Advertisement

ಬಾಗಲಕೋಟೆ: ಗಮನ ಸೆಳೆದ ರಾಷ್ಟ್ರ ಸೇವಿಕೆಯರ ಪಥ ಸಂಚಲನ

03:32 PM Jan 08, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ರಾಷ್ಟ್ರೀಯ ಸ್ವಯಂಸೇವಕ ಸಂಘ ಅಂದರೆ ಕೇವಲ ಹಾಡು, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವುದಲ್ಲ. ದೇಶದ ಜನರಿಗೆ, ಸಮಾಜಕ್ಕೆ ಆತ್ಮಾಭಿಮಾನ ಮೂಡಿಸುವ ವಿಶೇಷ ಸಂಘಟನೆ.

Advertisement

ಇದನ್ನು ದೇಶದಲ್ಲಿ ಗಟ್ಟಿಯಾಗಿ ಕಟ್ಟಿದವರು ಡಾ| ಹೆಗಡೆವಾರವರು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹ ಕಾರ್ಯವಾಹಿಕಾ ಅಲಕಾತಾಯಿ ಇನಾಮದಾರ ಹೇಳಿದರು. ನಗರದ ಬಸವೇಶ್ವರ ಕಾಲೇಜು ಆವರಣದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯಿಂದ ರವಿವಾರ ಸಂಜೆ ಹಮ್ಮಿಕೊಂಡಿದ್ದ ಬೌದ್ಧಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುಮಾರು 100 ವರ್ಷಗಳ ಹಿಂದೆ ನಮ್ಮ ದೇಶ, ವಿಚಿತ್ರವಾದ ಸ್ಥಿತಿ, ಹಲವರ ಆಳ್ವಿಕೆಯಲ್ಲಿತ್ತು. ಹಿಂದೂ ಎಂದರೆ, ಸಮಾಜ ಕೀಳರಿಮೆಯಿಂದ ನೋಡುವ ಕಾಲವೂ ಇತ್ತು. ಆದರೆ, ಹಿಂದೂ ಎಂದರೆ ವಿಶಿಷ್ಟ ಪದ್ಧತಿ ಎಂಬುದನ್ನು ಇಡೀ ವಿಶ್ವಕ್ಕೆ ತೋರಿಸಿದವರು ಸ್ವಾಮಿ ವಿವೇಕಾನಂದರು. ಅದೇ ಮಾರ್ಗದಲ್ಲಿ ಡಾ|ಕೇಶವ ಹೆಗಡೆವಾರ ಮುಂದುವರಿದರು ಎಂದರು.

ಸಮಾಜಕ್ಕೆ ಆತ್ಮಾಭಿಮಾನದ ಅರಿವು ಮೂಡಿಸಲು ವಿಶೇಷ ಕಾರ್ಯತಂತ್ರ ನೀಡಿದವರು. ಶಾಖೆ ಎಂದರೆ ಕೇವಲ ಆಟವಾಡುವುದು, ಹಾಡು ಹಾಡುವುದು ಹಾಗೂ ಸಾಂಸ್ಕೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದಲ್ಲ.

ಅನ್ನ, ಪ್ರಾಣ, ವಿಜ್ಞಾನ, ಮನೋ ಹಾಗೂ ಆನಂದ ಎಲ್ಲವುಗಳ ಮೂಲಕ ಶರೀರವನ್ನು ಸ್ವಾಸ್ತ್ಯವಾಗಿ ಇಟ್ಟುಕೊಳ್ಳುವುದನ್ನು ಕಲಿಸುತ್ತದೆ. ಶಾಖೆಯಲ್ಲಿ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಯೋಗದಿಂದ ಶರೀರ ಹಾಗೂ ಮನಸ್ಸನ್ನು ಗಟ್ಟಿಯಾಗಿಟ್ಟುಕೊಳ್ಳಲು ಸಾಧ್ಯ ಎಂದು ಹೇಳಿದರು.

Advertisement

ಇಂದಿನ ಶಾಲಾ ಪಠ್ಯಕ್ರಮದಲ್ಲಿ ಮಕ್ಕಳಿಗೆ ಬೇಕಿರುವ ವ್ಯವಹಾರಿಕೆ, ಧಾರ್ಮಿಕ ಜ್ಞಾನ ಇಲ್ಲ. ಬ್ರಿಟಿಷರು ನೀಡಿದ ಪಠ್ಯಕ್ರಮವನ್ನು ನಾವು ಅನುಸರಿಸುತ್ತಿದ್ದೇವೆ. ನಮಗೆ ರಾಷ್ಟ್ರೀಯ ಶಿಕ್ಷಣ ನೀತಿಯ ಅವಶ್ಯಕತೆ ಇತ್ತು. ಆದರೆ, ರಾಜ್ಯದಲ್ಲಿ ಇದು ಜಾರಿಯಾಗಲಿಲ್ಲ ಎಂದು ವಿಷಾದಿಸಿದರು. ಜಮಖಂಡಿಯ ಸ್ತ್ರೀರೋಗ ತಜ್ಞೆ ಡಾ| ಲಕ್ಷ್ಮೀ ತುಂಗಳ ವೇದಿಕೆಯ ಮೇಲಿದ್ದರು.

ಗಮನ ಸೆಳೆದ ಪಥ ಸಂಚಲನ: ಸಂಕ್ರಾಂತಿ ಹಬ್ಬದ ಅಂಗವಾಗಿ ರಾಷ್ಟ್ರ ಸೇವಿಕಾ ಸಮಿತಿ ಬಾಗಲಕೋಟೆ ಘಟಕ ಹಮ್ಮಿಕೊಂಡಿದ್ದ ಮಹಿಳೆಯರ ಪಥ ಸಂಚಲನ ಸಡಗರದಿಂದ ಜರುಗಿತು. ಮಹಿಳಾ ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನ ನೋಡಲು ಜನರ ದಂಡೇ ಸೇರಿತ್ತು.

ನಗರದ ಪ್ರಮುಖ ಬೀದಿಗಳಲ್ಲಿ ಕೇಸರಿ ಬಾವುಟಗಳು ರಾರಾಜಿಸುತ್ತಿದ್ದವು. ಗಲ್ಲಿ ಗಲ್ಲಿಗಳಲ್ಲಿ ರಸ್ತೆ, ಮನೆಗಳ ಮುಂದೆ ರಂಗೋಲಿಯ ಚಿತ್ತಾರ ಗಮನ ಸೆಳೆಯುತ್ತಿದ್ದವು. ಸಂಜೆ 4ಕ್ಕೆ ಬಸವೇಶ್ವರ ಲೇಜು ಮೈದಾನದಿಂದ ಎರಡು ಮಾರ್ಗಗಳಲ್ಲಿ ಮಹಿಳಾ ಗಣವೇಷಧಾರಿಗಳು ಪಥ ಸಂಚಲನ ಹೊರಟರು. ಸರಿಯಾಗಿ 5:20ಕ್ಕೆ ಪುನಃ ಬಸವೇಶ್ವರ ಮೈದಾನ ತಲುಪಿದರು. ಪಥಸಂಚಲನ ಹೊರಟಮಾರ್ಗದುದ್ದಕ್ಕೂ ಜಯಘೋಷಗಳು ಮೊಳಗಿದವು. ರಸ್ತೆಯ ಇಕ್ಕೆಲಗಳಲ್ಲಿ ಜನರು, ಗಣವೇಷಧಾರಿಗಳಿಗೆ ಹೂವಿನ ಮಳೆಗೈಯುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next