Advertisement

ಬಹನಾಗ ರೈಲು ನಿಲ್ದಾಣ ಸೀಲ್‌ ಮಾಡಿದ CBI

08:20 PM Jun 10, 2023 | Team Udayavani |

ಭುವನೇಶ್ವರ: ತ್ರಿವಳಿ ರೈಲು ದುರಂತದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಒಡಿಶಾದ ಬಹನಾಗ ರೈಲು ನಿಲ್ದಾಣದಲ್ಲಿನ ಲಾಗ್‌ ಬುಕ್‌, ರಿಲೇ ಪ್ಯಾನೆಲ್‌ ಮತ್ತು ಇತರೆ ಕೆಲವು ಸಾಧನಗಳನ್ನು ವಶಪಡಿಸಿಕೊಂಡ ಬೆನ್ನಲ್ಲೇ ಶನಿವಾರ ರೈಲು ನಿಲ್ದಾಣವನ್ನೇ ಸೀಲ್‌ ಮಾಡಿದೆ. ತನಿಖೆಯ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ.
ಅದರಂತೆ, ಮುಂದಿನ ಆದೇಶದವರೆಗೆ ಬಹನಾಗ ನಿಲ್ದಾಣದಲ್ಲಿ ಯಾವುದೇ ಪ್ರಯಾಣಿಕ ಅಥವಾ ಸರಕು ಸಾಗಣೆ ರೈಲುಗಳು ನಿಲುಗಡೆಯಾಗುವಂತಿಲ್ಲ ಎಂದು ಸೂಚನೆ ನೀಡಲಾಗಿದೆ. ದುರಂತದ ನಂತರ ಎರಡೂ ರೈಲು ಮಾರ್ಗಗಳ ಪುನಸ್ಥಾಪನೆಯ ಬಳಿಕ ಈ ಮಾರ್ಗಗಳಲ್ಲಿ ಕನಿಷ್ಠ 7 ರೈಲುಗಳು(ಲೋಕಲ್‌) ಬಹನಾಗ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿದ್ದವು. ಸದ್ಯಕ್ಕೆ ಇವುಗಳ ನಿಲುಗಡೆಗೆ ನಿರ್ಬಂಧಿಸಲಾಗಿದೆ.

Advertisement

ಶವವಲ್ಲ, ಕೊಳೆತ ಮೊಟ್ಟೆ!:
ನೂರಾರು ಮಂದಿಯ ಸಾವಿಗೆ ಕಾರಣವಾದ ಬಹನಾಗ ರೈಲು ನಿಲ್ದಾಣದಲ್ಲಿ ಹಾನಿಗೀಡಾದ ಬೋಗಿಯೊಂದರ ಸಮೀಪದಿಂದ ದುರ್ವಾಸನೆ ಬರುತ್ತಿದ್ದು, ಮೃತದೇಹಗಳು ಇನ್ನೂ ಒಳಗೆ ಉಳಿದಿರಬಹುದೇ ಎಂಬ ಶಂಕೆಯನ್ನು ಅಲ್ಲಿನ ನಿವಾಸಿಗಳು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅಧಿಕಾರಿಗಳು, “ಅದು ಮನುಷ್ಯನ ದೇಹ ಕೊಳೆತು ಬರುತ್ತಿರುವ ವಾಸನೆಯಲ್ಲ, ಬದಲಿಗೆ ಕೊಳೆತ ಮೊಟ್ಟೆಗಳ ವಾಸನೆ’ ಎಂದು ಹೇಳಿದ್ದಾರೆ. ಅವಘಡ ನಡೆದ ದಿನ ಯಶವಂತಪುರ-ಹೌರಾ ರೈಲಿನಲ್ಲಿ ಮೂರು ಟನ್‌ ಮೊಟ್ಟೆಗಳನ್ನು ಸಾಗಿಸಲಾಗುತ್ತಿತ್ತು. ಬೋಗಿಗಳು ಹಳಿತಪ್ಪಿದಾಗ ಆ ಮೊಟ್ಟೆಗಳೆಲ್ಲ ಅಲ್ಲೇ ಬಿದ್ದು, ಅವುಗಳು ಕೊಳೆತು ದುರ್ವಾಸನೆ ಬರುತ್ತಿವೆ. ಮೂರು ಟ್ರ್ಯಾಕ್ಟರ್‌ಗಳ ಮೂಲಕ ಅವುಗಳ ತೆರವು ಕಾರ್ಯ ನಡೆಸುತ್ತಿದ್ದೇವೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next