ಚಿಂತಾಮಣಿ: ನಗರದ ಕನ್ನಂಪಲ್ಲಿ ಕೆರೆಗೆ ಶಾಸಕ ಜೆ.ಕೆ ಕೃಷ್ಣಾರೆಡ್ಡಿ ದಂಪತಿ ಹಾಗೂ ಸಂಸದ ಕೆ.ಎಚ್. ಮುನಿಯಪ್ಪ ಶುಕ್ರವಾರ ವೇದ ಪಂಡಿತರು, ವಾದ್ಯ ಮೇಳ ಹಾಗೂ ಬೆಂಬಲಿಗರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು. ಮುನಿಯಪ್ಪ ಮಾತನಾಡಿ, ನಗರಕ್ಕೆ ಜೀವಧಾರೆಯಾದ ಕನ್ನಂಪಲ್ಲಿ ಕೆರೆ ತುಂಬಿರುವುದು ಸಂತಸದ ವಿಷಯ. ಕೆರೆ ತುಂಬ ನೀರು ಇವೆ ಎಂದು ಪೋಲು ಮಾಡಬಾರದು. ಮಿತವಾಗಿ ಅವಶ್ಯಕತೆಗೆ ತಕ್ಕಷ್ಟು ಬಳಸಬೇಕು ಎಂದರು.
2.5 ವರ್ಷ ಸಮಸ್ಯೆ ಇಲ್ಲ: ನಗರಕ್ಕೆ ನೀರು ಪೂರೈಸುವ ಕೆರೆ ಇದು. ಎರಡು ವರ್ಷಗಳ ನಂತರ ತುಂಬಿ ಕೋಡಿ ಹರಿದಿದೆ. ಇದರಿಂದ ಜನತೆಗೆ ನೀರಿನ ಸಮಸ್ಯೆ ತಪ್ಪಿದಂತಾಯಿತು. ಇದರಿಂದ ಇನ್ನೂ ಎರಡುವರೆ ವರ್ಷ ನಗರಕ್ಕೆ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ತಿಳಿಸಿದರು.
ಬಾಗಿನ ಅರ್ಪಿಸುವ ವೇಳೆ ಚಿಂತಾಮಣಿ ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ನೂರಾರು ಜನ ಬಂದಿದ್ದರು. ಎರಡು ವರ್ಷಗಳ ನಂತರ ತುಂಬಿದ ಕೆರೆ ಎದುರು ನಿಂತು ಜನರು ಸೆಲ್ಫಿ ಹಾಗೂ ಗುಂಪು ಫೋಟೊ ತೆಗೆಸಿಕೊಂಡರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ತಿಂಡಿಯ ವ್ಯವಸ್ಥೆ ಮಾಡಲಾಗಿತ್ತು.
ನಗರಸಭೆ ಅಧ್ಯಕ್ಷೆ ಸುಜಾತಾ, ಜಿಪಂ ಸದಸ್ಯೆ ಕಮಲಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀರಾಮಪ್ಪ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಆಬ್ಬುಗುಂಡು ಶ್ರೀನಿವಾಸ ರೆಡ್ಡಿ, ನಗರಸಭಾ ಸದಸ್ಯರಾದ ಪ್ರಕಾಶ್, ಮಂಜುನಾಥ, ಸಾದಪ್ಪ, ವೆಂಕಟರವಣಪ್ಪ, ರಾಮಮೂರ್ತಿ, ಬ್ಲಿಡ್ ಮಂಜುನಾಥ ಹಾಗೂ ಎಲ್ಲಾ ನಗರಸಭಾ ಸದಸ್ಯರು, ತಹಶೀಲ್ದಾರ್ ಅಜಿತ್‌ಕುಮಾರ್ ರೈ, ಮಸಲಹಳ್ಳ ಮಂಜು ಇತರರು ಇದ್ದರು.