Advertisement

ರೈತರ ಹಿತ ಕಾಪಾಡಲು ಡಿಸಿ ಸೂಚನೆ

03:19 PM Oct 10, 2019 | |

ಬಾಗಲಕೋಟೆ: ಜಿಲ್ಲೆಯ ಎಲ್ಲ ಸಕ್ಕರೆ ಕಾರ್ಖಾನೆಗಳು ತಮ್ಮ ವ್ಯಾಪ್ತಿಯ ಎಲ್ಲ ರೈತ ಮುಖಂಡರ ಸಭೆ ಕರೆದು ಬಾಕಿ ಪಾವತಿ ಹಣ ನೀಡುವ ಬಗ್ಗೆ ಚರ್ಚಿಸಬೇಕು. ರೈತರ ವಿಶ್ವಾಸಕ್ಕೆ ಪಡೆದು ರಸ್ತೆಗಿಳಿಯದಂತೆ ಕ್ರಮ ಕೈಗೊಂಡು ರೈತರ ಹಿತ ಕಾಪಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಕೆ.ರಾಜೇಂದ್ರ ಸೂಚಿಸಿದರು.

Advertisement

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜರುಗಿದ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಎಲ್ಲ ಕಾರ್ಖಾನೆಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಬೇಕು. ಕಡ್ಡಾಯವಾಗಿ ತೂಕ ಮತ್ತು ಅಳತೆ ಬಗ್ಗೆ ಪ್ರಾಮಾಣೀಕರಿಸಿ ವರದಿ ಸಲ್ಲಿಸಲು ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ನರಸನ್ನವರ ಅವರಿಗೆ ನಿರ್ದೇಶನ ನೀಡಿದರು.

ಪ್ರಸಕ್ತ ಸಾಲಿಗೆ ಕಟಾವು ಪೂರ್ವದಲ್ಲಿ ಕಾರ್ಖಾನೆಗಳು ರೈತರೊಂದಿಗೆ ನಿಯಮಾನುಸಾರ ಒಪ್ಪಂದ ಮಾಡಿಕೊಂಡ ನಂತರವೇ ಕಟಾವಿಗೆ ಪರವಾನಗಿ ನೀಡಬೇಕೆಂದು ಕಾರ್ಖಾನೆ ಮಾಲೀಕರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

2016-17 ಹಾಗೂ 2017-18ನೇ ಹಂಗಾಮಿಗೆ ಸಂಬಂಧಿಸಿದಂತೆ ಕಾರ್ಖಾನೆಯವರು ಹೆಚ್ಚುವರಿಯಾಗಿ ಘೋಷಿಸಿಕೊಂಡ ಮೊತ್ತವನ್ನು ತಕ್ಷಣವೇ ಕಬ್ಬು ಪೂರೈಸಿದ ರೈತರಿಗೆ ಪಾವತಿಸಲು ಸೂಚಿಸಿದರು. ಕಬ್ಬು ಕಟಾವು ಮಾಡುವ ಮುಂಚೆ ಪೊಲೀಸ್‌ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಕಾರ್ಖಾನೆ ಮಾಲೀಕರಿಗೆ ಸಭೆಯಲ್ಲಿ ಸೂಚಿಸಲಾಯಿತು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಮಾತನಾಡಿ, ಹೊರ ರಾಜ್ಯದಿಂದ ಬರುವ ಕಬ್ಬಿನ ಗ್ಯಾಂಗ್‌ಗಳ ಮಾಹಿತಿಯನ್ನು ಕಡ್ಡಾಯವಾಗಿ ರಜಿಸ್ಟರ್‌ನಲ್ಲಿ ನೋಂದಣಿಯಾಗಬೇಕು.

ಕಬ್ಬು ಸಾಗಾಣಿಕೆ ಮಾಡುವಾಗ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಗಮನಕ್ಕೆ ತರಬೇಕು. ಇಲ್ಲವೇ ಸ್ಥಳೀಯ ಪೊಲೀಸರ ಗಮನಕ್ಕೆ ತರಲು ತಿಳಿಸಿದರು. ಕಬ್ಬು ಸಾಗಾಣಿಕೆ ಮಾಡುವ ಟ್ರ್ಯಾಕ್ಟರ್‌ಗಳಿಗೆ ಹಾಗೂ ಬಂಡಿಗಳಿಗೆ ಕಡ್ಡಾಯವಾಗಿ ರೇಡಿಯಂ ಲಗತ್ತಿಸಬೇಕು. ಇದರಿಂದ ಅಪಘಾತ ತಡೆಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

Advertisement

ಪ್ರಸ್ತುತ ಹಂಗಾಮಿನಲ್ಲಿ ಕಬ್ಬು ನುರಿಸುವ ಕಾರ್ಯವನ್ನು ನವೆಂಬರ್‌ ಮಾಹೆಯಲ್ಲಿ ಆರಂಭಿಸುವುದಾಗಿ ಸಕ್ಕರೆ ಕಾರ್ಖಾನೆ ಮಾಲೀಕರು ಸಭೆಗೆ ತಿಳಿಸಿದರು. ಜಿಲ್ಲೆಯ ಕೆಲ ಸಕ್ಕರೆ ಕಾರ್ಖಾನೆಗಳು ಎಥೆನಾಲ್‌ ಉತ್ಪಾದನೆಗೆ ಪ್ರಸ್ತಾವನೆ ಬಂದಿದ್ದು, ಸಂಬಂಧಪಟ್ಟ ಇಲಾಖೆಯವರು ಪರಿಶೀಲಿಸಿ ಏಕ ಗವಾಕ್ಷಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಗರಿಮಾ ಪನ್ವಾನ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಬಸವರಾಜ ಸಂದಿಗವಾಡ ಸೇರಿದಂತೆ ವಿವಿಧ ಸಕ್ಕರೆ ಕಾರ್ಖಾನೆ ಮಾಲೀಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next