Advertisement

ಆರೋಗ್ಯ ಕೇಂದ್ರಕ್ಕೆ ಬೇಕು ಆಪರೇಷನ್‌

10:23 AM Jan 17, 2019 | Team Udayavani |

ಬೈಲಹೊಂಗಲ: ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿ ಅವುಗಳಿಗೇ ಅನಾರೋಗ್ಯ ಬಂದೆರಗಿದ ಸ್ಥಿತಿ ಇಲ್ಲಿದೆ.

Advertisement

ತಾಲೂಕಿನ ದೇಶನೂರ ಗ್ರಾಮದ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ದುಸ್ಥಿತಿ ಇದು. ದೇಶನೂರ, ನೇಸರಗಿ, ಕೊಳದೂರ, ಮೊಹರೆ, ಕೊಳ್ಳಾನಟ್ಟಿ, ಹೋಗರ್ತಿ, ಸುತಗಟ್ಟಿ, ಹನಮ್ಯಾನಟ್ಟಿ, ಸುತಗಟ್ಟಿ, ಮತ್ತಿಕೊಪ್ಪ ಗ್ರಾಮಗಳಿಂದ ಇಲ್ಲಿಗೆ ಜನ ಆಗಮಿಸುತ್ತಾರೆ. 1983 ರಲ್ಲಿ ಈ ಕೇಂದ್ರ ಉದ್ಘಾಟನೆಗೊಂಡಿತ್ತು. 2002 ರಲ್ಲಿ ಸುಸಜ್ಜಿತ ಶಸ್ತ್ರಚಿಕಿತ್ಸಾ ಕಟ್ಟಡ ನಿರ್ಮಾಣಗೊಂಡಿದೆ. ಆದರೆ ಇಂದು ಈ ಕೇಂದ್ರ ದುಸ್ಥಿತಿ ತಲುಪಿ ಜನರಿಗೆ ಇದ್ದೂ ಇಲ್ಲದಂತಾಗಿದೆ.

ಎಲ್ಲೆಂದರಲ್ಲಿ ಕಸಕಡ್ಡಿ, ಕೊಳಚೆ, ತ್ಯಾಜ್ಯ ಬಿದ್ದು ಗಲೀಜು ವಾತಾವರಣ ನಿರ್ಮಾಣವಾಗಿದೆ. ರೋಗಿಗಳು ಬಳಸುವ ಶೌಚಾಲಯದ ಪಾಟೀಕಲ್ಲು ಒಡೆದು ಹೋಗಿದೆ. ಕಟ್ಟಡದ ಗೋಡೆಗಳು ಸೀಳಿ ಬಿರುಕು ಬಿಟ್ಟಿರುವುದರಿಂದ ಕಟ್ಟಡ ಯಾವಾಗ ಬಿದ್ದು ಹೋಗುತ್ತದೋ ಎಂಬ ಭಯ ಮೂಡಿಸುತ್ತವೆ.

ಕಟ್ಟಡ ಭೂತ ಬಂಗಲೆ: ವೈದ್ಯರಿಗೆ, ಸಿಬ್ಬಂದಿ ವಾಸಕ್ಕೆ ವಸತಿಯಿದ್ದರೂ ಅವು ದುಸ್ಥಿತಿ ತಲುಪಿವೆ. ಶೌಚಾಲಯ ಬಾಗಿಲು ಮುರಿದು ಹೋಗಿವೆ. ಕಿಟಕಿ ಗ್ಲಾಸ್‌ ಒಡೆದು ಹೋಗಿದೆ. ಈ ಕಟ್ಟಡಗಳು ಭೂತ ಬಂಗಲೆಯಾಗಿ ಪರಿಣಮಿಸಿವೆ. ಅವುಗಳ ಗೋಡೆ ಬಿರುಕು ಬಿಟ್ಟು ಬೀಳುವ ಹಂತದಲ್ಲಿವೆ. ಆದ್ದರಿಂದ ಸಿಬ್ಬಂದಿ ಯಾರೂ ಇಲ್ಲಿ ವಾಸಿಸುತ್ತಿಲ್ಲ. ಬೇರೆ ಊರುಗಳಲ್ಲಿ ವಾಸಿಸುತ್ತ ಇಲ್ಲಿ ಬಂದು ಕರ್ತವ್ಯ ನಿರ್ವಹಿಸುವಂತಾಗಿದೆ.

ಕಚೇರಿ ಸಿಬ್ಬಂದಿಗೆ ಭಯ: ಕಚೇರಿ ಕಟ್ಟಡ ಕೂಡ ಸರಿಯಾಗಿಲ್ಲ. ದಿನಂಪ್ರತಿ ಸಿಮೆಂಟ್ ತುಂಡುಗಳು ಉದುರಿ ಬೀಳುತ್ತಿವೆ. ಮಳೆಗಾಲದಲ್ಲಿ ಕಟ್ಟಡ ಸೋರುತ್ತದೆ. ಆದರೆ ಕರ್ತವ್ಯ ನಿರ್ವಹಣೆ ಅನಿವಾರ್ಯ ಎನ್ನುತ್ತಾರೆ ಸಿಬ್ಬಂದಿ.

Advertisement

ಇಲ್ಲಿ ಸಿಬ್ಬಂದಿ, ರೋಗಿಗಳ ಬಳಕೆಗಾಗಿ ನಿರ್ಮಿಸಲಾದ ನೀರಿನ ಟ್ಯಾಂಕ್‌ನಲ್ಲಿ ನೀರಿಲ್ಲ. ಗ್ರಾಪಂನಿಂದ ಪೈಪ್‌ಲೈನ್‌ ಮೂಲಕ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಲ್ಲಿನಿಂದ ಕಟ್ಟಲಾದ ಕಂಪೌಂಡ್‌ ಗೋಡೆ ಎಲ್ಲ ಕಡೆ ಬಿದ್ದಿದೆ. ಹೀಗಾಗಿ ಇದಕ್ಕೆ ಸುರಕ್ಷತೆ ಇಲ್ಲದಂತಾಗಿದೆ. ಶವಾಗಾರದಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಶವ ಪರೀಕ್ಷೆಯನ್ನು ಸತ್ತ ಸ್ಥಳಕ್ಕೇ ಹೋಗಿ ವೈದ್ಯರು ಮಾಡುವ ಪರಿಸ್ಥಿತಿಯಿದೆ. ಏಪ್ರಿಲ್‌ 2017 ಅಳವಡಿಸಲಾದ ಬಯೋಮೆಟ್ರಿಕ್ಸ್‌ ಯಂತ್ರಕ್ಕೆ ವಿದ್ಯುತ್‌ ವ್ಯವಸ್ಥೆ ಕಲ್ಪಿಸದೇ ಹೆಸರಿಗೆ ಮಾತ್ರ ಯಂತ್ರ ಎಂಬ ಸ್ಥಿತಿಯಿದೆ. ಹೀಗಾಗಿ ಸಿಬ್ಬಂದಿ ಕೂಡ ಮನಸಿಗೆ ಬಂದ ಸಮಯಕ್ಕೆ ಬರುವ ಪರಿಪಾಠ ಬೆಳೆಸಿಕೊಂಡಿದ್ದಾರೆ. ಇನ್ನಾದರೂ ಶೀಘ್ರ ಹೊಸ ಕಟ್ಟಡ, ತಡೆಗೋಡೆ ನಿರ್ಮಿಸಿ ಮೂಲ ಸೌಕರ್ಯ ಒದಗಿಸಿದರೆ ರೋಗಿಗಳಿಗೆ ಅಲ್ಪಮಟ್ಟಿಗೆ ಅನುಕೂಲವಾಗಬಹುದು.

ಶೀಘ್ರ ಕಟ್ಟಡ ದುರಸ್ತಿ
ಇಲ್ಲಿಯ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಸಿಬ್ಬಂದಿ ಆತಂಕದಲ್ಲಿ ದಿನ ದೂಡುತ್ತಿದ್ದಾರೆ. ಆರೋಗ್ಯ ಕೇಂದ್ರ ಸುಧಾರಣೆಗೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಶೀಘ್ರ ಅನುದಾನ ಒದಗಿಸಿ ಕಟ್ಟಡ ದುರಸ್ತಿಗೆ ಭರವಸೆ ಸಿಕ್ಕಿದೆ.
ಡಾ. ಆಶಾ ಪಾಟೀಲ,
ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ದೇಶನೂರ

ಮೂಲ ಸೌಕರ್ಯ ಬೇಕು
ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಬೀಳುವ ಸ್ಥಿತಿ ತಲುಪಿದೆ. ಶಾಸಕರಿಗೆ, ಆರೋಗ್ಯ ಇಲಾಖೆ ಸಚಿವರಿಗೆ ತಿಳಿಸಲಾಗಿದೆ. ಶೀಘ್ರ ಅನುದಾನ ಲಭಿಸಿ ಮೂಲಭೂತ ಸೌಕರ್ಯ ಒದಗಿಸುವ ಅವಶ್ಯಕತೆಯಿದೆ.
ಶ್ರೀಶೈಲ ಕಮತಗಿ,
ತಾ.ಪಂ ಸದಸ್ಯ ದೇಶನೂರ.

ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next