Advertisement

Legislative Council; ಅಕ್ಕಿ ದರ ವ್ಯತ್ಯಾಸದಿಂದ 120 ಕೋಟಿ ನಷ್ಟ: ಎನ್‌. ರವಿಕುಮಾರ್‌

11:51 PM Jul 15, 2024 | Team Udayavani |

ಬೆಂಗಳೂರು: ಒಂದೇ ಗುಣಮಟ್ಟದ ಅಕ್ಕಿ. ಆದರೆ ಅದನ್ನು ಖರೀದಿಸುವ ದರ ಬೇರೆ ಬೇರೆಯಾಗಿರುವುದರಿಂದ ಮಾಸಿಕ 120 ಕೋಟಿ ರೂ. ನಷ್ಟ ಉಂಟಾಗುತ್ತಿದೆ ಎಂದು ಬಿಜೆಪಿ ಸದಸ್ಯ ಎನ್‌. ರವಿಕುಮಾರ್‌ (N.Ravikumar) ಆರೋಪಿಸಿದರು.

Advertisement

ರಾಜ್ಯಾದ್ಯಂತ ಅಂತ್ಯೋದಯ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗಾಗಿ ಆಹಾರ, ನಾಗರಿಕ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯು ಕೇಂದ್ರದ ಭಾರತೀಯ ರಾಷ್ಟ್ರೀಯ ಸಹಕಾರ ಗ್ರಾಹಕರ ಒಕ್ಕೂಟ (ಎನ್‌ಸಿಸಿಎಫ್), ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ (ನಾಫೆಡ್‌) ಮತ್ತು ಕೇಂದ್ರೀಯ ಭಂಡಾರದಿಂದ ಪ್ರತೀ ಕೆಜಿಗೆ 34.60 ರೂ. ದರದಲ್ಲಿ ಅಕ್ಕಿ ಖರೀದಿಸುತ್ತಿದೆ. ಇದೇ ಗುಣಮಟ್ಟದ ಅಕ್ಕಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ “ಅಕ್ಷರ ದಾಸೋಹ’ ಯೋಜನೆಯಡಿ ಕೆಜಿಗೆ 29.30 ರೂ.ಗೆ ಖರೀದಿಸುತ್ತಿದೆ. ಹೆಚ್ಚು-ಕಡಿಮೆ ಪ್ರತೀ ಕೆಜಿಗೆ 5 ರೂ. ವ್ಯತ್ಯಾಸ ಆಗುತ್ತಿದ್ದು, ಮಾಸಿಕ 120 ಕೋಟಿ ರೂ. ಸರಕಾರಕ್ಕೆ ನಷ್ಟ ಉಂಟಾಗುತ್ತಿದೆ ಎಂದರು.

ವಿಧಾನ ಪರಿಷತ್ತಿನಲ್ಲಿ ಸೋಮವಾರ ಪ್ರಶ್ನೋತ್ತರ ವೇಳೆ ವಿಷಯ ಪ್ರಸ್ತಾವಿಸಿದ ರವಿಕುಮಾರ್‌, ಒಂದೇ ಗುಣಮಟ್ಟದ ಅಕ್ಕಿಯನ್ನು ಎರಡೆರಡು ದರದಲ್ಲಿ ಖರೀದಿಸುತ್ತಿರುವುದು ಯಾಕೆ? ಇದರಿಂದ ನಷ್ಟ ಉಂಟಾಗುವುದಿಲ್ಲವೇ? ಕಡಿಮೆ ಬೆಲೆಯಲ್ಲಿ ಖರೀದಿಸುತ್ತಿರುವ ಅಕ್ಕಿ ಗುಣಮಟ್ಟ ಏನಾದರೂ ಕಳಪೆ ಇದೆಯೇ? ಹೌದು, ಎಂದಾದಲ್ಲಿ ಮಕ್ಕಳ ಆರೋಗ್ಯದ ಗತಿ ಏನು ಎಂದು ತರಾಟೆಗೆ ತೆಗೆದುಕೊಂಡರು.

ಪ್ರತಿಕ್ರಿಯಿಸಿದ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಎಚ್‌. ಮುನಿಯಪ್ಪ, ಗುಣಮಟ್ಟ ಒಂದೇ ಆಗಿದ್ದರೂ ಖರೀದಿ ವ್ಯವಸ್ಥೆ ಬೇರೆ ಬೇರೆಯಾಗಿದೆ. ಇದಕ್ಕೆಲ್ಲ ಕೇಂದ್ರ ಸರಕಾರವೇ ಕಾರಣ. ಮೊದಲು ಅಕ್ಕಿ ದಾಸ್ತಾನು ಇದೆ ಅಂತ ಹೇಳಿದರು. ಅನಂತರ ಲಭ್ಯವಿಲ್ಲ ಅಂತ ಕೈಎತ್ತಿದರು. ಆಮೇಲೆ 29 ರೂ.ಗೆ ಕೆಜಿ ಪ್ಯಾಕೆಟ್‌ ಅಕ್ಕಿಯನ್ನು ಮಾರುಕಟ್ಟೆಗೆ ಬಿಟ್ಟರು ಎಂದು ತಿರುಗೇಟು ನೀಡಿದರು.

ಮಕ್ಕಳಿಗೆ ಗುಣಮಟ್ಟದ ಅನ್ನ
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿ, ಮಕ್ಕಳಿಗೆ ಗುಣಮಟ್ಟದ ಅಕ್ಕಿಯಿಂದ ತಯಾರಿಸಿದ ಅನ್ನವನ್ನು ನೀಡಲಾಗುತ್ತಿದೆ. ಗುಣಮಟ್ಟದಲ್ಲಿ ಯಾವುದೇ ರಾಜೀ ಇಲ್ಲ ಎಂದು ತಿಳಿಸಿದರು.

Advertisement

ಇನ್ನೂ 1.73 ಲಕ್ಷ ಕುಟುಂಬ ಬಿಪಿಎಲ್‌ಗೆ ಅರ್ಹ: ಸಚಿವ
ರಾಜ್ಯದಲ್ಲಿ ಇನ್ನೂ 1.73 ಲಕ್ಷ ಆದ್ಯತಾ ಪಡಿತರಚೀಟಿ (ಬಿಪಿಎಲ್‌) ಹೊಂದಲು ಅರ್ಹ ಕುಟುಂಬಗಳಿದ್ದು ಶೀಘ್ರ ಅವರಿಗೆ ಕಾರ್ಡ್‌ ಹಂಚಿಕೆ ಜತೆಗೆ ಪಡಿತರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದರು.

ಪ್ರಶ್ನೋತ್ತರ ವೇಳೆ ಬಿಜೆಪಿಯ ಪ್ರತಾಪ್‌ ಸಿಂಹ ನಾಯಕ್‌ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಹಿಂದಿನ ಸರಕಾರದ ಅವಧಿಯಲ್ಲಿ ಚುನಾವಣೆಗೂ ಮೊದಲು 2.95 ಲಕ್ಷ ಅರ್ಜಿಗಳು ಬಿಪಿಎಲ್‌ಗಾಗಿ ಸಲ್ಲಿಕೆ ಆಗಿದ್ದವು. 2.36 ಲಕ್ಷ ಅರ್ಹವಾಗಿದ್ದು, ಈ ಪೈಕಿ 62 ಸಾವಿರ ಕುಟುಂಬಗಳಿಗೆ ಈಗಾಗಲೇ ಪಡಿತರ ವಿತರಿಸಲಾಗುತ್ತಿದೆ. ಉಳಿದ 1.73 ಲಕ್ಷ ಕಾರ್ಡ್‌ಗಳನ್ನು ವಿತರಿಸಲಾಗುವುದು. ಬೆನ್ನಲ್ಲೇ ಪಡಿತರ ವಿತರಣೆಗೂ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಆರೋಗ್ಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗುವ ಕಾರ್ಡ್‌ಗಳಿಗೆ ಯಾವುದೇ ಕಾಲಮಿತಿ ಇಲ್ಲ. ಅರ್ಜಿ ಸಲ್ಲಿಕೆಯಾದ ವಾರದಲ್ಲಿ ವಿಲೇವಾರಿಗೆ ಸೂಚಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next