Advertisement
ಗದಗ ಜಿಲ್ಲೆಯ ನರಗುಂದ ಸಹಿತ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಒಳಗೊಂಡಿರುವ ಈ ಲೋಕಸಭೆ ಕ್ಷೇತ್ರ ಐವರು ಕಾಂಗ್ರೆಸ್ ಹಾಗೂ ಮೂವರು ಬಿಜೆಪಿ ಶಾಸಕರನ್ನು ಹೊಂದಿದೆ. ಈವರೆಗಿನ 16 ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 10 ಬಾರಿ ಗೆದ್ದಿದೆ. 2004ಕ್ಕೂ ಮುನ್ನ ಈ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. ಇಲ್ಲಿ 1996 (ಜನತಾದಳದಿಂದ ಮೇಟಿ) ಮತ್ತು 1998ರಲ್ಲಿ (ಲೋಕಶಕ್ತಿ ಪಕ್ಷದಿಂದ ಸರನಾಯಕ) ಮಾತ್ರ ಕಾಂಗ್ರೆಸ್ಸೇತರ ಸಂಸದರಾಗಿ ಆಯ್ಕೆಯಾಗಿದ್ದರು. ಇದನ್ನು ಹೊರತುಪಡಿಸಿದರೆ 2004ರಿಂದ ಸತತ ನಾಲ್ಕು ಬಾರಿ ಬಿಜೆಪಿ ಗೆದ್ದಿದೆ.
ಬಿಜೆಪಿಯಲ್ಲಿ ಮಾಜಿ ಸಚಿವರಾದ ನಿರಾಣಿ ಮತ್ತು ಕಾರಜೋಳರ ಬಣಗಳಿದ್ದರೂ ಗದ್ದಿಗೌಡರ ಗೆಲುವಿಗೆ ಅಡ್ಡಿಯಾಗಿಲ್ಲ. ಹೀಗಾಗಿ ಕ್ಷೇತ್ರದ ಮಟ್ಟಿಗೆ ಅವರೇ ಸುರಕ್ಷಿತ ಅಭ್ಯರ್ಥಿ ಎಂಬ ಮಾತಿದೆ. ಹೀಗಾಗಿ ಈ ಬಾರಿಯೂ ಅವರೇ ಅಭ್ಯರ್ಥಿ ಹಾಗೂ ಇದು ಅವರ ಕೊನೆಯ ಚುನಾವಣೆ ಎನ್ನುವ ಟ್ರಂಪ್‌ಕಾರ್ಡ್ ಬಳಸಲು ಪಕ್ಷ ಮುಂದಾಗಲಿದೆ ಎನ್ನಲಾಗಿದೆ. ಜತೆಗೆ ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳ ಹೆಸರು ಕೇಳಿಬರುತ್ತಿದೆ. ಗದ್ದಿಗೌಡರು ಒಲ್ಲೆ ಅಂದ್ರೆ ನಾನು ಅಭ್ಯರ್ಥಿ ಆಗುತ್ತೇನೆ ಎಂದು ಹುನಗುಂದದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದ್ದಾರೆ. ಹೊಸ ಮುಖಕ್ಕೆ ಅವಕಾಶ ಕೊಡುವುದಾದರೆ ಮಾಜಿ ಸಚಿವ ಮುರುಗೇಶ ನಿರಾಣಿ, ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ನಿವೃತ್ತ ಐಎಎಸ್ ಅಧಿಕಾರಿ ಡಾ|ಪ್ರಕಾಶ, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ವೀರಣ್ಣ ಹಳೇಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ ಅದೃಷ್ಟ ಪರೀಕ್ಷೆಯ ನಿರೀಕ್ಷೆಯಲ್ಲಿದ್ದಾರೆ.
Related Articles
ಇನ್ನು ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಈವರೆಗೂ ಲಿಂಗಾಯತ ರಡ್ಡಿ, ಪಂಚಮಸಾಲಿ ಸಮುದಾಯಕ್ಕೆ ಟಿಕೆಟ್ ನೀಡುತ್ತಾ ಬಂದಿರುವ ಪಕ್ಷದಲ್ಲಿ ಈ ಬಾರಿ ಅಹಿಂದ ವರ್ಗಕ್ಕೆ ಟಿಕೆಟ್ ಕೊಡಿ ಎಂಬ ಕೂಗು ಕೇಳಿಬಂದಿದೆ. ಈ ಬೇಡಿಕೆ ಮುಂದಿಟ್ಟಿರುವ ಕಾಂಗ್ರೆಸ್ ಬಣ, ಈವರೆಗೂ ಈ ವರ್ಗಕ್ಕೆ ಟಿಕೆಟ್ ನೀಡದಿರುವುದೇ ಪಕ್ಷದ ಹಿನ್ನಡೆಗೆ ಕಾರಣ ಎಂದು ಹೈಕಮಾಂಡ್ ಎದುರು ದೊಡ್ಡ ಲೆಕ್ಕಾಚಾರದ ಪಟ್ಟಿ ಮುಂದಿಟ್ಟಿದೆ.
Advertisement
ಕಳೆದ ಬಾರಿ ಮೋದಿ ಅಲೆಯಲ್ಲೂ 4.96 ಲಕ್ಷ ಮತ ಪಡೆದಿದ್ದ ರಾಜ್ಯದಲ್ಲೇ ಕಾಂಗ್ರೆಸ್‌ನ ಏಕೈಕ ಮಹಿಳಾ ಅಭ್ಯರ್ಥಿಯಾಗಿದ್ದ ವೀಣಾ ಕಾಶಪ್ಪನವರ ಸೋತರೂ ನಿರಂತರವಾಗಿ ಕ್ಷೇತ್ರ ಸುತ್ತಾಟ ಮುಂದುವರಿಸಿದ್ದಾರೆ. ಕ್ಷೇತ್ರದ ಮೇಲೆ ಗಟ್ಟಿ ಹಿಡಿತ ಹಾಗೂ ಯುವ ಸಮೂಹದ ಬೆಂಬಲ ಅವರಿಗಿದ್ದರೂ ಪಕ್ಷದ ಇತರ ನಾಯಕರು ಒಟ್ಟಾಗಿ ಚುನಾವಣೆ ನಡೆಸುತ್ತಾರಾ ಎಂಬ ಆತಂಕವೂ ಕಾಡುತ್ತಿದೆ.
ಮತ್ತೂಂದೆಡೆ ಕಾಂಗ್ರೆಸ್‌ನಿಂದ ಜಮಖಂಡಿಯ ಮಾಜಿ ಶಾಸಕ ಆನಂದ ನ್ಯಾಮಗೌಡ ಮತ್ತು ಬೀಳಗಿಯ ಧಣಿ ಬಸವಪ್ರಭು ಸರನಾಡಗೌಡ ಹೆಸರು ಮುಂಚೂಣಿಗೆ ಬಂದಿದೆ. ಗದ್ದಿಗೌಡರೇ ಬಿಜೆಪಿ ಅಭ್ಯರ್ಥಿಯಾದರೆ ಅವರದೇ ಜಾತಿಯ ಅಭ್ಯರ್ಥಿಯನ್ನು ಆಯ್ಕೆ ಮಾಡುವ ತಂತ್ರಗಾರಿಕೆ ನಡೆಯುತ್ತಿದೆ ಎನ್ನಲಾಗಿದೆ. ಕಳೆದ ಎರಡು ದಶಕಗಳಿಂದಲೂ ಈ ಕ್ಷೇತ್ರಕ್ಕೆ ಪ್ರತಿ ಬಾರಿ ಸಚಿವ ಶಿವಾನಂದ ಪಾಟೀಲ್ ಹೆಸರು ಕೇಳಿಬರುತ್ತಿದೆ. 2019ರ ಲೋಕ ಚುನಾವಣೆ ಉಸ್ತುವಾರಿ ನಿರ್ವಹಿಸಿದ ಬಳಿಕವಂತೂ ಇದು ಮತ್ತಷ್ಟು ಜೋರಾಗಿದೆ. ಹೀಗಾಗಿ ಈ ಬಾರಿ ಕೊನೆ ಘಳಿಗೆಯಲ್ಲಿ ಅವರೇ ಅಭ್ಯರ್ಥಿಯಾದರೂ ಅಚ್ಚರಿ ಇಲ್ಲ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ.
ಅಹಿಂದ ಕೋಟಾದಡಿ ಕೆಪಿಸಿಸಿ ಸದಸ್ಯೆ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸಿದ್ದಾರೆ. ಅವರೊಂದಿಗೆ ಜಿ.ಪಂ. ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಡಿಸಿಸಿ ಬ್ಯಾಂಕ್ ನಿರ್ದೇಶಕ- ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಕೂಡ ಟಿಕೆಟ್ ಕೇಳಿದ್ದಾರೆ.
ಶ್ರೀಶೈಲ.ಕೆ.ಬಿರಾದಾರ