Advertisement
ನಮ್ಮ ನಾಡಿನಲ್ಲಿ ಹರಿಯುವ ನದಿ ನೀರನ್ನು ನಾವು ಬಳಸಿಕೊಳ್ಳಲು ಕ್ಯಾತೆ ತೆಗೆಯುತ್ತಿರುವ ಗೋವಾ ಸರ್ಕಾರ ಗೋವಾದಲ್ಲಿ ನೆಲೆಕಂಡುಕೊಂಡ ಕನ್ನಡಿಗರ ವಿಷಯದಲ್ಲಿಯೂ ಅದೇ ಧೋರಣೆ ತಾಳಿದೆ. ಬೈನಾ ಬೀಚ್‌ನಲ್ಲಿ ಆಶ್ರಯ ಪಡೆದಿದ್ದ ಕನ್ನಡಿಗರನ್ನು ಒಕ್ಕಲೆಬ್ಬಿಸಿದ್ದ ಗೋವಾ ಸರ್ಕಾರದಿಂದ ಆಶ್ರಯ ಕೇಳದೇ ರಾಜ್ಯ ಸರ್ಕಾರವೇ ಸ್ವಂತ ಖರ್ಚಿನಲ್ಲಿ ಜಮೀನು ಖರೀದಿಸಿ, ನಿವೇಶನ ನೀಡಲು ಮುಂದಾದರೂ, ಗೋವಾ ಸರ್ಕಾರ ಅಧಿಕೃತ ಮಾಹಿತಿ ನೀಡದೇ ಆಟ ಆಡಿಸುತ್ತಿದೆ. ಆರ್‌ಟಿಐ ಮೂಲಕ ಮಾಹಿತಿ ಕೇಳಿದರೂ ತಲೆ ಕೆಡಿಸಿಕೊಳ್ಳದೇ ಉದಟಛಿಟತನ ತೋರುತ್ತಿದೆ.
Related Articles
ನಿರಾಶ್ರಿತರಾದವರೆಲ್ಲರೂ ಕನ್ನಡಿಗರಲ್ಲ ಮತ್ತು ಅಲ್ಲದೇ ನಿಜವಾಗಿಯೂ ನಿರಾಶ್ರಿತರಾದವರ ಮಾಹಿತಿಯ ಬಗ್ಗೆ ಗೊಂದಲ ಉಂಟಾಗಿದ್ದು, ಈ ಕುರಿತು ಸ್ಪಷ್ಟ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ನವೆಂಬರ್ 2 ಮತ್ತು 3 ರಂದು ಭೇಟಿ ನೀಡಿ, ಮುಖ್ಯ ಕಾರ್ಯದರ್ಶಿಯಿಂದ ಹಿಡಿದು, ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಮತ್ತು ಮರ್ಮ ಗೋವಾದ ಮುಖ್ಯಾಧಿಕಾರಿಯನ್ನು ಖುದ್ದು ಭೇಟಿ ಮಾಡಿ, ಗೋವಾದಲ್ಲಿ ನಿರಾಶ್ರಿತರಾದ ಕನ್ನಡಿಗರು ಸಂಖ್ಯೆ ಮತ್ತು ಅವರಿಗೆ ಪುನರ್‌ವಸತಿ ಕಲ್ಪಿಸಿರುವ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
Advertisement
ಗೋವಾ ಸರ್ಕಾರದ ಅಧಿಕಾರಿಗಳು ನಿರಾಶ್ರಿತರ ಮಾಹಿತಿ ನೀಡಲು ಒಂದು ತಿಂಗಳು ಸಮಯ ಕೇಳಿ, ರಾಜ್ಯದ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದಾರೆ. ಅಲ್ಲದೇ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ ಸುಭಾಷ್‌ಚಂದ್ರ ಕುಂಟಿಯಾ ನವೆಂಬರ್ 18 ರಂದು ಗೋವಾ ಮುಖ್ಯಕಾರ್ಯದರ್ಶಿ ಧರ್ಮೆಂದ್ರ ಶರ್ಮಾಗೆ ಮತ್ತೂಂದು ಪತ್ರ ಬರೆದು ನಿರಾಶ್ರಿತರ ಅಧಿಕೃತ ಮಾಹಿತಿ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅವರ ಪತ್ರಕ್ಕೂ ಗೋವಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಬೈನಾ ಬೀಚ್‌ನಲ್ಲಿ ನಿರಾಶ್ರಿತರಾಗಿರುವ 691 ಕುಟುಂಬಗಳ ಪೈಕಿ ಸುಮಾರು 163 ಕುಟುಂಬಗಳು ಕನ್ನಡೇತರರು ಎಂಬ ಮಾಹಿತಿ ರಾಜ್ಯ ಸರ್ಕಾರಕ್ಕೆ ಲಭ್ಯವಾಗಿದೆ. ಆದರೆ, ಸುಮಾರು 900 ಕುಟುಂಬಗಳು ಪುನರ್ವಸತಿಗೆ ಅರ್ಜಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ. ಹೀಗಾಗಿ ನಿಜವಾದ ನಿರಾಶ್ರಿತರನ್ನು ಪತ್ತೆ ಹಚ್ಚುವುದು ರಾಜ್ಯ ಸರ್ಕಾರಕ್ಕೆ ಸಮಸ್ಯೆಯಾಗಿದ್ದು, ಅಧಿಕೃತ ಮಾಹಿತಿಗಾಗಿ ಗೋವಾ ಸರ್ಕಾರ ಬಾಗಿಲು ಬಡಿದರೂ, ಗೋವಾ ಸರ್ಕಾರ ಮಾತ್ರ ಕನ್ನಡಿಗರ ವಿಷಯದಲ್ಲಿ ತನ್ನ ನಿರ್ಲಕ್ಷತನವನ್ನು ಮುಂದುವರಿಸುತ್ತಲೇ ಇದೆ.
ಗೋವಾ ಸರ್ಕಾರದ ಬೇಜವಾಬ್ದಾರಿತನದ ಧೋರಣೆಯಿಂದ ಬೈನಾ ಬೀಚ್ ಕನ್ನಡಿಗರು ನೆಲೆ ಇಲ್ಲದೇ ಪರದಾಡುವಂತಾಗಿದ್ದು, ಅವರಿಗೆ ನೆಲೆ ಕಲ್ಪಿಸಲು ಮುಂದಾಗಿರುವ ರಾಜ್ಯ ಸರ್ಕಾರಕ್ಕೂ ಗೋವಾ ಸರ್ಕಾರದ ಅಸಹಕಾರದಿಂದ ಕನ್ನಡಿಗರಿಗೆ ಸೂರು ಕಲ್ಪಿಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
– ಶಂಕರ ಪಾಗೋಜಿ