Advertisement

ಬಜಪೆ:ಬೆಂಡೆ ಬೆಳೆದ ರೈತರು ಸಂಕಷ್ಟದಲ್ಲಿ; ಹಳದಿ ರೋಗ ಬಾಧೆ; ಮಾರುಕಟ್ಟೆ ಗೊಂದಲ: ನಷ್ಟದ ಭೀತಿ

06:36 PM Jul 30, 2020 | mahesh |

ಬಜಪೆ: ತರಕಾರಿಗಳ ರಾಣಿ ಬೆಂಡೆ ತರಕಾರಿ ಬೆಳೆಗೆ ಬಜಪೆ ಪ್ರಸಿದ್ಧಿ ಪಡೆದಿದೆ. ಈ ಬಾರಿ ಇಲ್ಲಿನ ಹೆಚ್ಚಿನ ರೈತರು ಬೆಂಡೆ ಬೆಳೆದಿದ್ದು, ಈಗಾಗಲೇ ಗಿಡಗಳು ಹೂ ಬಿಟ್ಟಿವೆ. ಆದರೆ ಕೊರೊನಾ ಹಾವಳಿಯಿಂದಾಗಿ ಮಾರುಕಟ್ಟೆಯ ಬಗ್ಗೆ ಗೊಂದಲವಿರುವ ನಡುವೆಯೇ ಬೆಂಡೆ ಗಿಡಕ್ಕೆ ಹಳದಿ ರೋಗ (ಎಲ್ಲೋ ವೇನ್‌ ಮೊಸಾಯಿಕ್‌ ವೈರಸ್‌) ಕಾಣಿಸಿರುವುದು ರೈತರನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದೆ.

Advertisement

ಬಜಪೆ ವ್ಯಾಪ್ತಿಯ ಅಡ್ಕಬಾರೆ, ಹಳೆ ವಿಮಾನ ನಿಲ್ದಾಣ ಪ್ರದೇಶ ಸ್ವಾಮಿಲ ಪದವು, ಸುಂಕದಕಟ್ಟೆ ಪ್ರದೇಶದಲ್ಲಿ ರೈತರು ಅಧಿಕ ಪ್ರಮಾಣದಲ್ಲಿ ಬೆಂಡೆ ಬೆಳೆದಿದ್ದಾರೆ.
ಒಂದೇ ಜಾತಿಯ ತರಕಾರಿ ಗಿಡಗಳನ್ನು ಒಂದೆಡೆ ಬೆಳೆಸುವುದು ಈ ರೋಗ ಬರಲು ಪ್ರಮುಖ ಕಾರಣ. ಅದಕ್ಕಾಗಿ ಹೀರೆ, ತೊಂಡೆ, ಸೌತೆ ಸಹಿತ ವಿವಿಧ ರೀತಿಯ ತರಕಾರಿಗಳನ್ನು ಕೂಡ ಬೆಳೆಸಬೇಕು. ಬೇಸಗೆಯಲ್ಲಿ ಗದ್ದೆ ಉಳುಮೆ ಮಾಡಿ ಬಿಸಿಲು ಬೀಳಲು ಬಿಡಬೇಕು. ಆಗ ವೈರಸ್‌ಗಳು ಸಾಯುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಕ್ರೆ ಪ್ರದೇಶದಲ್ಲಿ ಬೆಳೆದಿರುವ ಬೆಂಡೆಗೆ ಹಳದಿ ರೋಗ ತಗಲಿ ತುಂಬಾ ನಷ್ಟವಾಗಿದೆ. ಬೆಂಡೆ ಜತೆ ಹೀರೆ, ಮುಳ್ಳುಸೌತೆಯನ್ನು ಕೂಡ ಬೆಳೆಸಲಾಗಿದೆ. ಮಾರುಕಟ್ಟೆಯ ಅನಿಶ್ಚಿತತೆ, ವಿಜೃಂಭಣೆಯ ಅಷ್ಟಮಿ, ಚೌತಿ ಆಚರಣೆ ಇಲ್ಲದಿರುವುದರಿಂದ ಉತ್ತಮ ಬೆಲೆ ಸಿಗುವುದು ಕಷ್ಟ. ಆದ್ದರಿಂದ ಈ ಬಾರಿ ನಾವು ನಷ್ಟ ಅನುಭವಿಸಬೇಕಾಗುತ್ತದೆ ಎನ್ನುತ್ತಾರೆ ಬಜಪೆ ಅಡ್ಕಬಾರೆಯ ಕೃಷಿಕ ರಿಚಾರ್ಡ್‌ ಡಿ’ಸೋಜಾ.

ನಾಗರಪಂಚಮಿಗೆ ಕಾಣಸಿಗದ ಬೆಂಡೆ
ಪ್ರತಿ ನಾಗರ ಪಂಚಮಿ ಹಬ್ಬಕ್ಕೆ ಬೆಂಡೆ ಮಾರುಕಟ್ಟೆಗೆ ಬರಲು ಆರಂಭವಾಗುತ್ತದೆ. ಆದರೆ ಈ ಬಾರಿ ಹಳದಿ ರೋಗ ಬಾಧೆ, ಹವಾಮಾನ ವೈಪ್ಯರೀತದಿಂದ ತರಕಾರಿಗೆ ಬೆಳೆಗೆ ದೊಡ್ಡ ಹೊಡೆತ ಬಿದ್ದಿದೆ. ಹಾಗಾಗಿ ನಾಗರ ಪಂಚಮಿ ವೇಳೆಗೆ ಬೆಂಡೆ ಮಾರುಕಟ್ಟೆ ಪ್ರವೇಶಿಸಿಲ್ಲ. ಕಳೆದ ಬಾರಿ ನಾಗರಪಂಚಮಿ, ಅಷ್ಟಮಿ, ಚೌತಿ ಹಬ್ಬಕ್ಕೆ ಬೆಂಡೆಯ ದರ ಸುಮಾರು ಕೆ.ಜಿ.ಗೆ 200 ರೂ. ಇತ್ತು. ಮಂಗಳವಾರ ಬಜಪೆಯ ಕೆಲವು ಅಂಗಡಿಗಳಿಗೆ ಬೆಂಡೆ ಸ್ವಲ್ಪ ಪ್ರಮಾಣದಲ್ಲಿ ಬಂದಿದ್ದು, ಕೆ.ಜಿ.ಗೆ 120 ರೂ.ಗೆ ಮಾರಾಟವಾಗುತ್ತಿದೆ. ಅದರೆ ಕೃಷಿಕನಿಗೆ ಸಿಗುವುದು ಕೆ.ಜಿ.ಗೆ 70 ರೂಪಾಯಿ ಮಾತ್ರ.

ಬೆಂಡೆಕಾಯಿ ಬೆಳೆಗೆ ಔಷಧ ಸಿಂಪಡಣೆ
ಬೆಂಡೆ ಬೆಳೆಗೆ ಬರುವ ಹಳದಿ ಕಾಯಿಲೆಯು ಬಿಳಿ ನೊಣಗಳಿಂದ ಹರಡುವ ಒಂದು ವೈರಸ್‌ ರೋಗವಾಗಿದೆ. ಆರಂಭಿಕ ಹಂತದಲ್ಲಿ ರೋಗಬಾಧಿತ ಗಿಡಗಳನ್ನು ಕಿತ್ತು ಸುಡುವುದು, ಕೀಟಗಳ ನಿಯಂತ್ರಣಕ್ಕಾಗಿ 1.5 ಮಿ.ಲೀ. ಟ್ರೈಜೋಫಾಸ್‌ ಪ್ರತೀ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅವಶ್ಯವಿದ್ದಲ್ಲಿ 15 ದಿವಸಗಳ ಅನಂತರ ಮತ್ತೆ ಸಿಂಪಡಣೆ ಮಾಡಬಹುದು. ಸಾವಯವ ಬಳಸುವುದಿದ್ದರೆ 5 ಮಿ.ಲೀ. ಬೇವಿನ ಎಣ್ಣೆ +1/2 ಪ್ಯಾಕೇಟ್‌ ಶ್ಯಾಂಪು ಅಥವಾ ಸೋಪ್‌ ನೀರನ್ನು ಒಂದು ಲೀಟರ್‌ ನೀರಿಗೆ ಹಾಕಿ ಗಿಡಗಳಿಗೆ ಸಿಂಪಡಣೆ ಮಾಡಬಹುದು. ಮಾಹಿತಿಗೆ ಮಂಗಳೂರು ತೋಟಗಾರಿಕೆ ವಿಷಯತಜ್ಞ ರಿಶಲ್‌ ಡಿ’ಸೋಜಾ ಅವರನ್ನು ಸಂಪರ್ಕಿಸಬಹುದು. ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

Advertisement

ಮುಂಜಾಗ್ರತೆ ಅಗತ್ಯ
ಬೆಂಡೆಯಲ್ಲಿ ಹಳದಿ ಬಣ್ಣದ ಗಿಡ ಕಾಣಿಸಿದಾಗಲೇ ಕಿತ್ತು ಬಿಸಾಡಬೇಕು. ಎಲ್ಲೋ ವೇನ್‌ ಮೊಸಾಯಿಕ್‌ ವೈರಸ್‌ ನಿಯಂತ್ರಿಸಲು ಗಿಡ ಮೊಳಕೆಯೊಡೆದ ಆರಂಭದಲ್ಲಿಯೇ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಅದಕ್ಕಾಗಿ ಹಳದಿ ಬಣ್ಣದ ಪ್ಲಾಸ್ಟಿಕ್‌ ಕಾರ್ಡ್‌ ಗೆ ಎಣ್ಣೆ ಸವರಿ ಹೊಲದ ನಾಲ್ಕೈದು ಕಡೆ ತೂಗು ಹಾಕಬೇಕು. ಕೀಟಗಳು ಅದಕ್ಕೆ ಅಂಟಿಕೊಳ್ಳುವುದರಿಂದ ಬಾಧೆಯನ್ನು ತಡೆಯಬಹುದಾಗಿದೆ. ಅಲ್ಲದೆ ಹೆಸರಘಟ್ಟದ ಭಾರತೀಯ ಕೃಷಿ ಸಂಶೋಧನೆ ಕೇಂದ್ರದ ಅರ್ಕ ಅನಾಮಿಕ ಹಾಗೂ ಅರ್ಕ ಅಭಯ್‌ ಎಂಬ ರಾಸಾಯನಿಕಗಳನ್ನು ಸಿಂಪಡಿಸಬಹುದು.
– ಯುಗೇಂದ್ರ, ಸಹಾಯಕ ತೋಟಗಾರಿಕೆ ಅಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next