Advertisement
ಗದ್ವಾಲ್ ಬಾತನ್ನು ಚರ್ಲೆ ಅಥವಾ ಸರಳೆ ಬಾತು ಎಂದು ಕರೆಯಲಾಗುತ್ತದೆ. ಈ ಹಕ್ಕಿ, ನೀರಿನಲ್ಲಿ ಮುಳುಗಿ ಅಲ್ಲಿರುವ ಕ್ರಿಮಿ ಕೀಟಗಳನ್ನು ಬೇಟೆಯಾಡುತ್ತದೆ. ನೀರೊಳಗಿನ ಸಸ್ಯದ ಮೆತ್ತನೆಯ ಭಾಗವನ್ನು ಇದು ಭಕ್ಷಿಸುತ್ತದೆ.
Related Articles
Advertisement
ಗುರಿ ಇಟ್ಟು ನೋಡಿದರೆ, ಕಂದು-ಕಪ್ಪು ಬಣ್ಣದ ನಡುವೆ ಇರುವ ತಿಳಿ ಕಂದು ಕೆಂಪು ಬಣ್ಣ ಹಾಗೂ ಕೆನ್ನೆಯ ಮೇಲಿರುವ ತಿಳಿ ಬಿಳಿ ಬಣ್ಣ ಕಾಣುತ್ತದೆ. ಹೊಟ್ಟೆ, ಎದೆಯ ಮೇಲೆ ತಿಳಿ ಹಳದಿ ಮಿಶ್ರಿತ ಮಣ್ಣು ಬಣ್ಣದಿಂದ ಕೂಡಿರುತ್ತದೆ. ರೆಕ್ಕೆಯ ಗಾಢ ಕೆಂಪು ಮಿಶ್ರಿತ-ಕಪ್ಪು ಬಣ್ಣದ್ದು. ಇದು ಹಾರುವಾಗ ಇಲ್ಲವೇ ಈಜುವಾಗ ಸ್ಪಷ್ಟವಾಗಿ ಕಾಣುತ್ತದೆ. ಕಾಲಿನಲ್ಲಿ ಜಾಲಪಾದ ಇದ್ದು ಇದರ ಬಣ್ಣ ನೀಲಿಗಪ್ಪಾಗಿದೆ. ಭಾರತಕ್ಕೆ ವಲಸೆ ಬರುವ ಮೇಲಾರ್ಡ್ ಬಾತು ಮತ್ತು ಗುದ್ವಾಲ್ ಬಾತಿನಲ್ಲಿ ತುಂಬಾ ಸಾಮ್ಯತೆ ಇದೆ. ಆದರೆ ಮೇಲಾರ್ಡ್ ಬಾತುವಿನ ತಲೆ ಮತ್ತು ಕುತ್ತಿಗೆ ಹಸಿರು ಬಣ್ಣದಿಂದ ಕೂಡಿರುತ್ತದೆ. ದೇಹ ಕಂದುಗಪ್ಪು ಇದ್ದು- ಬಾಲ ಕಪ್ಪು ಬಣ್ಣದಿಂದ ಕೂಡಿರುತ್ತದೆ. ಹೆಣ್ಣು ಹಕ್ಕಿ ಸ್ವಲ್ಪ ಮುಸುಕು ಕಂದುಬಣ್ಣದಿಂದಿರುತ್ತದೆ. ಚುಂಚಿನ ಬುಡದಲ್ಲಿ ಕಿತ್ತಳೆ ಬಣ್ಣದ ಗೆರೆ ವಿಶೇಷವಾಗಿ ಹೆಣ್ಣಿಗೆ ಮಾತ್ರ ಇರುವುದು.
ಹಾರುವ ಇಲ್ಲವೇ ಈಜುತ್ತಿರುವಾಗ, ರೆಕ್ಕೆ ಅಗಲಿಸಿದಾಗ ಕಾಣುವ ಬಿಳಿ ಗೆರೆಯಿಂದಲೇ ಇದು ಹೆಣ್ಣೋ, ಗಂಡೋ ಅಂತ ಗುರುತಿಸಬಹುದು. ನೀರಿನ ದಡದಲ್ಲಿರುವ ದೊಡ್ಡ ಮರಗಳ, ಪೊಟರೆಯಲ್ಲೂ ಗೂಡು ಕಟ್ಟಿ, ಮರಿಮಾಡಿರುವುದು ಇದೆ. ಹಾಗಾಗಿ, ಈ ಬಾತನ್ನು ಪ್ರಾದೇಶಿಕ ಮತ್ತು ವಲಸೆ ಹಕ್ಕಿ ಎಂದರೆ ತಪ್ಪಾಗಲಾರದು.
ಚರ್ಲೆ ಬಾತು ಈಜಿ, ಆಹಾರ ಸಂಗ್ರಹಿಸುತ್ತದೆ. ಕೆಲವೊಮ್ಮೆ ನೆಲದ ಮೇಲೆ ಓಡಾಡಿ – ಇಲ್ಲವೇ ಕಡಿಮೆ ನೀರು ಇರುವಲ್ಲಿ ಈಜಿ ನೀರೊಳಗಿನ ಸಸ್ಯದ ಒಳಗಿರುವ ದಂಟಿನ ಮೆತ್ತನೆ ಭಾಗ ಮತ್ತು ಅದರ ಬೀಜಗಳನ್ನು ಸಹ ಆರಿಸಿ ತಿನ್ನುತ್ತವೆ. ಕೊಳ, ಗಜನಿ ಪ್ರದೇಶ, ಮಳೆಗಾಲದಲ್ಲಿ ನೀರು ನಿಂತ ಹೊಂಡ, ಸರೋವರ, ಸಿಹಿ ನೀರಿನ ನೀರಿನಾಶ್ರಯ ಇರುವ ಪ್ರದೇಶದಲ್ಲಿ ಕಾಣಸಿಗುತ್ತದೆ. ಗೂಡು ಕಟ್ಟುವ ಸಂದರ್ಭದಲ್ಲಿ ಕ್ವಾಕ್, ಕ್ವಾಕ್ ಎಂದು ಹೆಣ್ಣು ದನಿ ಹೊರಡಿಸುವ ಮೂಲಕವೇ ಇದು ನನ್ನ ಬೌಂಡರಿ ಅಂತ ಎದುರಾಳಿಗೆ ಸೂಚನೆ ನೀಡುತ್ತದೆ.
— ಪಿ. ವಿ. ಭಟ್ ಮೂರೂರು