ಮುಂಬೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ತಂಡಗಳು ತಮ್ಮ ತಯಾರಿಯಲ್ಲಿ ತೊಡಗಿವೆ. ಇದರ ನಡುವೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿಗೆ ಆಘಾತ ಎದುರಾಗಿದ್ದು, ಪ್ರಮುಖ ಆಟಗಾರ ಜಾನಿ ಬೇರಿಸ್ಟೋ ಸಂಪೂರ್ಣ ಕೂಟಕ್ಕೆ ಅಲಭ್ಯರಾಗಲಿದ್ದಾರೆ.
ಅಕ್ಟೋಬರ್ ನಲ್ಲಿ ಕಾಲಿನ ಮತ್ತು ಪಾದದ ಶಸ್ತ್ರಚಿಕಿತ್ಸೆಗೆ ಒಳಗಾದ ಬೇರಿಸ್ಟೋ, ಒಂದೆರಡು ವಾರಗಳಲ್ಲಿ ಎದ್ದುನಿಂತು ಓಡುವ ನಿರೀಕ್ಷೆಯಿದೆ. ಆದರೆ ದೀರ್ಘ ಗಾಯದಿಂದ ಗುಣಮುಖರಾಗುತ್ತಿರುವದರಿಂದ ಇಸಿಬಿ (ಇಂಗ್ಲೆಂಡ್ ಕ್ರಿಕೆಟ್ ಮಂಡಳಿ) ಅವರಿಗೆ ಐಪಿಎಲ್ ನಲ್ಲಿ ಭಾಗವಹಿಸಲು ಅನುಮತಿ ನೀಡದಿರಲು ನಿರ್ಧರಿಸಿದೆ.
ಇದನ್ನೂ ಓದಿ:ಬನವಾಸಿ ನೂತನ ಮಹಾಸ್ಯಂದನ ರಥೋತ್ಸವ ಮುಂದಕ್ಕೆ; ಕಾರಣವೇನು?
ಐಪಿಎಲ್ ಮುಗಿದ ಬಳಿಕ ನಡೆಯುವ ಆ್ಯಶಸ್ ಗೆ ಬೇರಿಸ್ಟೋ ಲಭ್ಯವಾಗುತ್ತಾರೆ ಎಂದು ಇಸಿಬಿ ಆಶಿಸುತ್ತಿದೆ. 2022 ರ ಹರಾಜಿನಲ್ಲಿ ಪಂಜಾಬ್ ಕಿಂಗ್ಸ್ ತಂಡವು ಬೇರಿಸ್ಟೋ ಅವರನ್ನು 6.75 ಕೋಟಿ ರೂ.ಗೆ ಖರೀದಿಸಿತ್ತು. ಅವರು ಕಳೆದ ಆಗಸ್ಟ್‌ನಿಂದ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ.
ಇದೇ ವೇಳೆ ಪಂಜಾಬ್ ತಂಡಕ್ಕೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಸ್ಪೋಟಕ ಆಟಗಾರ ಲಿಯಾಮ್ ಲಿವಿಂಗ್ ಸ್ಟೋನ್ ಅವರಿಗೆ ಅನುಮತಿ ಸಿಕ್ಕಿದೆ. ಅವರು ಸಂಪೂರ್ಣ ಕೂಟಕ್ಕೆ ಲಭ್ಯವಿರಲಿದ್ದಾರೆ. ಲಿವಿಂಗ್‌ಸ್ಟೋನ್ ಮೊಣಕಾಲು ಮತ್ತು ಪಾದದ ಗಾಯಗಳಿಂದಾಗಿ ಕಳೆದ ಡಿಸೆಂಬರ್ ನಿಂದ ಹೊರಗುಳಿದಿದ್ದರು.