Advertisement

ಕಾಯಕಲ್ಪಕ್ಕೆ  ಕಾಯುತ್ತಿದೆ ಬಜ-ಬಲಯೂರು ರಸ್ತೆ 

10:37 AM Mar 30, 2018 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಸರಪಾಡಿ ಗ್ರಾ.ಪಂ. ವ್ಯಾಪ್ತಿಯ ದೇವಶ್ಯಮೂಡೂರು ಗ್ರಾಮದ ಬಜ- ಬಲಯೂರು ಕೂಡುರಸ್ತೆ ಅವಗಣನೆಗೆ ಒಳಗಾಗಿದೆ.

Advertisement

ಕಳೆದ ಹಲವಾರು ವರ್ಷಗಳಿಂದ ಈ ರಸ್ತೆಗೆ ಮರುಡಾಮರು ಹಾಕಿಲ್ಲವೆಂದು ಸಾರ್ವಜನಿಕರ ಆರೋಪವಾಗಿದೆ. ಈ ರಸ್ತೆ
ತೀರಾ ಹದಗೆಟ್ಟಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಡಾಮರು ಕಿತ್ತುಹೋಗಿ ಜಲ್ಲಿಕಲ್ಲುಗಳು ರಸ್ತೆಯಲ್ಲಿ ತುಂಬಿ ವಾಹನ ಸಂಚಾರಕ್ಕೆ ತೊಂದರೆಯುಂಟು ಮಾಡುತ್ತಿದೆ.

ಮಾರ್ಗ ಬದಲಾಯಿಸಿದ ಬಸ್‌ಗಳು
ದೈವಸ್ಥಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದು, ಪೆರಿಯಪಾದೆ, ಬಜ, ಮಾವಿನಕಟ್ಟೆ, ಸರಪಾಡಿ ಕಡೆಯವರು ಆರೋಗ್ಯ ಕೇಂದ್ರಕ್ಕೆ ಹೋಗಬೇಕಾದರೆ ಈ ರಸ್ತೆಯಲ್ಲಿಯೇ ತೆರಳಬೇಕು. ಶಾಲಾ ವಿದ್ಯಾರ್ಥಿಗಳೂ ಇದರಲ್ಲಿ ಸಾಗುತ್ತಾರೆ.

ರಸ್ತೆ ಹದಗೆಟ್ಟಿದ್ದರಿಂದ ಬಿ.ಸಿ. ರೋಡ್‌ನಿಂದ ಕಕ್ಯಪದವುಗೆ ಸಾಗುತ್ತಿದ್ದ ಬಸ್‌ಗಳು ಈ ರಸ್ತೆಯನ್ನು ಬಿಟ್ಟು ಅಲ್ಲಿಪಾದೆಯಿಂದ ಕುಂಟಾಲಪಲ್ಕೆ ರಸ್ತೆಯಲ್ಲಿ ಸಾಗುತ್ತವೆ ಎನ್ನುತ್ತಾರೆ ಸ್ಥಳೀಯರು. ಆಟೋ ರಿಕ್ಷಾ ಗಳಂತೂ ಇಲ್ಲಿ ಸಂಚರಿಸುವುದಿಲ್ಲ. ಇದರಿಂದ ಪ್ರಯಾಣಿಕರಿಗೆ ಮತ್ತಷ್ಟು ಅನಾನುಕೂಲವಾಗಿದೆ. ಈಗಂತೂ ಚುನಾವಣೆ ಬಂದಿದೆ. ತಮ್ಮ ಬೇಡಿಕೆ ಯಾವಾಗ ಈಡೇರುವುದೆಂದು ಜನತೆ ಕಾಯುತ್ತಿದ್ದಾರೆ. ಸಂಬಂಧಿತರು ರಸ್ತೆ ಅಭಿವೃದ್ಧಿ ನಡೆಸುವಂತೆ ಜನತೆಯ ಆಗ್ರಹವಾಗಿದೆ.

ನಿರ್ಲಕ್ಷ್ಯಗೊಂಡ ಬಹುಪಯೋಗಿ ರಸ್ತೆ 
ಬಜದಲ್ಲಿರುವ ಸರಪಾಡಿ ಗ್ರಾ.ಪಂ. ಕಚೇರಿಯ ಸನಿಹದಿಂದ ಈ ರಸ್ತೆ ಆರಂಭಗೊಳ್ಳುತ್ತದೆ. ಸುಮಾರು ಒಂದೂವರೆ ಕಿ.ಮೀ. ದೂರದ ಈ ರಸ್ತೆ ಬಹುಪಯೋಗಿ ರಸ್ತೆಯಾಗಿದೆ. ಸರಪಾಡಿ ಗ್ರಾ.ಪಂ. ಸರಪಾಡಿ ಮತ್ತು ದೇವಸ್ಯಮೂಡೂರು ಗ್ರಾಮಗಳನ್ನೊಳಗೊಂಡಿದ್ದು, ಬಜದಲ್ಲಿ ಗ್ರಾ.ಪಂ. ಕಚೇರಿ ಇದೆ. ದೇವಶ್ಯಮೂಡೂರು ಗ್ರಾಮಕ್ಕೆ ಸಂಬಂಧಿಸಿ ದೈವಸ್ಥಳ, ಮುಲ್ಕಾಜೆಮಾಡ, ಕುಂಟಾಲಪಲ್ಕೆ ಕಡೆಯಿಂದ ಗ್ರಾ.ಪಂ. ಕಚೇರಿ ಸಂಪರ್ಕಕ್ಕೆ ಈ ರಸ್ತೆಯನ್ನೇ ಅವಲಂಬಿಸಬೇಕಾಗಿದೆ. ಈ ಭಾಗದದವರಲ್ಲದೆ ಕಕ್ಯಪದವು, ಕಟ್ಟದಪಡ್ಪು ಕಡೆಯಿಂದ ಸರಪಾಡಿಗೆ ಸಂಪರ್ಕರಸ್ತೆಯೂ ಇದಾಗಿದೆ.

Advertisement

ಮನವಿಗೆ ಸ್ಪಂದನೆ ಇಲ್ಲ
ಈ ರಸ್ತೆ ಅಭಿವೃದ್ಧಿಗೊಳಿಸುವಂತೆ ಹಲವಾರು ಬಾರಿ ಸಂಬಂಧಿಸಿದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ. ರಸ್ತೆ ಅಭಿವೃದ್ಧಿಗೊಂಡಲ್ಲಿ ಸಾರ್ವಜನಿಕರಿಗೆ ಬಹಳ ಸಹಕಾರಿಯಾಗುತ್ತದೆ. 
ಲೀಲಾವತಿ, ಅಧ್ಯಕ್ಷರು
   ಸರಪಾಡಿ ಗ್ರಾ.ಪಂ

 ರತ್ನದೇವ್‌ ಪುಂಜಾಲಕಟ್ಟೆ 

Advertisement

Udayavani is now on Telegram. Click here to join our channel and stay updated with the latest news.

Next