ್ಕಾಲಿಕ ಸಮಾಧಾನ ಸಿಕ್ಕಿದೆ. ವಾಹನಗಳ ವೇಗವೂ ಕೊಂಚ ಸುಧಾರಣೆ ಕಂಡಿದೆ. ನಿನ್ನೆ ತನಕ ಕಾಣುವಷ್ಟು ಟ್ರಾಫಿಕ್ ಜಾಮ್ ಬುಧವಾರ ಕಂಡು ಬಂದಿಲ್ಲ.