ಹದ ಮಳೆ ಸುರಿಯುತ್ತಿದ್ದಂತೆ ಭೂಮಿ ಉಳುಮೆಯ ಕಾರ್ಯ ಜೋರಾಗಿ ನಡೆದಿದೆ. ಇನ್ನೊಂದು ಮಳೆ ಸುರಿದರೆ ಬಿತ್ತನೆಯೂ ಆರಂಭವಾಗಬಹುದು. ಬೆಳಗಾವಿಯಿಂದ ಚಿತ್ರದುರ್ಗ ತುದಿಯವರೆಗೆ ಅದೇ ಗೋವಿನಜೋಳ, ಸೂರ್ಯಕಾಂತಿ, ಹತ್ತಿ ಕಾಣಿಸಬಹುದು. ತೊಗರಿಗೆ ದರ ಸಿಗುತ್ತದೆಂದು ಬೀದರ್ ತುದಿಯಿಂದ ಹಿಡ್ಕಲ್‌ವರೆಗೂ ತೊಗರಿ ಬೆಳೆಯುವುದರಲ್ಲಿ ಅರ್ಥವಿಲ್ಲ. ಭೂಮಿಗೆ ಶಕ್ತಿ ನೀಡುತ್ತ, ದನಕರುಗಳಿಗೆ ಮೇವಾಗುತ್ತ, ಕೃಷಿಕರ ಅಡುಗೆ-ಆರೋಗ್ಯದ ಮೂಲವಾದ ಅಕ್ಕಡಿ ತಂತ್ರ ಬರಗೆಲ್ಲುವ ದಾರಿ ಸಾರುತ್ತಿದೆ. ಮೇವಿಲ್ಲದೇ ಕಲಬುರಗಿಯ ಆಳಂದದ ರೈತರು ದನಕರು ಮಾರಾಟ ಮಾಡುವಾಗ ಅಕ್ಕಡಿಯಲ್ಲಿ ಬದುಕಿದ ಬೀದರ್ ಜಿಲ್ಲೆಯ ರೈತರ ಹೈನುಗಾರಿಕೆ ಖುಷಿಯಲ್ಲಿತ್ತು. ಕೃಷಿಯಲ್ಲಿ ಕಾಸು ಹುಡುಕುತ್ತ ಏಕ ಬೆಳೆಯ ಸಾಮ್ರಾಜ್ಯ ಕಟ್ಟುವ ಮುಂಚೆ ಅಜ್ಜನ ಕಾಲದ ಅಕ್ಕಡಿಯ ಹಳೆಯ ಬದುಕನ್ನು ಒಮ್ಮೆ ಓದೋಣ.
ಕೃಷಿ ಹತ್ತು ತಲೆಮಾರಿನ ಜ್ಞಾನ, ಈ ತಲೆಮಾರು ಹೊಲದ ಬದುಕಿನ ಬಗ್ಗೆ ಅಷ್ಟು ಸುಲಭದಲ್ಲಿ ತೀರ್ಮಾನ ಕೈಗೊಳ್ಳಲಾಗದು. ಉತ್ಪಾದನೆ, ಕೀಟ, ರೋಗ ನಿಯಂತ್ರಣದ ವಿಚಾರದಲ್ಲಿ ತಳಿ ಬದಲಾವಣೆಯ ಮೂಲಕ ಹೊಸ ಹಸಿರು ಕ್ರಾಂತಿಗೆ ಮುನ್ನುಗ್ಗುವ ಮುನ್ನ ಯೋಚಿಸಬೇಕಾದ ನೆಲಮೂಲದ ಹಲವು ಸಂಗತಿಗಳಿವೆ. ಬಿ.ಟಿ ತಂತ್ರಜ್ಞಾನದ ಮೂಲಕ ಮಹಾ ಸಾಧನೆಯನ್ನು ಕೈಗೊಳ್ಳಬಹುದೆಂದು ಎಷ್ಟೇ ವೇದಿಕೆಯಲ್ಲಿ ಹೇಳಿದರೂ ನಾಡಿನ ನೆಲದ ರೈತರ ವಿಚಾರಗಳನ್ನು ಆಲಿಸುವುದು ಮುಖ್ಯವಿದೆ. ಗದಗದ ಲಕ್ಷ್ಮೇಶ್ವರ ಸನಿಹದಲ್ಲಿ ಎತ್ತಿನಹಳ್ಳಿ ಎಂಬ ಊರಿದೆ. ಅಲ್ಲಿನ ರೈತರು ಜೈದರ್ ಹತ್ತಿ ಬೆಳೆಯುತ್ತಾರೆ. 70-80 ವರ್ಷದ ಯಾವುದೇ ಹಿರಿಯರನ್ನು ಮಾತಾಡಿಸಿದರೆ ಅವರಿಗೆ, 20-25 ಕೃಷಿ ಬೆಳೆಗಳ ಜ್ಞಾನವಿದೆ. ಯಾವ ಮಣ್ಣು, ಮಳೆಗೆ ಯಾವ ಬೆಳೆ ಚೆನ್ನಾಗಿ ಬೆಳೆಯುತ್ತದೆಂದು ಗೊತ್ತಿದೆ. ಕೃಷಿಗೆ ಅಗತ್ಯವಿರುವ ಬೀಜಗಳನ್ನು ಜತನದಿಂದ ಸಂರಕ್ಷಿಸಿ ಬಳಸುವ ಜಾಣ್ಮೆ ಇದೆ.
ಮುಂಗಾರಿನಲ್ಲಿ ಪ್ರದೇಶ ಸುತ್ತಾಡಿದರೆ ಗಿಡ ಶೇಂಗಾ, ಬಳ್ಳಿ ಶೇಂಗಾ, ಈರುಳ್ಳಿ, ಬೆಳ್ಳುಳ್ಳಿ, ತೊಗರಿ, ಎಳ್ಳು, ಮೆಣಸಿನಕಾಯಿ, ಹೆಸರು, ಮಡಿಕೆ, ಅಲಸಂದೆ, ಹವೀಜ, ನವಣೆ, ಗುರೆಳ್ಳು ಬೆಳೆ ನೋಡಬಹುದು. ಹಿಂಗಾರಿನಲ್ಲಿ ಗೋಧಿ, ಜವಾರಿ ಬಿಳಿಗೋಧಿ ,ಅಣ್ಣಿಗೇರಿ-1 ಕಡ್ಲೆ, ಕರಿಕಡ್ಲೆ, ಮಾಲದಂಡೆ ಬಿಳಿಜೋಳ, ಕುಸಬಿ ಮೆರೆಯುತ್ತದೆ. ಹತ್ತಿಯ ಕ್ಷೇತ್ರಗಳನ್ನು ಬಿ.ಟಿ ತಳಿಗಳು ಆವರಿಸಿದೆ ಎಂಬ ಸ್ಥಿತಿ ಎಲ್ಲೆಡೆ ಕೇಳಿಬರುತ್ತಿದೆ. ಆದರೆ ಎತ್ತಿನಹಳ್ಳಿ ಚಿತ್ರ ಬೇರೆಯದು. ಇಲ್ಲಿ ಇನ್ನೂ ಜೈದರ್ ಹತ್ತಿ ಉಳಿದಿದೆ. ಪ್ರತಿ ಕೃಷಿಕರು ಹೊಲದ ಉತ್ತಮ ಬೀಜ ಸಂಗ್ರಹಿಸಿ ಅವನ್ನು ಬೀಜವಾಗಿ ಬಿತ್ತನೆಗೆ ಬಳಸುತ್ತಿದ್ದಾರೆ. ಜೂನ್-ಜುಲೈ ಮಳೆಗೆ ಮೆಣಸಿನ ನಾಟಿ ನಡೆಯುತ್ತದೆ. ಆಗಸ್ಟ್-ಸೆಪ್ಟೆಂಬರ್‌ನಲ್ಲಿ ಮೆಣಸಿನ ನಡುವೆ ಹತ್ತಿ ಬಿತ್ತನೆ ಶುರುವಾಗುತ್ತದೆ. ಹತ್ತಿ ಬೀಜಗಳನ್ನು ‘ಜಾಣ ಬಿತ್ತನೆ’ ಕ್ರಮದಲ್ಲಿ ಬಿತ್ತುವರು. ಅಂದರೆ ದೂರ ಬೀಜ ಬಿತ್ತುವುದು ಎಂದರ್ಥ. ಇದರಿಂದ ಇಳುವರಿ ಚೆನ್ನಾಗಿ ಅಗುತ್ತದೆಂಬ ತಿಳುವಳಿಕೆ ಹಿರಿಯರದು. ಒಮ್ಮೆ ಸಸಿ ಬೇರಿಳಿಸಿ ಚಿಗುರಿದರೆ ಅಲ್ಪಸ್ವಲ್ಪವಾದರೂ ಬೆಳೆ ದೊರೆಯುತ್ತದೆ. ಎಕರೆಗೆ 2.5-3 ಕ್ವಿಂಟಾಲ್ ಹತ್ತಿ ಹಾಗೂ ಒಂದು ಕ್ವಿಂಟಾಲ್ ಮೆಣಸು ದೊರೆಯುತ್ತದೆ. ಜೈದರ್ ಹತ್ತಿಗೆ ಕ್ವಿಂಟಲ್‌ಗೆ 5000 ರೂ. ಬೆಲೆ ದೊರೆಯಬಹುದು. ಮೆಣಸು 15-16,000 ರೂ.ಗೆ ಮಾರಾಟವಾಗುತ್ತದೆ. ಎತ್ತಿನಹಳ್ಳಿಯ ಒಟ್ಟು ಭೂಮಿಯಲ್ಲಿ ಶೇಕಡಾ 40ರಷ್ಟು ಭಾಗ ಹತ್ತಿ, ಮೆಣಸು ಕೃಷಿ ನಡೆಯುತ್ತಿದೆ. 300ಕ್ಕೂ ಕೃಷಿಕ ಕುಟುಂಬಗಳಲ್ಲಿ ಕೇವಲ 4-5 ರೈತರು ಮಾತ್ರ ಬಿ.ಟಿ ಬಿತ್ತುತ್ತಾರೆ. ಉಳಿದವರೆಲ್ಲ ಜೈದರ್ ಹತ್ತಿಗೆ ಜೈ ಹೇಳಿದ್ದಾರೆ.
ಬಿ.ಟಿ ಬೀಜ ಬಿತ್ತಿದರೆ ರಾಸಾಯನಿಕ ಗೊಬ್ಬರ ಎಕರೆಗೆ ಮೂರು ಚೀಲ ಬೇಕಾಗುತ್ತದೆಂದು ರೈತರು ಹೇಳುತ್ತಾರೆ. ಕೀಟನಾಶಕ, ಗೊಬ್ಬರಗಳಿಗೆ ಎಕರೆಗೆ 5,000 ರೂ. ಖರ್ಚಾಗುತ್ತದೆ. ಜೈದರ್ ಹತ್ತಿ ಬೆಳೆಯುವವರು ಹತ್ತಿಯ ಜೊತೆಗೆ ಮೆಣಸಿನಕಾಯಿ ಬೆಳೆಯುತ್ತಾರೆ. ಒಂದು ಬೆಳೆ ಕೈ ಕೊಟ್ಟರೂ ಮತ್ತೂಂದು ನೆರವಾಗುತ್ತದೆ. ದನಕರುವಿನ ಆರೋಗ್ಯಕ್ಕೆ ಸ್ವಾದಿಷ್ಟ ಹತ್ತಿಕಾಳು ದೊರೆಯುತ್ತದೆ. ಹೊಲಕ್ಕೆ ವಿಶೇಷ ಗೊಬ್ಬರ ಚೆಲ್ಲಬೇಕಾಗಿಲ್ಲ, ವಿಷ ಸಿಂಪಡಿಸದೆ ಬೇಸಾಯ ನಡೆಯುತ್ತದೆ. ಹತ್ತಿ, ಬರದಲ್ಲೂ ಇವರ ಕೈ ಹಿಡಿಯುತ್ತದೆ. ಜೈದರ್ ಹತ್ತಿಯ ಗಿಡ ಆಳಕ್ಕೆ ಬೇರಿಳಿಸುತ್ತದೆ. ಅಲ್ಪ ತೇವಾಂಶದಲ್ಲೂ ಬೆಳೆಯುತ್ತದೆಂದು ರೈತರು ವಿಶೇಷವಾಗಿ ವಿವರಿಸುತ್ತಾರೆ. ಬೀಜಕ್ಕಿಂತ ಬೇರು ಗಮನಿಸುವ ರೈತರ ಗುಣ ಕೃಷಿ ಗೆಲುವಿನ ಮೂಲವಾಗಿದೆ. ಬಿ.ಟಿ ಕ್ಷೇತ್ರದಲ್ಲಿ ಹತ್ತಿಯ ಜೊತೆ ಮೆಣಸು ಗೆಲ್ಲುವುದು ಕಷ್ಟವೆಂಬುದು ರೈತರ ಅನುಭವವಾಗಿದೆ. ಹೀಗಾಗಿ ಹಾವೇರಿ, ಬ್ಯಾಡಗಿ ಸುತ್ತಾಡಿದರೆ ಹತ್ತಿ ಹೊಲದಲ್ಲಿ ಅಕ್ಕಡಿ ಬೆಳೆ ಕಣ್ಮರೆಯಾಗಿದೆ. ಕೃಷಿಕರ ಅಡುಗೆ ಮನೆಯಲ್ಲಿ ಆರೋಗ್ಯ ಸಂಪತ್ತು ಕ್ಷೀಣಿಸುತ್ತಿದೆ.
ಪೇಟೆಯಲ್ಲಿ ಸರತಿ ಸಾಲಿನಲ್ಲಿ ನಿಂತು, ಗಲಾಟೆಗೆ ಮೈ ಒಡ್ಡಿ ಬೀಜ ಪಡೆಯುವ ಚಿತ್ರಗಳನ್ನು ರಾಣಿಬೆನ್ನೂರು, ಹಾವೇರಿ, ಹಾನಗಲ್, ಗದಗ, ಹುಬ್ಬಳ್ಳಿಗಳಲ್ಲಿ ಮಳೆಗಾಲಕ್ಕೆ ಮುಂಚೆ ನೋಡಬಹುದು. ಹಾವೇರಿಯ ಕನಕ ಹತ್ತಿ ಬೀಜ ಗಲಾಟೆ ನೆನಪಿರಬಹುದು. ಕಿಲೋ ಬೀಜಕ್ಕೆ 2,500 ರೂಪಾಯಿ ತೆತ್ತು ಖರೀದಿಸಿದವರೂ ಇದ್ದಾರೆ. ಕಾಳಸಂತೆಯಲ್ಲಿ ಹೆಚ್ಚಿನ ಬೆಲೆ ತೆತ್ತು ಬೀಜ ಖರೀದಿಸಿದವರ ಹೊಲದಲ್ಲಿ ಬೆಳೆ ಇಲ್ಲದೆ ಬೀಜದ ನಕಲಿತನ ವರದಿಯಾಗಿದೆ. ಆದರೆ ಗದಗದ ಎತ್ತಿನಹಳ್ಳಿ ರೈತರು ಈಗಲೂ ಬೀಜ ಗಲಾಟೆಯ ಸಾಲಿನಲ್ಲಿ ಸಿಗುವುದಿಲ್ಲ. ಊರಿನ ಬಸ್ ತಂಗುದಾಣದ ಗೋಡೆಗಳಲ್ಲಿ ಬಿ.ಟಿ ಬೀಜದ ಎಷ್ಟೇ ಜಾಹೀರಾತು ಬಂದರೂ ಹೊಲ ಜೈದರ್ ಹತ್ತಿಯನ್ನೇ ಪ್ರೀತಿಸುತ್ತಿದೆ. ಮನೆ ಮನೆಗಳಲ್ಲಿ ಬೇಸಾಯಕ್ಕೆ ಬೀಜ ಸಂರಕ್ಷಿಸಿ ಬಳಸುವ ಪದ್ಧತಿ ಇದೆ. ಹೀಗಾಗಿ ಬೀಜಕ್ಕೆ ಕೈಚಾಚುವ ಸ್ಥಿತಿ ನಮಗೆ ಬಂದಿಲ್ಲ. ಅನ್ನುತ್ತಾರೆ ಎತ್ತಿನಹಳ್ಳಿ ರೈತರು.
ತೊಗರಿಯ ಕಣಜವೆಂದು ಗುರುತಿಸುವ ಕಲಬುರಗಿಯಲ್ಲಿ ಅಕ್ಕಡಿ ಬೇಸಾಯ ಸಾಮಾನ್ಯವಾಗಿತ್ತು. ಗುಲ್ಪರ್ಗಾದಲ್ಲಿ ಹಿಂದೆ ಎತ್ತರಕ್ಕೆ ಬೆಳೆಯುವ ತಳಿ ಇತ್ತು, ತೊಗರಿಯ ಜೊತೆ ಅಕ್ಕಡಿ ಬೆಳೆಗಳ ಅವಕಾಶವಿತ್ತು. ತೊಗರಿಯ ಎಕಜಾತಿ ಈಗ ಆವರಿಸಿದೆ. ಆಳಂದ,ಬೀದರ ಪ್ರದೇಶದಲ್ಲಿ ಉದ್ದು, ಜೋಳ, ಹೆಸರು, ಸಜ್ಜೆಗಳು ತೊಗರಿಯ ಅಕ್ಕಡಿ ನೆಂಟರಾಗಿ ಇಂದಿಗೂ ಉಳಿದುಕೊಂಡಿವೆ. ಐದು ವರ್ಷ ಈಚೆಗೆ ಸೋಯಾ ಪ್ರವೇಶದ ಬಳಿಕ ಹೆಸರು ಬಿತ್ತನೆ ಹಿನ್ನಲೆಗೆ ಸರಿದಿದೆ. ಮುಖ್ಯ ಬೆಳೆಯ ತಳಿಗುಣ ಬದಲಾದರೂ ಅಕ್ಕಡಿ ಬೆಳೆ ಬದಲಾಗುತ್ತದೆ. ಕಳೆದ 2015ರಿಂದ ಬರದಿಂದ ಹೈದ್ರಾಬಾದ್ ಕರ್ನಾಟಕ ತತ್ತರಿಸಿದೆ. ದನಕರುಗಳು ಮೇವಿನ ಕೊರತೆಯಿಂದ ಮಾರಾಟವಾದವು. ವಿಶೇಷವೆಂದರೆ ಅಕ್ಕಡಿ ಬೇಸಾಯ ಉಳಿಸಿಕೊಂಡ ನೆಲೆಯಲ್ಲಿ ರೈತರು, ಜಾನುವಾರು ಬದುಕಿವೆ.
ಕೃಷಿಯಲ್ಲಿ ಹಣ ಹುಡುಕುವುದು ಹೇಗೆಂದು ನಮ್ಮ ಜ್ಞಾನ ಚೆನ್ನಾಗಿ ತೋರಿಸುತ್ತಿದೆ. ಆದರೆ ಸುಸ್ಥಿರತೆಯ ಪ್ರಶ್ನೆಯನ್ನು ಮಹತ್ವವಾಗಿ ನಾವು ನೋಡಬೇಕಿದೆ. ಹತ್ತಿ, ಭತ್ತ, ಟೊಮೆಟೊ ಮುಂತಾದ ಬೆಳೆಯ ತಳಿಗುಣ ಬದಲಿಸಿ ಲಾಭ ತೋರಿಸಲು ಜ್ಞಾನ ಓಡಬಹುದು. ಆದರೆ ಹೊಲದಲ್ಲಿರುವ ರೈತರಿಗೆ ಎಕ ಬೆಳೆಯ ತೊಂದರೆಗಳು ಈಗ ನಿಧಾನಕ್ಕೆ ಅರ್ಥವಾಗಿವೆ, ಮಾರುಕಟ್ಟೆಯ ಕುಸಿತ, ಹವಾಮಾನ ಬದಲಾವಣೆಗಳ ಪರಿಣಾಮಗಳು ಅನುಭವಕ್ಕೆ ಬಂದಿವೆ. ಮರ ಗಿಡ ಬೆಳೆಸಿಕೊಂಡು, ನೆಲ ಜಲ ಸಂರಕ್ಷಿಸಿ ಬದುಕುವ ವಿದ್ಯೆ ಅನುಸರಿಸುವ ಜಾಣತನ ಬರದ ನೆಲೆಯಲ್ಲಿ ಕಾಣಿಸುತ್ತಿದೆ. ಎಕರೆ, ಎರಡು ಎಕರೆ ಹೊಲದ ನಮ್ಮ ರೈತ ಭೂಮಿಯಿಂದ ಹಣವನ್ನು ಮಾತ್ರ ನೋಡುತ್ತಿದ್ದರೆ ಸುಲಭದಲ್ಲಿ ಬಿ.ಟಿ ಎಲ್ಲೆಡೆ ಆವರಿಸುತ್ತಿತ್ತು. ‘ಬೆಳೆದರೆ ಉಣ್ಣಬಹುದು’ ಎಂಬ ಸತ್ಯ ತಿಳಿದಿದ್ದರಿಂದಲೇ ರೈತರ ಆರೋಗ್ಯ ಉಳಿದಿದೆ. ಬೀದರದ ಬಿಳಿಜೋಳದ ರೊಟ್ಟಿಯ ಜೊತೆಗೆ ಪುಂಡಿಸೊಪ್ಪು, ಕುಸಿಬಿಯ ತೊಪ್ಪಲು ಮೆಲ್ಲಲು ಸಾಧ್ಯವಾಗಿದೆ. ಬೆಳಗಾವಿಯ ಹೊಲದ ಬೆಳೆ ಚಳಿಗಾಲದಲ್ಲಿ ರೊಟ್ಟಿಯ ಜೊತೆ ಕಡ್ಲೆಯ ಚಿಗುರು ನೀಡುತ್ತ ಜನರ ಆರೋಗ್ಯ ಉಳಿಸಿದೆ. ಬೆಳೆ ವೈವಿಧ್ಯ ಬದುಕಾದ ನೆಲೆಯಲ್ಲಿ ಬರನಿರೋಧಕ ತಂತ್ರಗಳಿವೆ. ಶತಮಾನಗಳಿಂದ ರೈತರು ಏಕೆ ಇಷ್ಟೊಂದು ಬೆಳೆ ಬೆಳೆಯುತ್ತಿದ್ದರೆಂಬ ಒಂದು ಪ್ರಶ್ನೆ ಮುಂದಿಟ್ಟುಕೊಂಡು ರಾಜ್ಯದ ವಿವಿಧ ಕೃಷಿ ವಲಯ ಸುತ್ತಾಡಿದರೆ ರಾಜ್ಯದ ರೈತ ಜ್ಞಾನದ ಶ್ರೀಮಂತಿಕೆ ತಿಳಿಯುತ್ತದೆ.
– ಶಿವಾನಂದ ಕಳವೆ