Advertisement

Baikampady: ಮೊಗವೀರ ಮಹಾಸಭಾದಿಂದ ಬೈಕಂಪಾಡಿ ಶಾಲೆಗೆ ಹೊಸ ರೂಪ!

03:18 PM Sep 10, 2024 | Team Udayavani |

ಬೈಕಂಪಾಡಿ: ಕನ್ನಡ ಮಾಧ್ಯಮ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಸಿಯುತ್ತಿರುವ ಸಂದರ್ಭ ಕನ್ನಡ ಶಾಲೆ ಉಳಿಸಲು ಹಲವು ಕಸರತ್ತುಗಳು ನಡೆಯುತ್ತಿವೆ. ಅದೇ ರೀತಿ 120 ವರ್ಷಗಳ ಇತಿಹಾಸವಿರುವ ಬೈಕಂಪಾಡಿ ದ.ಕ. ಹಿ.ಪ್ರಾ. ಶಾಲೆಯಲ್ಲಿ (ಮೀನುಗಾರಿಕ ಶಾಲೆ) 450 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ಹೊಸ ರೂಪ ನೀಡಲು ಬೈಕಂಪಾಡಿ ಮೊಗವೀರ ಮಹಾಸಭಾದ ನೇತೃತ್ವದಲ್ಲಿ ತಯಾರಿ ನಡೆದಿದೆ.

Advertisement

ಬ್ರಿಟೀಷರ ಆಡಳಿತ ಕಾಲದಲ್ಲಿ ಮೊದಲ ಬಾರಿಗೆ ಬೈಕಂಪಾಡಿ ಮೊಗವೀರ ಮಹಾ ಸಭಾದ ಹಿರಿಯರು ಸೇರಿ ಊರಿಗೊಂದು ಶಾಲೆ ನಿರ್ಮಿಸುವ ಐತಿಹಾಸಿಕ ನಿರ್ಧಾರ ಕೈಗೊಂಡು ಇಂದಿಗೆ ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಇಲ್ಲಿನ ಹತ್ತಾರು ಗ್ರಾಮಕ್ಕೆ ಇದುವೇ ಶಿಕ್ಷಣದ ಏಕೈಕ ಮೂಲವಾಗಿತ್ತು. ದೂರದ ಜೋಕಟ್ಟೆಯಿಂದ ಹಿಡಿದು ಮೈಲುಗಟ್ಟಲೆ ದೂರದಿಂದ ವಿದ್ಯಾರ್ಥಿಗಳು ವಿದ್ಯಾರ್ಜನೆಗೆ ಬಂದು, ಈ ಶಾಲೆಯಲ್ಲಿ ಕಲಿತ ಮಕ್ಕಳು ಇಂದು ದೇಶದ, ವಿದೇಶದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ.

ಸ್ಥಳೀಯ ಎನ್‌ಎಂಪಿಎ ಸಹಿತ ವಿವಿಧ ಕಂಪೆನಿಗಳ ಸಿಎಸ್‌ಆರ್‌ ನೆರವಿನೊಂದಿಗೆ ಮೂರು ಕೋಟಿ ರೂ.ವೆಚ್ಚದಲ್ಲಿ ಹಳೆಯ ಕಟ್ಟಡವನ್ನು ಇದೀಗ ಹೊಸ ಕಟ್ಟಡವಾಗಿ ನಿರ್ಮಾಣ ಮಾಡಲಾಗುತ್ತಿದೆ, ಕಾಮಗಾರಿ ಯನ್ನು ಒಂದೂವರೆ ವರ್ಷದಲ್ಲಿ ಪೂರ್ಣ ಗೊಳಿಸಲು ನಿರ್ಧರಿಸಲಾಗಿದೆ.

ಉತ್ತಮ ಶಿಕ್ಷಣದಿಂದ ಮಕ್ಕಳ ಸಂಖ್ಯೆಯೂ ಇದೆ. 1ರಿಂದ 7ನೇ ತರಗತಿ ವರೆಗೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತಿದ್ದು, ಇದರಲ್ಲಿ ಶೇ 90ರಷ್ಟು ವಲಸೆ ಕಾರ್ಮಿಕರ ಮಕ್ಕಳಿದ್ದಾರೆ.

ಮೆರೈನ್‌ ಐಟಿಐ ಕೌಶಲ ಶಿಕ್ಷಣಕ್ಕೆ ಚಿಂತನೆ
ಕರಾವಳಿಯಲ್ಲಿ ಮೀನುಗಾರಿಕೆ ದೊಡ್ಡ ಉದ್ಯಮವಾಗಿದ್ದು, ಮೊಗವೀರ
ಸಮುದಾಯವೂ ಸಾಕಷ್ಟು ಸಂಖ್ಯೆ ಯಲ್ಲಿದೆ. ಹೀಗಾಗಿ ಯುವ ಮೊಗವೀರ ಯುವಕರ ಅನುಕೂಲಕ್ಕಾಗಿ, ಮೀನು ಗಾರಿಕೆಯಲ್ಲಿ ಮತ್ತಷ್ಟು ಪರಿಣತಿ ಪಡೆಯಲು ಮೆರೈನ್‌ ಐಟಿಐ ಸ್ಥಾಪನೆಯ ಚಿಂತನೆ ನಡೆದಿದೆ.

Advertisement

ಐತಿಹಾಸಿಕ ಶಾಲೆ ಉಳಿಯಬೇಕು
ಬೈಕಂಪಾಡಿ ಮೊಗವೀರ ಮಹಾಸಭಾದ ಆಶ್ರಯದಲ್ಲಿ ಈ ಶಾಲೆಯಿದ್ದು, ಕಟ್ಟಡ ಹಳೆಯದಾಗಿದೆ. ಎನ್‌ಎಂಪಿಎ ಹಾಗೂ ಸ್ಥಳೀಯ ಕಂಪೆನಿಗಳಲ್ಲಿ ಮಾತುಕತೆ ನಡೆಸಲಾಗಿದ್ದು, ಸಿಎಸ್‌ಆರ್‌ ನಿಧಿಯಿಂದ 3 ಕೋ.ರೂ ವೆಚ್ಚದಲ್ಲಿ ಕಟ್ಟಡ ನಿರ್ಮಿಸಲು ಗುರಿ ಹೊಂದಲಾಗಿದೆ. ಇದಕ್ಕೆ ಗ್ರಾಮದವರು ಸರ್ವ ಸಹಕಾರವನ್ನು ನೀಡುತ್ತಾ ಬಂದಿದ್ದಾರೆ. ಐತಿಹಾಸಿಕ ಶಾಲೆ ಉಳಿಯಬೇಕು ಎಂಬುದು ನಮ್ಮ ಇಚ್ಛೆಯಾಗಿದೆ. ಜತೆಗೆ ಕೌಶಲಾಧಾರಿತ ಮೆರೈನ್‌ ಐಟಿಐ ಸ್ಥಾಪನೆಯ ಕನಸನ್ನು ನನಸಾಗಿಸಲು ಚಿಂತನೆ ನಡೆಸಿದ್ದೇವೆ. -ರಾಮಚಂದ್ರ ಬೈಕಂಪಾಡಿ, ಚೇರ್ಮನ್‌ ಕಟ್ಟಡ ನಿರ್ಮಾಣ ಸಮಿತಿ, ಬೈಕಂಪಾಡಿ ಮೊಗವೀರ ಮಹಾಸಭಾ

ಕೇಂದ್ರದ ಕೌಶಲ್ಯಾಭಿವೃದ್ಧಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡು ಕೇಂದ್ರದ ಮಾನ್ಯತೆ ಪಡೆಯಲು ಪ್ರಾಥಮಿಕ ಹಂತದ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ. ಶಾಲೆಯಲ್ಲಿ ಬೇಕಾದ ಸೌಲಭ್ಯ ಅಳವಡಿಸಿ ಸಮೀಪದಲ್ಲೇ ಪ್ರತ್ಯೇಕ ಕಟ್ಟಡದಲ್ಲಿ ಐಟಿಐ ಮಾಡುವ ಯೋಜನೆ ರೂಪಿಸಲಾಗಿದೆ

ಇಂದು ಶಿಲಾನ್ಯಾಸ: ಸೆ. 10ರಂದು ಶಾಲೆಯ ಹೊಸ ಕಟ್ಟಡಕ್ಕೆ ಶಿಲಾನ್ಯಾಸ, ಸಭೆಯಿದ್ದು, ಸಂಸದ ಬ್ರಿಜೇಶ್‌ ಚೌಟ, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಎನ್‌ ಎಂಪಿಎ ಚೇರ್ಮನ್‌ ಡಾ| ಎ.ವಿ. ರಮಣ, ಶಾಸಕ ಡಾ| ಭರತ್‌ ಶೆಟ್ಟಿ ವೈ. ಮತ್ತಿತರರು ಪಾಲ್ಗೊಳ್ಳಲಿದ್ದು, ಸಭಾ ಅಧ್ಯಕ್ಷ ವಸಂತ ಅಮೀನ್‌ ಅಧ್ಯಕ್ಷತೆ ವಹಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next