ಹರಪನಹಳ್ಳಿ: ಬಗರ್ ಹುಕ್ಕುಂ ಸಾಗುವಳಿದಾರರು ನಮೂನೆ-53ರಲ್ಲಿ ಅರ್ಜಿಸಲ್ಲಿಸಿದವರಿಗೆ ಪಟ್ಟಾ ವಿತರಣೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ) ಬಣದ ಕಾರ್ಯಕರ್ತರು ಸೋಮವಾರದಿಂದ ತಾಲೂಕು ಆಡಳಿತ ಕಚೇರಿ ಎದುರು ಅನಿರ್ದಿಷ್ಟ ಧರಣಿ ಆರಂಭಿಸಿದ್ದು, ಪ್ರತಿಭಟನೆ 3ನೇ ದಿನಕ್ಕೆ ಕಾಲಿಟ್ಟಿದೆ.
ತಾಲೂಕಿನಲ್ಲಿ ಬಗರ್ ಹುಕ್ಕುಂನಡಿ ಸಾವಿರಾರು ರೈತರು ಅರ್ಜಿ ಸಲ್ಲಿಸಿದ್ದಾರೆ. ಬಡ ಜನರು ಕುಟುಂಬದ ನಿರ್ವಹಣೆ ಮಾಡುವ ಮತ್ತು ಹಸಿವು ನೀಗಿಸಿಕೊಳ್ಳುವ ಉದ್ದೇಶದಿಂದ ಭೂಮಿ ಉಳುಮೆ ಮಾಡಿಕೊಂಡಿದ್ದಾರೆ. ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿರುವ ಜಮೀನಿನ ಮಾಲೀಕರು ಫಾರಂ 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಅವರೆಲ್ಲರಿಗೂ ಕೂಡಲೇ ತಾಲೂಕು ಆಡಳಿತ ಪಟ್ಟಾ ವಿತರಿಸಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದ ಬೇರೆ ಬೇರೆ ಜಿಲ್ಲೆ, ತಾಲೂಕುಗಳನ್ನು ಹೋಲಿಸಿದರೆ, ಹರಪನಹಳ್ಳಿ ಸರ್ಕಾರದ ದಿವ್ಯ ನಿರ್ಲಕ್ಷಕ್ಕೆ ಒಳಗಾಗಿದೆ. ಅಕ್ಕಪಕ್ಕದ ತಾಲೂಕುಗಳಲ್ಲಿ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಯಾಗಿದ್ದು, ಆ ಭಾಗದ ರೈತರಿಗೆ, ಜಾನುವಾರುಗಳ ಕುಡಿವ ನೀರಿಗೆ ಸಹಕಾರ ನೀಡಲಾಗಿದೆ.
ಆದರೆ ಇಲ್ಲಿ ರೈತರ ಪರವಾಗಿ ಯಾವುದೇ ಯೋಜನೆ ಅನುಷ್ಠಾನಗೊಂಡಿಲ್ಲ ಎಂದು ಅಪಾದಿಸಿದರು. ಜಿಲ್ಲಾ ಉಪಾಧ್ಯಕ್ಷ ಅರಸನಾಳು ಸಿದ್ದಪ್ಪ, ತಾಲೂಕು ಅಧ್ಯಕ್ಷ ಹನುಮಂತಪ್ಪ, ಸಿದ್ದಪ್ಪ, ಆಲೂರು ಶ್ರೀನಿವಾಸ್, ಯಂಕನಾಯ್ಕ, ಶೀಲ್ಯನಾಯ್ಕ, ಮಲ್ಲಪ್ಪ, ಧರ್ಮಪ್ಪ, ಅಲ್ಲಾಭಕ್ಷಿ ಸೇರಿದಂತೆ ಅರಸನಾಳು, ಹರಪನಹಳ್ಳಿ, ತಾಳೇದಹಳ್ಳಿ ತಾಂಡಾ ವಿವಿಧ ಗ್ರಾಮದ ರೈತರು ಹೋರಾಟದಲ್ಲಿ ಭಾಗವಹಿಸಿದ್ದಾರೆ.