Advertisement

ಬಾಗಲಕೋಟೆ: ಕುಳಗೇರಿ ಕೆರೆಗೆ ಸೋಮನಕೊಪ್ಪ ಚರಂಡಿ ನೀರು!

03:21 PM Jan 06, 2025 | Team Udayavani |

ಉದಯವಾಣಿ ಸಮಾಚಾರ
ಕುಳಗೇರಿ ಕ್ರಾಸ್‌: ಗ್ರಾಮದ ಕೆರೆಗೆ ಸೋಮನಕೊಪ್ಪ ಗ್ರಾಮದ ಚರಂಡಿ ನೀರು ಹರಿದು ಬರುತ್ತಿದ್ದು, ಕೆರೆ ಕಲುಷಿತಗೊಂಡಿದೆ. ಭರ್ತಿಯಾಗುವ ಹಂತ ತಲುಪಿದ ಕೆರೆಯಲ್ಲಿ ಶುದ್ಧ ಕುಡಿಯುವ ನೀರು ಸಂಗ್ರಹವಾಗಿತ್ತು. ಸದ್ಯ ಈ ಕೆರೆಗೆ ಕಲುಷಿತಗೊಂಡ ಚರಂಡಿ ನೀರು ಬೆರೆತಿದ್ದು, ನೀರು ಕಪ್ಪು ಬಣ್ಣಕ್ಕೆ ತಿರುಗಿದೆ.

Advertisement

ಸೋಮನಕೊಪ್ಪ ಗ್ರಾಮದ ಚರಂಡಿ ನೀರು ಗ್ರಾಮದಲ್ಲಿನ ಕಸ-ಕಡ್ಡಿ ಕೆರೆಯ ಒಡಲು ಸೇರುತ್ತಿದೆ. ಕೆರೆ ನೀರು ಮಲೀನವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಕೆರೆಯನ್ನೇ ಅವಲಂಬಿಸಿದ ಸುತ್ತಲಿನ ನೂರಾರು ರೈತರು ಈ ಅಶುದ್ಧ ನೀರನ್ನೇ ಬಳಸುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗ ಭೀತಿ ಉಂಟಾಗಿದೆ.

ನೀರಾವರಿ ಅಧಿಕಾರಿಗಳ ನಿರ್ಲಕ್ಷ್ಯ: ಕಳೆದ ಬಾರಿ ಮಲಪ್ರಭಾ ಎಡದಂಡೆಯ ಎಲ್ಲ ಕಾಲುವೆಗಳನ್ನು ಅಭಿವೃದ್ಧಿ ಹೆಸರಲ್ಲಿ ಮರು ನಿರ್ಮಿಸಿದ್ದು ಕಾಮಗಾರಿ ಅಪೂರ್ಣ ಮಾಡಿ ಗುತ್ತಿಗೆದಾರ ಕೈ ತೊಳೆದುಕೊಂಡಿದ್ದಾರೆ. ಕಾರಣ ಕಾಲುವೆ ನೀರು ಕೆರೆಗೆ ಸೇರಿ ಕಲುಷಿತಗೊಳ್ಳುತ್ತಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ.

ಅಧಿಕಾರಿಗಳು ಸಹ ಮೇಲಿಂದ ಮೇಲೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಸಿಡಿ ನಿರ್ಮಿಸಿ ಕೆರೆಗೆ ಹೋಗುವ ಕೊಳಚೆ ನೀರು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೆರೆ ಸಂಪೂರ್ಣ ಭರ್ತಿಯಾಗುವ ಹಂತದಲ್ಲಿದೆ. ಕೂಡಲೇ ಸಂಬಂಧಿಸಿದ ಅ ಧಿಕಾರಿಗಳು ಕೆರೆಗೆ ಹರಿಯುವ ಕಲುಷಿತ ನೀರು ನಿಲ್ಲಿಸುವಂತೆ ರೈತರಾದ ದೊಡ್ಡಫಕ್ಕೀರಪ್ಪ ದ್ಯಾವನಗೌಡ್ರ, ಬಸು ನೀಲಗುಂದ, ಯಲ್ಲಪ್ಪ ದ್ಯಾವನಗೌಡ್ರ, ಬೀರಪ್ಪ ವಾಲಿಕಾರ, ಕೆಂಚಪ್ಪ ದ್ಯಾವನಗೌಡ್ರ, ಬೀರಪ್ಪ ತುಡಬೀನ ಸೇರಿದಂತೆ ಹಲವಾರು ರೈತರು ಒತ್ತಾಯಿಸಿದ್ದಾರೆ.

ಯಾವ ರೀತಿಯ ಅಭಿವೃದ್ಧಿ?
ಕಳೆದ ಮೂರು ವರ್ಷಗಳ ಹಿಂದೆಯೇ ಅಂದಾಜು 5 ಲಕ್ಷ ರೂ.ವೆಚ್ಚದಲ್ಲಿ ಗ್ರಾಪಂ ಅನುದಾನ ಬಳಸಿ ಕೆರೆ ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸುವ ಯೋಜನೆ ಮಾಡಲಾಗಿತ್ತು. ಈ ಹಿಂದೆ ಸಾಕಷ್ಟು ಬಾರಿ ಕೆರೆಯ ಹೂಳು ತೆಗೆದು ಸ್ವಚ್ಛಗೊಳಿಸಿ ಕೆರೆಗೆ ನೀರು ತುಂಬಿಸಲಾಗಿತ್ತು. ಆದರೆ ಅಭಿವೃದ್ಧಿಯ ಬೆನ್ನಲ್ಲೇ ಚರಂಡಿ ನೀರು ಕಾಲುವೆಗೆ ಸೇರಿ ಕೆರೆ ಮಲೀನವಾಗುತ್ತಿದೆ. ಇದು ಯಾವ ರೀತಿಯ ಅಭಿವೃದ್ಧಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ.

Advertisement

ಮಲಪ್ರಭಾ ಎಡದಂಡೆ ಕಾಲುವೆಗೆ ಚರಂಡಿ ನೀರು ಹರಿಸಿ ಕೆರೆಯಲ್ಲಿನ ನೀರು ಹಾಳು ಮಾಡಲಾಗಿದೆ. ಸುತ್ತ ನೂರಾರು ರೈತರು ಇದೇ ನೀರನ್ನು ಕುಡಿಯಲು ಬಳಸುತ್ತಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಭೇಟಿ ನೀಡಿ ರೋಗ ಹರಡದಂತೆ ಕ್ರಮ ವಹಿಸಬೇಕು. ಕೆರೆ ಮತ್ತು ನೀರು ಕಾಪಾಡಬೇಕಿದೆ.
*ಸಿದ್ದಪ್ಪ ದಂಡಿನ, ನಿಂಗಪ್ಪ ಕುರಿ, ಅರ್ಜುನ ವಾಲಿಕಾರ, ಗ್ರಾಮಸ್ಥರು

ಚರಂಡಿ ನೀರು ಕಾಲುವೆಗೆ ಹರಿಯುತ್ತಿದ್ದು, ತಡೆಯುವಂತೆ ಗ್ರಾಪಂ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಒಂದು ನೋಟಿಸ್‌ ನೀಡಿದ್ದು ಮತ್ತೊಮ್ಮೆ ತಿಳಿಸಿ ಮತ್ತೊಂದು ನೋಟಿಸ್‌ ನೀಡಿ ಸರಿಪಡಿಸುತ್ತೇವೆ.
ಮಲ್ಲಿಕಾರ್ಜುನ, ಎಇಇ,
ಕಾಕನೂರ ನೀರಾವರಿ ಕಚೇರಿ.

ನಮ್ಮ ಸಿಬ್ಬಂದಿಗೆ ತಿಳಿಸಿ ಮಾಹಿತಿ ಪಡೆದು ಬೇರೆ ಚರಂಡಿ ನಿರ್ಮಿಸಿ ನೀರು ಬೇರೆ ಕಡೆ ಸಾಗಿಸಿ ಸರಿಪಡಿಸುತ್ತೇವೆ.
ಎಸ್‌.ಜಿ.ಪರಸನ್ನವರ, ಪಿಡಿಒ

*ಮಹಾಂತಯ್ಯ ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next