Advertisement

ಜಿಲ್ಲೆಯಲ್ಲಿ ಗಾಂಧಿ-ಶಾಸ್ತ್ರೀ  ಜಯಂತಿ ಆಚರಣೆ 

04:18 PM Oct 03, 2018 | Team Udayavani |

ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮಂಗಳವಾರ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ ಶಾಸ್ತ್ರೀ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Advertisement

ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಮ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಗಾಂಧಿ ಹಾಗೂ ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆಗೈದು ನಮನ ಸಲ್ಲಿಸಿದರು.

ವಿವಿಧ ಧರ್ಮದ ಗುರುಗಳಾದ ಸಂಸ್ಕೃತ ಪಂಡಿತ ಬಿಂಧುಮಾಧವಾಚಾರ್ಯ ನಾಗಸಂಪಗಿ ಭಗವದ್ಗೀತಾ, ಸೇಂಟ್‌ ಮೇರಿಸ್‌ ಚರ್ಚನ ಫಾದರ ಪೀಟರ ಆರ್ಶೀವಾದ ಬೈಬಲ್‌ ಹಾಗೂ ಆಶೀಫ್‌ ಮುದಗಲ್ಲ ಅವರು ಕುರಾನ್‌ ಕುರಿತು ಧರ್ಮ ಪಠಣ ಮಾಡಿದರು. ಶಾಲಾ ಮಕ್ಕಳು ಧರಿಸಿದ್ದ ಗಾಂಧಿಧೀ ಮತ್ತು ಶಾಸ್ತ್ರೀ ವೇಷಧಾರಿ ಎಲ್ಲರನ್ನು ಆಕರ್ಷಿಸಿತು. ವೇಷಧಾರಿಗಳಿಗೆ ಜಿಲ್ಲಾಧಿಕಾರಿಗಳು ನೂಲಿನ ಹಾರ ಹಾಕಿ ಗೌರವಿಸಿದರು. ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರೊ| ಸಿದ್ದರಾಮ ಮಠಪತಿ ಹಾಗೂ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನೆ ಮತ್ತು ವೈಷ್ಣವ ಜನತೋತನೆ, ರಘುಪತಿ ರಾಘವ ರಾಜಾರಾಮ ಗೀತೆ ಹಾಡಿದರು.

ಇದೇ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಹಿನ್ನೆಲೆಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರತಂದ ವಿಶೇಷ ಜನಪದ ಸಂಚಿಕೆ ಮತ್ತು ಪಾಪು ಗಾಂಧಿ  ಬಾಪು ಆದ ಕಥೆ ಕಿರು ಹೊತ್ತಿಗೆ ಬಿಡುಗಡೆ ಮಾಡಲಾಯಿತು. ನಂತರ ಗಾಂಧಿಧೀಜಿ ಜೀವನ ಕುರಿತು ಕಿರು ಸಾಕ್ಷ್ಯ ಚಿತ್ರವನ್ನು ಹಾಗೂ ಗಾಂಧಿಧೀಜಿಯವರ ಅಪರೂಪದ ಛಾಯಾಚಿತ್ರಗಳನ್ನು ಸಹ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ವೀಕ್ಷಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next