ಕಡಬ: ಕೆಲ ದಿನಗಳ ಹಿಂದೆ ಕಡಬ ತಾಲೂಕಿನ ರೆಂಜಿಲಾಡಿ ಮೀನಾಡಿ ಸಮೀಪದ ನೈಲ ಎಂಬಲ್ಲಿ ಅರಣ್ಯ ಮತ್ತು ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಕೊಲೆಗೆ ಯತ್ನಿಸಿದ್ದ ಆರೋಪದಲ್ಲಿ ಬಂಧಿತ ಏಳು ಮಂದಿಗೆ ಜಿಲ್ಲಾ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಕಾಡಾನೆಯೊಂದು ಅಮಾಯಕರಿಬ್ಬರನ್ನು ಬಲಿ ತೆಗೆದುಕೊಂಡ ನಂತರದ ಬೆಳವಣಿಗೆಯಲ್ಲಿ ಅರಣ್ಯ ಹಾಗೂ ಪೊಲಿಸ್ ಇಲಾಖಾ ವಾಹನಗಳಿಗೆ ಕಲ್ಲು ತೂರಾಟ ಮಾಡಿ ಹಾನಿ ಉಂಟು ಮಾಡಿದ್ದಲ್ಲದೆ ಅಧಿಕಾರಿಗಳ ಕೊಲೆಗೆ ಯತ್ನಿಸಿದ್ದರು ಎಂದು ಬಂಧಿಸಲಾಗಿತ್ತು.
ಇದನ್ನೂ ಓದಿ:ಭರ್ಜರಿ ಬ್ಯಾಟಿಂಗ್; ಸಚಿನ್- ಪಾಂಟಿಂಗ್ ದಾಖಲೆ ಸರಿಗಟ್ಟಿದ ಕೇನ್ ವಿಲಿಯಮ್ಸನ್
ಉಮೇಶ್ ಕಮರ್ಕಜೆ, ರಾಜೇಶ್ ಕಮರ್ಕಜೆ, ಜನಾರ್ದನ ರೈ ಕೊಲ್ಯ, ಕೋಕಿಲ ಕಮರ್ಕಜೆ, ತೀರ್ಥಕುಮಾರ ಕೋಲ್ಪೆ, ಗಂಗಾಧರ ಗೌಡ ಬಾರ್ಯ ಸಿರಿಬಾಗಿಲು ಮತ್ತು ಅಜಿತ್ ಕುಮಾರ್ ಕೆಂಜಾಳ ಎಂಬವರನ್ನು ಕಡಬ ಪೊಲೀಸರು ಬಂಧಿಸಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಕೋರಿ ನ್ಯಾಯವಾದಿ ಮಹೇಶ್ ಕಜೆ ಅವರ ಮೂಲಕ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಜಿಲ್ಲಾ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.