ಬೆಂಗಳೂರು: ತಮಿಳು ನಟ ಸತ್ಯರಾಜ್ ಕ್ಷಮೆಯಾಚಿಸುವವರೆಗೂ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬಾಹುಬಲಿ 2 ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಒಕ್ಕೂಟ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರ ಬಿಡುಗಡೆ ದಿನವಾದ ಏ.28ರಂದು ಬೆಂಗಳೂರು ಬಂದ್ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಕಾವೇರಿ ಹೋರಾಟದ ಸಂದರ್ಭದಲ್ಲಿ ಕನ್ನಡ ನಾಡಿನ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ತಮಿಳು ನಟ ಸತ್ಯರಾಜ್ ನಾಡಿನ ಕ್ಷಮೆಯಾಚಿಸಬೇಕು. ಏ.28ರ ಬಂದ್ ವೇಳೆ ಟೌನ್‌ಹಾಲ್‌ನಿಂದ ಬೃಹತ್ ಮೆರವಣಿಗೆ ನಡೆಸಲಾಗುವುದು. ಇದರ ನಡುವೆಯೂ ಮಲ್ಟಿಫ್ಲೆಕ್ಸ್ ಅಥವಾ ಚಿತ್ರ ಮಂದಿರಗಳಲ್ಲಿ ಬಾಹುಬಲಿ ಚಲನಚಿತ್ರ ಪ್ರದರ್ಶನಕ್ಕೆ ಮುಂದಾದರೆ ಅಲ್ಲಿ ತೀವ್ರ ಹೋರಾಟ ನಡೆಸುತ್ತೇವೆ. ಈ ವೇಳೆ ಏನಾದರು ಅಹಿತಕರ ಘಟನೆ ಸಂಭವಿಸಿದರೆ ಅದಕ್ಕೆ ನಟ ಸತ್ಯರಾಜ್ ಹೊಣೆ ಎಂದು ಎಚ್ಚರಿಸಿದರು.
ಕಾವೇರಿ ವಿಚಾರದಲ್ಲಿ ತೀವ್ರ ಅನ್ಯಾಯವಾಗಿದೆ. ಕನ್ನಡ ಒಕ್ಕೂಟದ ಒತ್ತಾಯವನ್ನು ಕಡೆಗಣಿಸಿ ನೀರು ಬಿಟ್ಟ ರಾಜ್ಯ ಸರ್ಕಾರದ ನಿರ್ಧಾರದಿಂದ ಪ್ರಸ್ತುತ ಬೆಂಗಳೂರಿಗರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ. ಇಷ್ಟಾದರೂ ತಮಿಳುನಾಡಿನಲ್ಲಿ ನಿಂತು, ಕರ್ನಾಟಕದ ವಿರೋಧಿ ಹೇಳಿಕೆ ನೀಡಿ ಕನ್ನಡಿಗರನ್ನ ಸತ್ಯರಾಜ್ ಕೆಣಕಿದ್ದಾರೆ.
ಸತ್ಯರಾಜ್ ಹೇಳಿಕೆ ರಾಜ್ಯಕ್ಕೆ ಅಪಮಾನವಾಗುವಂತೆ ಮಾಡಿದೆ. ಇದರ ವಿರುದ್ಧದ ನಮ್ಮ ಹೋರಾಟಕ್ಕೆ ನಾಡಿನ 2 ಸಾವಿರ ಕನ್ನಡ ಪರ ಸಂಘಟನೆಗಳು ಕೈಜೋಡಿಸಲು ಸಿದ್ಧವಾಗಿವೆ ಎಂದು ಹೇಳಿದರು. ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್ ಮಾತನಾಡಿ, ಕರ್ನಾಟಕ ರಾಜ್ಯ ಮತ್ತು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕುರಿತು ಅತ್ಯಂತ ಕೆಳಮಟ್ಟದಲ್ಲಿ ಮಾತನಾಡಿರುವ ಚಿತ್ರನಟ ಸತ್ಯರಾಜ್ ಕನ್ನಡಿಗರ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ, ರಾಜ್ಯದಲ್ಲಿ ಬಾಹುಬಲಿ ಚಿತ್ರ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ನಮ್ಮ ಹೋರಾಟ ನಟ ಸತ್ಯರಾಜ್ ವಿರುದ್ಧ. ಬಾಹುಬಲಿ ಚಿತ್ರದ ವಿರುದ್ಧವಲ್ಲ. ಕನ್ನಡ ಹಾಗೂ ವಾಟಾಳ್ ನಾಗರಾಜ್ ಅವರ ಕುರಿತು ಕೆಳಮಟ್ಟದ ಭಾಷೆ ಬಳಸಿ ಮಾತನಾಡಿರುವ ಸತ್ಯರಾಜ್ ಕನ್ನಡಿಗರ ಸ್ವಾಭಿಮಾನ ಕೆಣಕಿದ್ದಾರೆ. ಬಾಹುಬಲಿ ಚಲನಚಿತ್ರ ಹಂಚಿಕೆದಾರರು ಹಾಗೂ ಟಾಕೀಸ್‌ಗಳ ಮಾಲೀಕರು ಕನ್ನಡ ಪರ ಹೋರಾಟಗಾರರ ಜತೆಗೆ ಕೈಜೋಡಿಬೇಕು.
ಯಾವುದೇ ಕಾರಣಕ್ಕೂ ಬಾಹುಬಲಿ ಚಿತ್ರ ಹಂಚಿಕೆ ಮತ್ತು ಪ್ರದರ್ಶನಕ್ಕೆ ಮುಂದಾಗಬಾರದು. ಚಿತ್ರ ನಿರ್ಮಾಪಕರೇ ನೇರವಾಗಿ ಬಿಡುಗಡೆ ಮಾಡಲಿ. ಆಗ ಅದನ್ನು ತಡೆಯಲು ಸುಲಭವಾಗುತ್ತದೆ. ನಮ್ಮವರಿಗೆ ನಷ್ಟವಾಗುವುದು ನಮಗೆ ಇಷ್ಟವಿಲ್ಲ. ಚಿತ್ರ ಬಿಡುಗಡೆ ವೇಳೆ ತೊಂದರೆಯಾದರೆ ಸತ್ಯರಾಜ್ ನೇರಹೊಣೆ. ಅವರು ಬೆಂಗಳೂರಿಗೆ ಬಂದು ಕ್ಷಮೆಯಾಚಿಸಬೇಕು. ಆಗ ಹೋರಾಟ ಬಿಡುವ ಯೋಚನೆ ಮಾಡುತ್ತೇವೆ ಎಂದು ಹೇಳಿದರು.