Advertisement

Bagalkot: ಆಯುರ್ವೇದ ಇಂದು ಹೆಚ್ಚು ಪ್ರಚಲಿತ

05:39 PM Nov 11, 2023 | Team Udayavani |

ಬಾಗಲಕೋಟೆ: ಅಲೋಪತಿಕ್‌ ಔಷಧಕ್ಕೆ ಮೊರೆ ಹೋದ ಅನೇಕ ರೋಗಿಗಳು ಪರ್ಯಾಯ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಬಂದ ರೋಗದಿಂದ ಸಂಪೂರ್ಣ ಗುಣಮುಖರಾಗಲು ಇಂದು ಆಯುರ್ವೇದ ಪದ್ಧತಿಗೆ ಮೊರೆ ಹೋಗುತ್ತಿದ್ದಾರೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

Advertisement

ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆಯುಷ್‌ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅನಾದಿ ಕಾಲದಿಂದಲೂ ಭಾರತೀಯ ಸಂಸ್ಕೃತಿಯಲ್ಲಿ ಋಷಿಮುನಿಗಳು ಯೋಗ, ಆಸನ, ಮುದ್ರಾ, ಯುನಾನಿಗಳಂತಹ ಹಾಗೂ ಔಷಧಿಯ ಸಸ್ಯಗಳ ವನಸ್ಪತಿ ಉಪಯೋಗಿಸಿ ಆಯುರ್ವೇದ ಪದ್ಧತಿ ಅನುಸರಿಸುತ್ತ ನೂರಾರು ವರ್ಷ ಬದುಕುತ್ತಿದ್ದರು. ಆದರೆ ಇಂದು ಒತ್ತಡದ ಬದುಕು ಹಾಗೂ ಕಲುಷಿತ ಆಹಾರ ಪದ್ಧತಿಯಿಂದ ನೂರಾರು ರೋಗಗಳು ಹುಟ್ಟಿಕೊಳ್ಳುವುದಲ್ಲದೇ ಅಲೋಪತಿಯಂತಹ ತ್ವರಿತ ಚಿಕಿತ್ಸೆ ಪಡೆದು ಬಾಹ್ಯರೋಗಕ್ಕೆ ತುತ್ತಾಗುತ್ತಿದ್ದಾರೆ.

ಆಹಾರವೇ ಔಷ ಧಿಯಾಗಿದ್ದು, ಜನರು ಇನ್ನಾದರೂ ಆಹಾರ, ವಿಹಾರ, ಜೀವನಶೈಲಿಯಂತಹ ಆಯುರ್ವೇದ ಪದ್ಧತಿ ಬಳಸಿ ನಿರೋಗಿಗಳಾಗಿ ಬದುಕುವಂತೆ ಸಲಹೆ ನೀಡಿದರು. ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಆಯುರ್ವೇದ ಔಷಧಿ ರೋಗ ಗುಣಪಡಿಸಿಕೊಳ್ಳುವಲ್ಲಿ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂಬ ತಪ್ಪು ನಿರ್ಧಾರದಿಂದ ಈ ಪದ್ಧತಿ ಕುಂಠಿತಗೊಂಡಿದೆ.

ಆದರೆ, ಇಂದಿನ ಕಲಬೆರಕೆ ಆಹಾರ, ರಾಸಾಯನಿಯುಕ್ತ ಆಹಾರದಿಂದ ಆರೋಗ್ಯದಲ್ಲಿ ಏರುಪೇರಾಗಿ ಆಯುಷ್ಯ ಕಡಿಮೆಯಾಗುತ್ತಿದೆ. ಜಿಲ್ಲೆಯಲ್ಲಿ 5,500 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಸರ್ಕಾರ ವಿತರಿಸುತ್ತಿರುವ ಪೌಷ್ಟಿಕ ಆಹಾರ ವಿತರಿಸಿ ಪ್ರತಿಯೊಂದು ಮಗು ಸಮಾಜದ ಆಸ್ತಿಯನ್ನಾಗಿ ರೂಪಿಸುವ ಕಾರ್ಯವಾಗಬೇಕಿದೆ ಎಂದರು.

Advertisement

ವಾಸನ ಗ್ರಾಮದ ನಾಟಿ ವೈದ್ಯ ಹನುಮಂತ ಮಳಲಿ ಮಾತನಾಡಿ, ಮನೆ ಮೊದಲು ಪಾಠ ಶಾಲೆ ಎಂಬಂತೆ ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ದೊರೆಯುವ ಆಹಾರ ಪದಾರ್ಥ ಬಳಸಿಕೊಂಡು ಆರೋಗ್ಯ ಉತ್ತಮವಾಗಿ ಇಟ್ಟುಕೊಳ್ಳಬೇಕು. ಜನತೆ ಆಧುನಿಕತೆಗೆ
ಮರುಳಾಗದೇ ಪ್ರಾಕೃತಿಕವಾಗಿ ಸಿಗುವ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ ಆರೋಗ್ಯವಂತ ಜೀವನ ನಡೆಸಬೇಕು ಎಂದರು.

ಶಾಸಕ ಎಚ್‌.ವೈ. ಮೇಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಆಸ್ಪತ್ರೆ, ಔಷಧಿಗಳು ಇರಲಿಲ್ಲ. ಅಂದು ನಾವೆಲ್ಲ ಅನೇಕ ನಾಟಿ ವೈದ್ಯರ ಬಳಿ ತೆರಳಿ ಗಾಯಗೊಂಡಾಗ ಅರಿಶಿಣ, ಸೀತವಾದಾಗ ತುಳಸಿ, ಕರಿಮೆಣಸು ಉಪಯೋಗಿಸಿ ಆರೋಗ್ಯ ಸುಧಾರಿಸಿಕೊಳ್ಳುತ್ತಿದ್ದೆವು.ಇಂದು ಅನೇಕ ಹೊಸ ಹೊಸ ರೋಗಗಳು ಬರುತ್ತಿವೆ. ಅಲೋಪತಿಕ್‌ ಔಷಧಿಗಳಿಂದಾಗುವ ದುಷ್ಪರಿಣಾಮದಿಂದ ತಾತ್ಕಾಲಿಕ ಶಮನವಾದರೂ ಮತ್ತೆ ರೋಗ ಮರುಕಳಿಸುತ್ತದೆ. ಆದರೆ, ಆಯುರ್ವೇದ ಔಷಧಿಯಿಂದ ನಿಧಾನವಾಗಿ ಕಡಿಮೆಯಾದರೂ ಮರಳಿ ಬರುತ್ತಿರಲಿಲ್ಲ ಎಂದರು. ಬಾದಾಮಿ ಕಾಳಿದಾಸ ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರೊ. ಡಾ|ಸಂಗೀತಾ ಬಳಗಾನೂರ ಅತಿಥಿ ಉಪನ್ಯಾಸ ನೀಡಿದರು. ಇದೇ ವೇಳೆ ಆಯುರ್ವೇದ ಮಾಹಿತಿಯುಳ್ಳ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.

ಈ ವೇಳೆ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಪಂ ಉಪ ಕಾರ್ಯದರ್ಶಿ ಅಮರೇಶ ನಾಯಕ, ಆಯುಷ್‌ ಇಲಾಖೆ ಹಿರಿಯ ವೈದ್ಯಾಧಿಕಾರಿ ಚಂದ್ರಕಾಂತ ರಕ್ಕಸಗಿ, ಜಿಲ್ಲಾ ಆಯುಷ್‌ ಅಧಿಕಾರಿ ಅಕ್ಕಮಹಾದೇವಿ ಗಾಣಿಗೇರ ಸೇರಿದಂತೆ ಇತರರಿದ್ದರು.

ಸಾಮಾನ್ಯ ಕಾಯಿಲೆಗೆ ಆಸ್ಪತ್ರೆಗೆ ಅಲೆದಾಡಿ ಹಣ-ಸಮಯ ಹಾಳು ಮಾಡಿಕೊಳ್ಳಬಾರದು. ಮನೆಯಲ್ಲಿ ಸಿಗುವ ವಸ್ತುಗಳಾದ ಕರಿಮೆಣಸು, ತುಳಸಿ ಎಲೆ, ಶುಂಠಿ, ಕಲ್ಲುಪ್ಪು, ಬೆಲ್ಲ, ರಾಗಿ, ಜೋಳ ಮುಂತಾದವುಗಳನ್ನು ಬಳಸಿ ಕಾಯಿಲೆ ನಿವಾರಿಸಿಕೊಳ್ಳಬಹುದು.
*ಹನುಮಂತ ಮಳಲಿ
ಪಾರಂಪರಿಕ ವೈದ್ಯ

Advertisement

Udayavani is now on Telegram. Click here to join our channel and stay updated with the latest news.

Next