ಬಜಪೆ: ಫೈನಾನ್ಸ್ ಸೊಸೈಟಿಯಲ್ಲಿ ಬುರ್ಖಾ ಧರಿಸಿಕೊಂಡು ಬಂದು ಮಹಿಳೆ ಮೇಲೆ ಆ್ಯಸಿಡ್ ಹಾಕಿ ಚಿನ್ನಾಭರಣ ಸುಲಿಗೆ ಮಾಡಲು ಯತ್ನಿಸಿದ ಮೂವರು ಆರೋಪಿಗಳನ್ನು ಬಂಧಿಸಿ, 15 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಬಜಪೆ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
ಬಜಪೆ ಶಾಂತಿಗುಡ್ಡೆಯ ಪ್ರೀತೇಶ್ ಯಾನೆ ಪ್ರೀತು (31), ಸುರತ್ಕಲ್ ಕೋಡಿಕರೆಯ ಧನರಾಜ್ ಯಾನೆ ಧನು (30) ಹಾಗೂ ಬಾಳ ಕುಂಬಳಕೆರೆಯ ಕುಸುಮಾಕರ ಯಾನೆ ಅಣ್ಣು (37) ಬಂಧಿತರು.
ಮಂಗಳೂರು ತಾಲೂಕು ಬಜಪೆ ಗ್ರಾಮದ ನಿವಾಸಿ ಲೆಸ್ಲಿ ಡಿ ಕುನ್ಹಾ ಅವರ ಬಜಪೆ ಪೇಟೆಯಲ್ಲಿರುವ ಬಜಪೆ ಫೈನಾನ್ಸ್‌ಗೆ ಜು. 4.ರಂದು ಸಂಜೆ ಬುರ್ಖಾ ಧರಿಸಿ ಬಂದಿದ್ದ ಮೂವರು ಚಿನ್ನಾಭರಣ ಸುಲಿಗೆ ಮಾಡಲು ಪ್ರಯತ್ನಿಸಿದ್ದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರೀತೇಶ್ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಹಾಗೂ ಬಜಪೆ ಪೊಲೀಸ್ ಠಾಣೆಯಲ್ಲಿ ಒಂದು ಕಳವು ಪ್ರಕರಣ, ಧನರಾಜ್ ವಿರುದ್ಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ 2 ಹಾಗೂ ಮೂಡುಬಿದರೆ ಠಾಣೆಯಲ್ಲಿ 1 ಕೊಲೆಯತ್ನ ಪ್ರಕರಣ, ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಒಂದು ಜೀವ ಬೆದರಿಕೆ ಪ್ರಕರಣ, ಕುಸುಮಾಕರನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 2 ಹಾಗೂ ಬಜಪೆ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣಗಳು ದಾಖಲಾಗಿರುತ್ತದೆ.
ಆರೋಪಿಗಳಿಂದ ಸುಮಾರು 15 ಲಕ್ಷ ರೂ. ಮೌಲ್ಯದ ಇನೋವಾ ಕಾರು, ಸ್ವಿಫ್ಟ್ ಕಾರು ಮತ್ತು ಸ್ಕೂಟರನ್ನು ವಶಪಡಿಸಿಕೊಳ್ಳಲಾಗಿದೆ.