Advertisement

ಬಜಪೆ -ಕೈಕಂಬ ರಾಜ್ಯ ಹೆದ್ದಾರಿಯಲ್ಲಿ ಹೊಂಡ; ಸಂಚಾರ ದುಸ್ತರ

10:49 PM Mar 15, 2021 | Team Udayavani |

ಬಜಪೆ: ಬಜಪೆ-ಕೈಕಂಬ ರಾಜ್ಯ ಹೆದ್ದಾರಿ 101ರಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ರಸ್ತೆ ಡಾಮರು ಕಾಮಗಾರಿ ಕಳಪೆ ಮಟ್ಟದಾಗಿದ್ದು, ಇದರಿಂದಾಗಿ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಹೊಂಡಗಳು ಬೀಳಲು ಆರಂಭವಾಗಿವೆ.

Advertisement

ಕಾಮಗಾರಿ ವೇಳೆ ಒಂದೇ ಬಾರಿ ಡಾಮರು ಕಾಮಗಾರಿ ನಡೆದಿದ್ದು ಹೀಗಾಗಿ ರಸ್ತೆಯ ಒಂದೆಡೆ ತಗ್ಗುಗಳು ಕಾಣುತ್ತಿವೆ. ಅದರ ಪೂರ್ಣ ಕಾಮಗಾರಿ ನಡೆದಿಲ್ಲ ಎನ್ನುವುದು ಸಾರ್ವಜನಿಕರ ದೂರು.

ಬಜಪೆ -ಪೆರ್ಮುದೆ ರಾಜ್ಯ ಹೆದ್ದಾರಿ 67ರ ಡಾಮರು ಕಾಮಗಾರಿ ಇದೇ ಸಮಯದಲ್ಲಿ ನಡೆದಿದ್ದು ಆ ಕಾಮಗಾರಿಗೆ ಈ ಕಾಮಗಾರಿಯನ್ನು ಹೋಲಿಸಿದಾಗ ಬಜಪೆ-ಕೈಕಂಬ ರಾಜ್ಯ ಹೆದ್ದಾರಿ ಡಾಮರು ಕಾಮಗಾರಿಯಲ್ಲಿ ವ್ಯತ್ಯಾಸ ಕಾಣಬಹುದಾಗಿದೆ. ಈ ಕಳಪೆ ಕಾಮಗಾರಿ ಬಗ್ಗೆ ಸಾರ್ವಜನಿಕರು ಪೊಲೀಸ್‌ ಇಲಾಖೆಗೆ ದೂರು ನೀಡಿದ್ದಾರೆ.

ಬಜಪೆ -ಪೆರ್ಮುದೆ ರಾಜ್ಯ ಹೆದ್ದಾರಿ 67 ಕಾಮಗಾರಿ ಮೂಡುಬಿದಿರೆ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಾದರೆ, ಬಜಪೆ -ಕೈಕಂಬ ರಾಜ್ಯ ಹೆದ್ದಾರಿ 101 ಈ ಕಾಮಗಾರಿ ಬಜಪೆ ಪೊಲೀಸ್‌ ಠಾಣೆಯವರೆಗೆ ಮೂಡುಬಿದಿರೆ ಬಾಕಿ ರಸ್ತೆ ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

Advertisement

ಶಾಲೆಯ ಎದುರು ರಾಶಿಬಿದ್ದ ಜಲ್ಲಿಕಲ್ಲು
ರಸ್ತೆಯ ತೇಪೆ ಕಾರ್ಯಕ್ಕೆ ಕಿನ್ನಿಕಂಬಳ ಸರಕಾರಿ ಶಾಲೆಯ ಎದುರು ಜಲ್ಲಿಕಲ್ಲು ರಾಶಿ ಬಿದ್ದು ಸುಮಾರು 8 ತಿಂಗಳುಗಳೇ ಕಳೆದರೂ ಕಾಮಗಾರಿ ಆರಂಭವಾಗದೇ ಇರುವುದರಿಂದ ಶಾಲೆಯ ಪರಿಸರದಲ್ಲಿ ವಾಹನ ಸಂಚಾರಕ್ಕೆ ಮತ್ತು ಶಾಲಾ ವಿದ್ಯಾರ್ಥಿಗಳಿಗೆ ತೊಂದರೆಯಾಗಿ ಪರಿಣಮಿಸಿದೆ. ಪೊಲೀಸ್‌ ಇಲಾಖೆ ಮತ್ತು ಸ್ಥಳೀಯ ಗ್ರಾ.ಪಂ.ಗೆ ಸಾರ್ವಜನಿಕರು ಜಲ್ಲಿಕಲ್ಲು ತೆರವುಗೊಳಿಸಲು ದೂರು ನೀಡಿದ್ದಾರೆ. ಆದರೆ ಈವರೆಗೂ ಜಲ್ಲಿಕಲ್ಲು ತೆರವುಗೊಳಿಸದ ಕಾರಣ ಇತ್ತೀಚೆಗೆ ಒಂದೆರೆಡು ಅಘಘಾತಗಳು ಸಂಭವಿಸಿವೆ. ಹೀಗಾಗಿ ಶಾಲೆ ಮಕ್ಕಳು ಭಯದಿಂದಲೇ ಸಂಚರಿಸುವಂತಾಗಿದೆ.

ಎ. 20ರೊಳಗೆ ಹೊಂಡಕ್ಕೆ ತೇಪೆಯ ಭರವಸೆ
ಗುತ್ತಿಗೆದಾರರು ಈವರೆಗೆ ಒಂದು ಹಂತದ ಡಾಮರು ಕಾಮಗಾರಿ ಮಾಡಿ ಅನಂತರ ಯಾವುದೇ ಕಾಮಗಾರಿ ಮಾಡಿರುವುದಿಲ್ಲ. ಇಲಾಖೆಯಿಂದ ಈ ರಸ್ತೆಯಲ್ಲಿ ಯಾವುದೇ ಕಾಮಗಾರಿ ನಡೆಯುತ್ತಿಲ್ಲ. ಸರಕಾರದ ಅನುಮತಿ ಇಲ್ಲದೇ ನಮಗೆ ಏನೂ ಮಾಡಲು ಹಕ್ಕಿಲ್ಲ. ಹೊಂಡ ಬಿದ್ದಿದೆ ಆದರೆ ಅಲ್ಲಿ ಯಾವುದೇ ಕಾಮಗಾರಿಯನ್ನು ಮಾಡುವಂತಿಲ್ಲ. ನಾವು ನಮ್ಮ ಗುತ್ತಿಗೆದಾರರರಿಂದ ಕಿನ್ನಿಕಂಬಳದಲ್ಲಿ ಜಲ್ಲಿ ಹಾಕಿಲ್ಲ. ಜಲ್ಲಿಯಿಂದ ರಸ್ತೆಗೆ ಅಡಚಣೆ ಆಗುವುದಾದರೆ ಕೂಡಲೇ ತೆಗೆಯಲು ಸೂಚಿಸಲಾಗುವುದು. ಈ ರಸ್ತೆಯ ಬಗ್ಗೆ ಈ ತಿಂಗಳ ಕೊನೆಗೆ ಆ ಬಗ್ಗೆ ತೀರ್ಮಾನ ಆಗುತ್ತದೆ. ಎ. 20ರೊಳಗೆ ರಸ್ತೆಯ ಪೂರ್ಣ ತೇಪೆ ಕಾಮಗಾರಿಯನ್ನು ಮಾಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ರತ್ನಾಕರ್‌ ತಿಳಿಸಿದ್ದಾರೆ.

ಗುತ್ತಿಗೆದಾರರ ಮೇಲೆ ಕ್ರಮ
ಬಜಪೆ -ಕೈಕಂಬ 101 ರಾಜ್ಯ ಹೆದ್ದಾರಿಯಲ್ಲಿ ಇಲಾಖೆ ಹಾಗೂ ಗುತ್ತಿಗೆದಾರರಿಂದ ಯಾವುದೇ ಕಾಮಗಾರಿಗಳು ನಡೆಯುತ್ತಿಲ್ಲ. ಅ ರಸ್ತೆಯ ಟೆಂಡರ್‌ ಗುತ್ತಿಗೆದಾರರು ಕೆಲಸ ಮಾಡದೇ ಮೂರ್‍ನಾಲ್ಕು ವರ್ಷಗಳು ಆಯಿತು. ಈ ಬಗ್ಗೆ ಗುತ್ತಿಗೆದಾರರಿಗೆ ಈಗಾಗಲೇ ಹಲವು ಬಾರಿ ಸೂಚನೆ ನೀಡಿದ್ದು, ಒಂದು ವರ್ಷದಿಂದ ಅದರ ಪ್ರಕ್ರಿಯೆ ನಡೆಯುತ್ತಾ ಇದೆ. ಈಗ ಕೊನೆಯ ಸೂಚನೆ ನೀಡಲಾಗಿದೆ. ಆ ಕಾಮಗಾರಿಯಲ್ಲಿ ಇಲಾಖೆ ಯಾವುದೇ ಕಾರ್ಯ ಮಾಡಲು ಸಾಧ್ಯವಿಲ್ಲ. ಈಗಾಗಲೇ ಗುತ್ತಿಗೆದಾರರ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ.
-ರತ್ನಾಕರ್‌, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಮಂಗಳೂರು

ಹೊಂಡಮಯವಾದ ಬಜಪೆ- ಕೈಕಂಬ ರಾಜ್ಯ ಹೆದ್ದಾರಿ
ಬಜಪೆ -ಕೈಕಂಬ ರಾಜ್ಯ ಹೆದ್ದಾರಿಯಲ್ಲಿ ಅಲ್ಲಲ್ಲಿ ಹೊಂಡಗಳಿದ್ದು ಅಪಘಾತಕ್ಕೆ ಕಾರಣವಾಗಿದೆ. ಬಜಪೆ ಪೊಲೀಸ್‌ ಠಾಣೆಯ ಎದುರು, ನವರಂಗ್‌ ಕಂಪೌಂಡ್‌ ಎದುರು, ಪೆರಾರ ಪಂಚಾ ಯತ್‌ ಪುಚ್ಚಳದಲ್ಲಿ ಹೊಂಡಗಳು ಬಿದ್ದಿವೆ. ರಸ್ತೆಯಲ್ಲಿ ಡಾಮರು ಕಾಮಗಾರಿ ಸಮರ್ಪಕವಾಗದೇ ದೊಡ್ಡ ದೊಡ್ಡ ಹೊಂಡಗಳು ಕಾಣುತ್ತಿವೆ. ಈಗಾಗಾಲೇ ಗ್ರಾಮಸ್ಥರು ಗ್ರಾಮ ಪಂಚಾಯತ್‌, ಮತ್ತು ಪೊಲೀಸ್‌ ಜನಸಂಪರ್ಕ ಸಭೆಯಲ್ಲಿಯೂ ಈ ಬಗ್ಗೆ ದೂರು ನೀಡಿದ್ದಾರೆ.

– ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next