ಅದೊಂದು ಗುರುಕುಲ. ಅಲ್ಲಿದ್ದ ಗುರುಗಳು ಶಿಷ್ಯ ವತ್ಸಲರೆಂದೂ, ಅಪಾರ ಸಂಯಮಿಯೆಂದೂ ಹೆಸರು ಗಳಿಸಿದ್ದರು. “ಶಿಸ್ತು ಕಲಿಯಬೇಕು. ಸುಳ್ಳು ಹೇಳಬಾರದು.ಕಳ್ಳತನ ಮಾಡಬಾರದು.ನಾಲ್ಕು ಜನರಿಗೆ ಸಹಾಯ ಮಾಡಬೇಕು…’ ಎಂದು ತಮ್ಮ ಸಂಪರ್ಕಕ್ಕೆ ಬಂದ ಎಲ್ಲರಿಗೂ ಹೇಳುತ್ತಿದ್ದರು.
ಹೀಗಿರಲೊಮ್ಮೆ, ಅವರ ಗುರುಕುಲದಲ್ಲಿಯೇ ಇದ್ದ ಹುಡುಗನೊಬ್ಬ ಕಳವು ಮಾಡಿ ಸಿಕ್ಕಿಬಿದ್ದ. ಉಳಿದ ಮಕ್ಕಳೆಲ್ಲಾ ಅವನ ಮೇಲೆ ದೂರು ನೀಡಿದರು.ಕಳ್ಳನಾಗಿರುವ ಕಾರಣಕ್ಕೆಅವನನ್ನು ಗುರುಕುಲದಿಂದ ಹೊರಕ್ಕೆ ಹಾಕಬೇಕೆಂದು ಒತ್ತಾಯ ಮಾಡಿದರು. ಆದರೆ ಗುರುಗಳು ಹಾಗೆ ಮಾಡಲಿಲ್ಲ. ತಪ್ಪು ಮಾಡಿದ ಶಿಷ್ಯನಿಗೆ ಒಂದು ಮಾತೂ ಬಯ್ಯದೆ ಆಶ್ರಮದಲ್ಲಿಯೇ ಉಳಿಸಿಕೊಂಡರು.
ಹೀಗೆ ಕೆಲವು ದಿನಗಳು ಕಳೆದವು. ಗುರುಕುಲದಲ್ಲಿ ಮತ್ತೂಮ್ಮೆ ಕಳುವಿನ ಪ್ರಕರಣ ನಡೆಯಿತು. ವಿಚಾರಣೆ ನಡೆದಾಗ ಕಳ್ಳನೂ ಸಿಕ್ಕಿಬಿದ್ದ. ಅವನು ಮತ್ಯಾರೂ ಆಗಿರದೆ, ಈ ಮೊದಲು ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದವನೇ ಆಗಿದ್ದ. ಈ ಬಾರಿ ಉಳಿದ ಶಿಷ್ಯರ ಸಿಟ್ಟು ತಾರಕಕ್ಕೇರಿತ್ತು. ಅವರೆಲ್ಲಾ ಒಕ್ಕೊರಲಿನಿಂದ- ಈತನನ್ನು ಆಶ್ರಮದಿಂದ ಹೊರಗೆ ಹಾಕಿ ಗುರುಗಳೇ… ಎಂದು ಒತ್ತಾಯಿಸಿದರು.
ಗುರುಗಳು ಆ ಮಾತುಗಳಿಗೆ ಓಗೊಡಲಿಲ್ಲ. ಇದರಿಂದ ಕೆರಳಿದ ಶಿಷ್ಯರು,ಅವನನ್ನುಆಶ್ರಮದಿಂದ ಹೊರಗೆ ಹಾಕದಿದ್ದರೆ ತಾವೆಲ್ಲರೂ ಆಶ್ರಮ ತೊರೆಯುವುದಾಗಿ ಹೇಳಿದರು. ಆಗ ಗುರುಗಳು- “ಮಕ್ಕಳೇ, ನೀವು ಒಳ್ಳೆಯವರು. ಸದ್ಗುಣ ಸಂಪನ್ನರು. ಸರಿ ಯಾವುದು, ತಪ್ಪು ಯಾವುದು ಎಂದು ನಿಮಗೆ ಅರ್ಥವಾಗುತ್ತದೆ. ನೀವು ಇಲ್ಲಿಂದ ಹೋಗಬಹುದು. ನಿಮಗೆ ಇಷ್ಟವಾದ ಆಶ್ರಮ ಸೇರಬಹುದು. ಆದರೆ ಕಳವು ಮಾಡಿರುವ ಶಿಷ್ಯನಿಗೆ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದೇ ಗೊತ್ತಿಲ್ಲ. ಈಗ ನಾನೂ ಕೈ ಬಿಟ್ಟರೆ, ಅವನನ್ನು ಸರಿದಾರಿಗೆ ತರುವವರು ಯಾರು?’ ಎಂದರು. ಮರೆಯಲ್ಲಿ ನಿಂತುಕೊಂಡು ಈ ಸಂಭಾಷಣೆಯನ್ನು ಕೇಳಿಸಿಕೊಂಡ ಶಿಷ್ಯನ ಕಣ್ಣುಗಳು ಜಿನುಗಿದವು. ಓಡೋಡಿ ಬಂದು ಗುರುವಿನ ಪಾದಗಳನ್ನು ಹಿಡಿದ ಅವನು, ಇನ್ನೊಮ್ಮೆ ಎಂದೂ ಕಳ್ಳತನ ಮಾಡುವುದಿಲ್ಲ ಗುರುಗಳೇ. ನನ್ನನ್ನು ಕ್ಷಮಿಸಿ ಎಂದ…