Advertisement

Bagalakote: ಸರಕಾರಿ ವೈದ್ಯೆಯಿಂದಲೇ ಭ್ರೂಣಹತ್ಯೆ!

01:26 AM Jul 25, 2024 | Team Udayavani |

ಬಾಗಲಕೋಟೆ: ಜಿಲ್ಲೆಯ ಮಹಾಲಿಂಗಪುರದಲ್ಲಿ ಕಳೆದ ತಿಂಗಳು ನಡೆದ ಭ್ರೂಣಹತ್ಯೆ ಪ್ರಕರಣದ ಬೆನ್ನಲ್ಲೇ ಇದೀಗ ಬಾಗಲಕೋಟೆ ಜಿಲ್ಲೆಯ ಸರಕಾರಿ ವೈದ್ಯೆಯೊಬ್ಬರು ತಾವೇ ಭ್ರೂಣಹತ್ಯೆ ಮತ್ತು ಪತ್ತೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದಾರೆ.

Advertisement

ಅನಾಮಧೇಯ ಪತ್ರದ ಜಾಡು ಹಿಡಿದು ಆಗಮಿಸಿದ್ದ ಕೇಂದ್ರ ಸರಕಾರದ ದಿಲ್ಲಿಯ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ತಡೆ ಕಾಯ್ದೆಯ 10ಕ್ಕೂ ಹೆಚ್ಚು ಅಧಿಕಾರಿಗಳ ವಿಶೇಷ ತಂಡ (ಪಿಸಿ ಮತ್ತು ಪಿಎನ್‌ಡಿಟಿ) ಬುಧವಾರ ಜಿಲ್ಲೆಯಲ್ಲಿ ದಾಳಿ ನಡೆಸಿತು. ಆಗ ಬಾದಾಮಿ ಸರಕಾರಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ವೈದ್ಯರಾಗಿರುವ ಡಾ| ಕವಿತಾ ಶಿವನಾಯ್ಕರ ಒಡೆತನದ ರೇಣುಕಾ ಆಸ್ಪತ್ರೆಯಲ್ಲಿ ಭ್ರೂಣಲಿಂಗ ಪತ್ತೆ ಮಾಡುವ ಸಾಮಗ್ರಿಗಳು ಪತ್ತೆಯಾಗಿವೆ. ಅಲ್ಲದೇ ಈ ಆಸ್ಪತ್ರೆಯಲ್ಲಿ ಹಲವು ಭ್ರೂಣಲಿಂಗ ಪತ್ತೆ ಮಾಡಿರುವುದು ಖಚಿತಪಟ್ಟಿದ್ದು, ಅವರೂ ಸೇರಿದಂತೆ ಆಸ್ಪತ್ರೆ ಒಡೆತನ ಹೊಂದಿರುವ ಮೂವರ ವಿರುದ್ಧ ಆರೋಗ್ಯ ಇಲಾಖೆ ದೂರು ನೀಡಲು ಮುಂದಾಗಿದೆ.

ಇದಲ್ಲದೇ ಜಿಲ್ಲೆಯ ಮುಧೋಳದ ಡಾ| ಆಶಾ ಮಲಘಾಣ ಒಡೆತನದ ಮಲಘಾನ ಆಸ್ಪತ್ರೆ, ಬಾದಾಮಿಯ ರೇಣುಕಾ ಆಸ್ಪತ್ರೆ, ಗುಳೇದಗುಡ್ಡದ ಡಾ| ಭಂಟನೂರ ಅವರ ಬನಶಂಕರಿ ಆಸ್ಪತ್ರೆ ಮೇಲೂ ದಾಳಿ ನಡೆಸಲಾಗಿದೆ. ದಾಳಿ ವೇಳೆ ಸ್ಕ್ಯಾನಿಂಗ್‌ ಯಂತ್ರಗಳು ಪತ್ತೆಯಾಗಿದ್ದು ಎಲ್ಲವನ್ನೂ ವಶಕ್ಕೆ ಪಡೆದು, ಆಸ್ಪತ್ರೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಮುಧೋಳದ ಡಾ| ಆಶಾ ಮಲಘಾನ ವಿರುದ್ಧ ಹಿಂದೆಯೂ ಇದೇ ರೀತಿ ಆರೋಪ ಬಂದಾಗ ಅವರ ಆಸ್ಪತ್ರೆಯನ್ನು ಬಂದ್‌ ಮಾಡಿಸಲಾಗಿತ್ತು.

” ಕೇಂದ್ರದ ತಂಡ ಜಿಲ್ಲೆಯ 3 ಆಸ್ಪತ್ರೆಗಳ ಮೇಲೆ ದಾಳಿ ನಡೆಸಿದ್ದು, ಅನಧಿಕೃತವಾಗಿ ಭ್ರೂಣಲಿಂಗ ಪತ್ತೆ ಮಾಡಿರುವುದು ಕಂಡು ಬಂದಿದೆ. ಬಾದಾಮಿ ಸರಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ| ಕವಿತಾ ಶಿವನಾಯ್ಕರ, ಖಾಸಗಿ ಆಸ್ಪತ್ರೆ ಹೊಂದಿರುವ ಜತೆಗೆ ಭ್ರೂಣಲಿಂಗ ಪತ್ತೆ ಮಾಡಿದ್ದಾರೆ. ಅಲ್ಲಿ ಗರ್ಭಪಾತ ಮಾಡಿರುವ ದಾಖಲೆಗಳೂ ಸಿಕ್ಕಿವೆ. ಯಾರೇ ತಪ್ಪು ಮಾಡಿದರೂ ಕಠಿನ ಕ್ರಮ ಕೈಗೊಳ್ಳಲಾಗುವುದು.” – ಡಾ. ಜಯಶ್ರೀ ಎಮ್ಮಿ, ಡಿಎಚ್‌ಒ, ಬಾಗಲಕೋಟೆ

Advertisement

Udayavani is now on Telegram. Click here to join our channel and stay updated with the latest news.

Next