ಗುಳೇದಗುಡ್ಡ: ತಾಲೂಕಿನ ಹಲವು ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆಗಳು ಮತ್ತಷ್ಟು ಹಾಳಾಗುತ್ತಿವೆಯೇ ಹೊರತು ರಸ್ತೆಗಳ ದುರಸ್ತಿ ಕಾಣದಾಗಿದೆ. ವಿವಿಧ ಗ್ರಾಮಗಳಿಂದ ಗುಳೇದಗುಡ್ಡಕ್ಕೆ ಬರುವ ವಿವಿಧ ಗ್ರಾಮಸ್ಥರು ತಗ್ಗು ಗುಂಡಿಗಳಲ್ಲಿ ಎಧ್ದೋ
ಬಿಧ್ದೋ ಬರುವಂತಾಗಿದೆ. ಬೈಕ್ ಸವಾರರು, ಪ್ರಯಾಣಿಕರು ನಿತ್ಯವೂ ಯಮಯಾತನೆ ಪಡುವಂತಾಗಿದೆ.
Advertisement
ಫಲ ನೀಡದ ತೇಪೆ ಕೆಲಸ: ತಾಲೂಕಿನ ಕೊಂಕಣಕೊಪ್ಪ, ನೀರಲಕೇರಿ, ಕೆಲವಡಿ, ಹಂಗರಗಿ ಗ್ರಾಮಗಳ ರಸ್ತೆಗಳಿಗೆಲೋಕೋಪಯೋಗಿ ಇಲಾಖೆ ತಗ್ಗುಗಳಿಗೆ ಕಲ್ಲಿನ ಕಡಿಗಳನ್ನು ಹಾಕಿ ತೇಪೆ ಹಚ್ಚುವ ಕೆಲಸ ಮಾಡುತ್ತಿದೆ. ಆದರೆ ಅದು ಫಲ ನೀಡುತ್ತಿಲ್ಲ. ನಿತ್ಯದ ವಾಹನ ಸಂಚಾರದಿಂದ ಕಡಿಗಳು ಸಹ ಕಿತ್ತು ಹೋಗಿ ಮತ್ತೆ ತಗ್ಗು ಬೀಳುವಂತಾಗಿದೆ.
Related Articles
Advertisement
ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿಯ ಅಲ್ಲೂರ ಎಸ್.ಪಿ. ಕ್ರಾಸ್ ದಿಂದ ಹಳದೂರ ಸಮೀಪದ ಸುಮಾರು 450 ಮೀಟರ್ ರಸ್ತೆ ಬಾಕಿ ಇದೆ. ಇದು ಹಲವು ವರ್ಷಗಳ ಬೇಡಿಕೆಯಾಗಿದೆ. ಇದರ ಜತೆಗೆ ಇದೇ ಮಾರ್ಗದಲ್ಲಿ ಪಾದನಕಟ್ಟಿ ಸಂಪರ್ಕ ನೀಡುವ ಸುಮಾರು ಅರ್ಧ ಕಿ.ಮೀ.ದಷ್ಟು ರಸ್ತೆ ಹಾಳಾಗಿದೆ.
ಗುಳೇದಗುಡ್ಡದಿಂದ ಹುಲ್ಲಿಕೇರಿ ಎಸ್.ಪಿ ಗ್ರಾಮಕ್ಕೆ ಪಟ್ಟಣದಿಂದ ಸಂಪರ್ಕ ನೀಡುವ ಕೆರೆ ಖಾನಾಪೂರ ಗ್ರಾಮದವರೆಗಿನ 3 ಕಿ.ಮೀ ದೂರದ ರಸ್ತೆ ಸಂಪೂರ್ಣ ಹಾಳಾಗಿದೆ. ಇನ್ನು ಪರ್ವತಿ ಗ್ರಾಮ ಪ್ರವೇಶಿಸುವ ಮುಖ್ಯರಸ್ತೆ ಗ್ರಾಮ ಪಂಚಾಯಿತಿಯಿಂದ ಅಂಗನವಾಡಿಯವರೆಗೆ ಸಂಪೂರ್ಣ ಹದಗೆಟ್ಟು ವರ್ಷಗಳೇ ಕಳೆದರೂ ಇದುವರೆಗೂ ನಿರ್ಮಾಣವಾಗಿಲ್ಲ. ಗ್ರಾಮದ ಶಾಲೆಯಿಂದ ಮಾರುತೇಶ್ವರ ಗುಡಿಯವರೆಗೆ ರಸ್ತೆ ನಿರ್ಮಿಸಿದ್ದಾರೆ.ಆದರೆ ಪಂಚಾಯಿತಿ ಮುಂದಿನ ರಸ್ತೆ ಮಾಡಿಲ್ಲ.
ಎಲ್ಲೆಲ್ಲಿ ಹಣ ಮಂಜೂರಾಗಿದೆ: ಕೆಲವಡಿ ಪೆಟ್ರೋಲ್ ಬಂಕಿನಿಂದ ಬಾಗಲಕೋಟೆಯದ್ದು ಅಂದಾಜು 2 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಮಂಜೂರಾಗಿದೆ. ಅದರ ಜತೆಗೆ ನೀಲಾನಗರ ಕೋಟೆಕಲ್ ಮಾರ್ಗದ ರಸ್ತೆ ಸಹ ಮರು ಡಾಂಬರೀಕರಣಕ್ಕೆ 65 ಲಕ್ಷ ರೂ. ಹಣ ಬಿಡುಗಡೆಯಾಗಿದೆ. ಖಾಜಿ ಬೂದಿಹಾಳ ಗ್ರಾಮದ ರಸ್ತೆ ನಿರ್ಮಾಣಕ್ಕೂ ಅನುದಾನ ಬಿಡುಗಡೆಯಾಗಿದೆ. 2 ಕೋಟಿ ರೂ. ವೆಚ್ಚದಲ್ಲಿ ಗುಳೇದಗುಡ್ಡದಿಂದ ಮುರುಡಿ ಗ್ರಾಮದ ರಸ್ತೆ ಅಲ್ಲದೇ ಈ ಎಲ್ಲ ರಸ್ತೆಗಳ ನಿರ್ಮಾಣಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿಯವರು ಮುತುವರ್ಜಿ ವಹಿಸಿ ಕಳೆದ ಎರಡು ತಿಂಗಳಲ್ಲಿ ಅನುದಾನ ಮಂಜೂರು ಮಾಡಿಸಿದ್ದಲ್ಲದೇಭೂಮಿಪೂಜೆ ಸಹ ಮಾಡಿದ್ದಾರೆ. ರಸ್ತೆ ನಿರ್ಮಾಣ ಬಗ್ಗೆ ಅಧಿಕಾರಿಗಳನ್ನು ಕೇಳಿದರೆ ದೀಪಾವಳಿ ನಂತರ ಈ ಎಲ್ಲ ರಸ್ತೆಗಳ ಕಾಮಗಾರಿ ಆರಂಭವಾಗಲಿದೆ ಎನ್ನುತ್ತಾರೆ. ಕ್ರಿಯಾ ಯೋಜನೆ: ತಾಲೂಕಿನ ಕೊಂಕಣಕೊಪ್ಪ ಗ್ರಾಮದ ರಸ್ತೆ, ಸಂಕೇಶ್ವರ ಸಂಗಮ ರಾಜ್ಯ ಹೆದ್ದಾರಿಯ ಅಲ್ಲೂರ ಎಸ್.ಪಿ. ಕ್ರಾಸ್‌ದಿಂದ ಹಳದೂರ ಸಮೀಪದ ಸುಮಾರು 450 ಮೀಟರ್ ರಸ್ತೆ, ಕೆರೆ ಖಾನಾಪೂರ ಎಸ್.ಪಿ ರಸ್ತೆ ಕ್ರಿಯಾ ಯೋಜನೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ ಎಂಬುದು ಅಧಿಕಾರಿಗಳ ಮಾಹಿತಿ. ಪಟ್ಟಣದಿಂದ ಖಾನಾಪೂರ ಎಸ್.ಪಿ ಗ್ರಾಮದ 3 ಕಿಮೀ ರಸ್ತೆ ಹಾಳಾಗಿದ್ದು, ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಹುಲ್ಲಿಕೇರಿ ಎಸ್.ಪಿ. ಖಾನಾಪೂರ ಗ್ರಾಮದ ಜನರು ಸಾಕಷ್ಟು ತೊಂದರೆ ಪಡುವಂತಾಗಿದೆ. ಆದಷ್ಟು ಬೇಗ ಈ 3 ಕಿಮೀ ರಸ್ತೆ ನಿರ್ಮಿಸಬೇಕು.
●ಪಿಂಟು ರಾಠೊಡ,
ಮುಖಂಡ ಹುಲ್ಲಿಕೇರಿ ಎಸ್.ಪಿ. ಕೆಲವಡಿ ಪೆಟ್ರೋಲ್ ಬಂಕ್ ಮುಂದಿನ ರಸ್ತೆ, ಕೋಟೆಕಲ್-ನೀಲಾನಗರ ರಸ್ತೆ, ಮುರುಡಿ ಗ್ರಾಮದ ರಸ್ತೆಗೆ ಶಾಸಕರು ಅನುದಾನ ಮಂಜೂರು ಮಾಡಿಸಿದ್ದಾರೆ. ಅಲ್ಲದೇ ಭೂಮಿಪೂಜೆ ಮಾಡಿದ್ದಾರೆ. ದೀಪಾವಳಿ ನಂತರ ಕೆಲಸ ಆರಂಭವಾಗಲಿದೆ. ಅದರ ಜತೆಗೆ ಅಲ್ಲೂರ ಕ್ರಾಸ್‌ನ 450 ಮೀ ರಸ್ತೆ, ಖಾನಾಪೂರ ಎಸ್.ಪಿ ರಸ್ತೆಯ ಕ್ರಿಯಾಯೋಜನೆ ಮಾಡಿ ಕಳುಹಿಸಲಾಗಿದೆ.
●ಎ.ಕೆ.ಮಕಾಂದಾರ,
ಜೆಇ ಲೊಕೋಪಯೋಗಿ ಇಲಾಖೆ. *ಮಲ್ಲಿಕಾರ್ಜುನ ಕಲಕೇರಿ