Advertisement

Bajpe ಬಸ್‌ ನಿಲ್ದಾಣ ಕಟ್ಟಡ ಪೂರ್ಣ;  90 ಲಕ್ಷ ರೂ. ವೆಚ್ಚದಲ್ಲಿ  ನಿರ್ಮಾಣ

01:13 PM Sep 19, 2024 | Team Udayavani |

ಬಜಪೆ: ಪೌರಾಡಳಿತ ನಿರ್ದೇಶನಾಲಯ ಮತ್ತು ಜಿಲ್ಲಾಡಳಿತ ಹಾಗೂ ಬಜಪೆ ಪಟ್ಟಣ ಪಂಚಾಯತ್‌ ಸಹಯೋಗದೊಂದಿಗೆ ಸಿಎಂ ಅಮೃತ ನಗರೋತ್ಥಾನ ಯೋಜನೆಯಡಿ 90 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಿಸಲಾದ ಬಜಪೆ ಕೇಂದ್ರ ಬಸ್‌ ನಿಲ್ದಾಣ ಕಾಮಗಾರಿ ಪೂರ್ಣಗೊಂಡಿದೆ. ಬಸ್‌ ನಿಲ್ದಾಣದ ಕಟ್ಟಡದಲ್ಲಿರುವ ಒಂಬತ್ತು ಅಂಗಡಿ ಕೋಣೆಗಳ ಹರಾಜು ಪ್ರಕ್ರಿಯೆ ತಿಂಗಳ ಒಳಗೆ ನಡೆಯಲಿದೆ.

Advertisement

2023ರ ಫೆ. 28ರಂದು ಶಾಸಕ ಉಮಾನಾಥ ಕೋಟ್ಯಾನ್‌ ಅವರು ಕಟ್ಟಡ ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಿ ದ್ದರು. ಹಳೆಯ ಬಸ್‌ ನಿಲ್ದಾಣದ ಹಿಂದುಗಡೆ ಇರುವ ಈ ಹೊಸ ನಿಲ್ದಾಣದಿಂದ ಹೆಚ್ಚು ಬಸ್‌ಗಳಿಗೆ ನಿಲ್ಲುವ ಸ್ಥಳಾವಕಾಶ ಸಿಗಲಿದೆ. ಬಸ್‌ ನಿಲ್ದಾಣ ಎದುರುಗಡೆ ಇಂಟರ್‌ಲಾಕ್‌ ಹಾಗೂ ಕಾಂಕ್ರೀಟ್‌ಕಾಮಗಾರಿ ನಡೆಸಲಾಗಿದೆ.

ಅಂಗವಿಕಲರಿಗೆ ಶೌಚಾಲಯ
ಈ ಬಸ್‌ ನಿಲ್ದಾಣ ಕಟ್ಟಡದ ಮಧ್ಯೆ ಅಂಗವಿಕಲರಿಗಾಗಿ ಶೌಚಾಲಯ ನಿರ್ಮಾ ಣವಾಗಲಿದ್ದು ಟೆಂಡರ್‌ ಈಗಾಗಲೇ ಮುಗಿದಿದೆ. ಬಜಪೆ ಪೇಟೆಯಲ್ಲಿ ಈಗಾಗಲೇ ಒಂದು ಸಾರ್ವಜನಿಕ ಶೌಚಾಲಯ ಇರುವುದರಿಂದ ನಿಲ್ದಾಣದಲ್ಲಿ ಶೌಚಾಲಯ ನಿರ್ಮಿಸಿಲ್ಲ. ಆದರೆ, ಇದು ಸ್ವಲ್ಪ ದೂರದಲ್ಲಿರುವುದರಿಂದ ಅಂಗವಿಕಲರ ಅನುಕೂಲಕ್ಕಾಗಿ ಬಸ್‌ ನಿಲ್ದಾಣದ ಪಕ್ಕದಲ್ಲೇ ಹೊಸ ಶೌಚಾಲಯ ನಿರ್ಮಾಣ ಆಗಲಿದೆ.

ಬಜಪೆಯನ್ನು ಹೈಟೆಕ್‌ಸಿಟಿ ಮಾಡುವ ಇರಾದೆ ಯೊಂದಿಗೆ ಬಸ್‌ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಶಾಸಕ ಉಮಾನಾಥ ಕೋಟ್ಯಾನ್‌ ಯೋಜನೆ ರೂಪಿಸಿದ್ದರು. ಪೇಟೆಯಲ್ಲಿ ರಸ್ತೆ ಕಾಂಕ್ರೀಟ್‌ ಕಾಮಗಾರಿಯೂ ನಡೆಯುತ್ತಿದ್ದು ಇನ್ನೂ ಹಲವಾರು ಯೋಜನೆಗಳು ಇವೆ.

ಹರಾಜು ಬಗ್ಗೆ ಭಾರೀ ಕುತೂಹಲ
ಈ ಅಂಗಡಿ ಕೋಣೆಗಳ ಹರಾಜು ಯಾವಾಗ ನಡೆಯುತ್ತದೆ ಎಂದು ಸಾರ್ವಜನಿಕರು ಮತ್ತು ವ್ಯಾಪಾರಿಗಳು ಒಂದು ವರ್ಷದಿಂದಲೇ ಅಧಿಕಾರಿಗಳಲ್ಲಿ ಕೇಳುತ್ತಿದ್ದಾರೆ. ಅಂಗಡಿಯ ಬೇಡಿಕೆಯನ್ನೂ ಮುಂದಿಟ್ಟಿದ್ದಾರೆ. ಈ ಅಂಗಡಿಗೆ ಎಷ್ಟು ಬಾಡಿಗೆ ದರ ಹಾಗೂ ಹರಾಜು ಎಷ್ಟರಲ್ಲಿ ಹೋಗಬಹುವುದು ಎಂಬ ಕುತೂಹಲವಿದೆ. ಬೇರೆ ಜಿಲ್ಲೆಗಳಿಂದಲೂ ಈ ಬಗ್ಗೆ ಮಾಹಿತಿ ಕೇಳುವುದು ಕಂಡು ಬಂದಿದೆ. ಬಜಪೆ ಪೇಟೆಗೆ ಹೊಸ ಮೆರಗು ಕೊಡುವ ಈ ಬಸ್‌ ನಿಲ್ದಾಣದ ಕಟ್ಟಡ ಹರಾಜಿಗೆ ದಿನಗಣನೆ ಆರಂಭಗೊಂಡಿದ್ದರಿಂದ ಕುತೂಹಲ ಇನ್ನಷ್ಟು ಹೆಚ್ಚಿದೆ.

Advertisement

12 ವರ್ಷಗಳಿಗೆ ಬಹಿರಂಗ ಹರಾಜು
ಬಸ್‌ ನಿಲ್ದಾಣದ ಕಟ್ಟಡದ ಅಂಗಡಿಗಳ ಎಲೆಕ್ಟ್ರಿಕಲ್‌ ಕೆಲವು ಕಾರ್ಯ ಪ್ರಗತಿಯಲ್ಲಿದೆ. ವಯರಿಂಗ್‌ ಕಾರ್ಯ ಆಗಿದೆ, ಮೆಸ್ಕಾಂನಿಂದ ವಿದ್ಯುತ್‌ ಸಂಪರ್ಕ ಕಾರ್ಯ ಸದ್ಯದಲ್ಲಿ ನಡೆಯಲಿದೆ. ಅಂಗಡಿಗಳ ಚದರ ಅಡಿಗೆ ಬಾಡಿಗೆ ದರವನ್ನು ನಿಗದಿ ಮಾಡುವ ಕಾರ್ಯ ಎಂಜಿನಿಯರ್‌ ಮಾಡುತ್ತಿದ್ದಾರೆ. ನಗರೋತ್ಥಾನದ ಯೋಜನ ನಿರ್ದೇಶಕರ ಅನುಮೋದನೆ ಪಡೆದು 12 ವರ್ಷಗಳ ಅವಧಿಗೆ ಬಹಿರಂಗ ಹರಾಜು ಮಾಡಲಾಗುತ್ತದೆ. ಒಂದು ತಿಂಗಳೊಳಗೆ ಇದನ್ನು ಮಾಡಬೇಕೆಂಬ ಯೋಚನೆ ಇದೆ. ಈ ಎಲ್ಲ  ಕಾಮಗಾರಿ ನಗರೋತ್ಥಾನ ಯೋಜನೆಯಡಿ ನಿರ್ಮಾಣವಾಗಲಿದ್ದು, ನೋಡಿಕೊಳ್ಳುವ ಕಾರ್ಯ ನಮ್ಮದು ಎಂದು ಬಜಪೆ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಪಕೀರ ಮೂಲ್ಯ ವೈ. ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next