ಬಾಗಲಕೋಟೆ: ಶೋಷಿತ ಸಮುದಾಯಗಳಲ್ಲಿ ಭಯ ಮೂಡಿಸುವ ಉದ್ದೇಶದಿಂದ ಮೌಡ್ಯ ಬಿತ್ತಲಾಯಿತು. ದೇವರು ಬರುವುದು, ದೆವ್ವ ಎಂಬ ಭಯ ಬೀಳುವ ಮೌಢ್ಯ ಶೋಷಿತ ಸಮುದಾಯದಲ್ಲಿ ಮಾತ್ರ ಜೀವಂತವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನವನಗರದ ಕಲಾ ಭವನದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದಿಂದ ಹಮ್ಮಿಕೊಂಡಿದ್ದ
ಜಿಲ್ಲಾ ವಾಲ್ಮೀಕಿ ಜನಜಾಗೃತಿ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮೌಢ್ಯಗಳನ್ನು ಹೋಗಲಾಡಿಸಿ ನಾವು ಶಿಕ್ಷಣವಂತರಾದಾಗ ಮಾತ್ರವೇ ಏನನ್ನಾದರೂ ಸಾಧಿಸಬಹುದು. ಇತಿಹಾಸ ಅರಿಯದಿದ್ದರೆ ಭವಿಷ್ಯವೇ ಕಷ್ಟವಾಗುತ್ತದೆ. ಇಂತಹ ಕಾರಣಗಳಿಂದಲೇ ಹೋರಾಟಗಳಿಗೆ ಹಿನ್ನಡೆಯಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್ .ಬಿ. ತಿಮ್ಮಾಪುರ ಮಾತನಾಡಿ, ಬುಧ, ಬಸವ, ಅಂಬೇಡ್ಕರ್ ಅವರ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವಾಗಬೇಕು. ಅಂಬೇಡ್ಕರ್ ಅವರು ಎಲ್ಲ ವರ್ಗಕ್ಕೂ ಸಮಾನವಾಗಿ ಮತದಾನದ ಹಕ್ಕು ನೀಡಿದ್ದಾರೆ. ಅದನ್ನು ಸದುಪಯೋಗ ಪಡಿಸಿಕೊಂಡು ಶೋಷಿತ ಸಮುದಾಯಗಳ ಪರ ಇರುವ ಪಕ್ಷ, ನಾಯಕರುಗಳಿಗೆ ಮತ ನೀಡುವ ಕೆಲಸ ಮಾಡಬೇಕು ಎಂದರು.
ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ಪ್ರಸನ್ನನಾಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ಎಚ್. ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಪಿ.ಎಚ್. ಪೂಜಾರ ಮಾತನಾಡಿದರು.
ಜಿಪಂ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ದ್ಯಾಮಣ್ಣ ಗಾಳಿ, ಮಾಜಿ ಅಧ್ಯಕ್ಷರೂ ಆಗಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಈಟಿ, ಕಾಂಗ್ರೆಸ್ ಮುಖಂಡ ಪೀರಪ್ಪ ಮ್ಯಾಗೇರಿ, ವಾಲ್ಮೀಕಿ ನೌಕರರ ಸಂಘದ ಅಧ್ಯಕ್ಷ ಆರ್.ಜಿ. ಸನ್ನಿ, ಮುಖಂಡರಾದ ಯಲ್ಲಪ್ಪ ಕ್ಯಾದಿಗೇರಿ, ಶಂಭುಗೌಡ ಪಾಟೀಲ ಮುಂತಾದರು ಉಪಸ್ಥಿತರಿದ್ದರು.
ದೇಶದ ಮೂಲಭೂತವಾದಿಗಳಿಗೆ ಶ್ರೀರಾಮ ಬೇಕಾಯಿತು, ಆದರೆ ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ ಬೇಡವಾದ. ಅಂಬೇಡ್ಕರ್ ಅವರ ಆಶಯ, ಸಂವಿಧಾನಕ್ಕೆ ಗೌರವ ಸಿಗಬೇಕಾದರೆ ದಲಿತರು ಮುಖ್ಯಮಂತ್ರಿ ಆಗಬೇಕು.
*ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಗುರುಪೀಠ