ಬಾಗಲಕೋಟೆ: ತಾಲೂಕಿನ ಡೋಮನಾಳ ಗ್ರಾಮದಲ್ಲಿ ಉರುಸು ಪ್ರಯುಕ್ತ ಸಾಮೂಹಿಕವಾಗಿ ಪ್ರಸಾದ ಸೇವನೆಯಿಂದ ಸುಮಾರು 48 ಜನ ಅಸ್ವಸ್ಥಗೊಂಡಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕಿತ್ಸೆ ಪಡೆಯುತ್ತಿರುವ ಗ್ರಾಮಸ್ಥರನ್ನು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಬುಧವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಡೋಮನಾಳ ಗ್ರಾಮದಲ್ಲಿ ಮಂಗಳವಾರ ನಡೆದ ಉರುಸು ನಿಮಿತ್ಯ ಸಾಮೂಹಿಕವಾಗಿ ಪ್ರಸಾದ ಸೇವೆ ಮಾಡಿದ್ದರು. ಸಂಜೆ ವೇಳೆ ಗ್ರಾಮಸ್ಥರಲ್ಲಿ ವಾಂತಿ ಭೇದಿ ಉಂಟಾದ ಹಿನ್ನಲೆಯಲ್ಲಿ ಜಿಲ್ಲಾ ಆಸ್ಪತ್ರೆಯಿಂದ 5 ಅಂಬುಲೆನ್ಸ್ ಕಳುಹಿಸಿ ಅಸ್ವಸ್ಥಗೊಂಡ 80 ಜನರಲ್ಲಿ 48 ಜನರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಅದರಲ್ಲಿ 22 ಜನ ಮಕ್ಕಳಿದ್ದಾರೆ. ಯಾವುದೇ ರೀತಿಯ ಜೀವ ಭಯ ಇರುವುದಿಲ್ಲ. ಜಿಲ್ಲಾ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ನರ್ಸ ಸಿಬ್ಬಂದಿಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದರು.
ಇದನ್ನೂ ಓದಿ : ‘ಜೇಮ್ಸ್’ ಚಿತ್ರದ ವಿಚಾರದಲ್ಲಿ ಬಿಜೆಪಿ ಮಾನವೀಯತೆ ತೋರುತ್ತಿಲ್ಲ: ಡಿ.ಕೆ. ಶಿವಕುಮಾರ್
ಡೋಮನಾಳ ಗ್ರಾಮಸ್ಥರು ಅಸ್ವಸ್ಥರಾದ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿರುವದಿಲ್ಲ. ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿ ಬಂದ ಮೇಲೆ ಕಾರಣ ತಿಳಿಯಲಿದೆ ಎಂದರು.
ಭೇಟಿ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ, ತಹಶೀಲ್ದಾರ ಗುರುಸಿದ್ದಯ್ಯ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.