ಬಾಗಲಕೋಟೆ: ಮತದಾರರು ಹಾಗೂ ಸಾರ್ವಜನಿಕರು ಚುನಾವಣಾ ಸಂಬಂಧಿತ ವಿಷಯಗಳಿಗೆ ಕೇಳುವ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಭವನದಲ್ಲಿ ತೆರೆಯಲಾದ ಜಿಲ್ಲಾ ಮತದಾರರ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಚಾಲನೆ ನೀಡಿದರು.
ಸಹಾಯವಾಣಿ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವ್ಯಕ್ತಿಗಳು ಜಿಲ್ಲೆಯ ಮತದಾರರ ಸಹಾಯವಾಣಿಗೆ ಕರೆ ಮಾಡಲು 1950 ಸಂಖ್ಯೆಗೆ ಲ್ಯಾಂಡ್‌ಲೈನ್ ಅಥವಾ ಮೊಬೈಲ್ ಪೋನ್‌ದಿಂದ ಕರೆ ಮಾಡಿ ಮತದಾರರ ಹೆಸರು ನೋಂದಣಿ, ಹೆಸರು ತೆಗೆದು ಹಾಕಲು ಹಾಗೂ ಸ್ಥಳಾಂತರ ಅರ್ಜಿ ಸಲ್ಲಿಸಲು, ಚುನಾವಣಾ ಸಂಬಂಧಿತ ದೂರು, ಮಾಹಿತಿ ಪಡೆಯಬಹುದಾಗಿದೆ ಎಂದರು.
ಜಿಲ್ಲಾ ಸಹಾಯವಾಣಿ ಕೇಂದ್ರಕ್ಕೆ ಪ್ರತ್ಯೇಕವಾದ ಶುಲ್ಕ ರಹಿತ ದೂರವಾಣಿ ಸೌಕರ್ಯ ಕಲ್ಪಿಸಲಾಗಿದೆ. ದೂರವಾಣಿಯಲ್ಲಿ ಪಿಆರ್‌ಐ ಸೌಲಭ್ಯವಿದ್ದು, ಒಂದೇ ಸಲ ಹಲವು ಕರೆಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ. ಸಹಾಯವಾಣಿ ಕೇಂದ್ರದಲ್ಲಿ ಸರ್ವರ್, ಕಂಪ್ಯೂಟರ್, ಪ್ರಿಂಟರ್, ಸ್ಕಾ ್ಯ ನ್, ಇಪಿಬಿಎಕ್ಸ್, ಕರೆದಾರರಿಗೆ ಹೆಡ್‌ಸೆಟ್, ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲಾಗಿದೆ. ಬೇರೆ ಜಿಲ್ಲೆಗಳಿಂದ ಅಥವಾ ಹೊರ ರಾಜ್ಯಗಳಿಂದ ಬಂದು ನಿರ್ದಿಷ್ಟ ಜಿಲ್ಲೆಯ ಸಹಾಯವಾಣಿ ಸಂಪರ್ಕಿಸಬೇಕಾದಲ್ಲಿ ಆ ಜಿಲ್ಲೆಯ ಎಸ್‌ಟಿಡಿ ಕೋಡ್‌ನ್ನು ಮೊದಲು ಉಪಯೋಗಿಸಿ 1950 ಸಂಖ್ಯೆಗೆ ಡಯಲ್ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಮತದಾರರ ಪಟ್ಟಿಯಲ್ಲಿ ಹೊಸದಾಗಿ ಹೆಸರು ಸೇರ್ಪಡೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಮಾಹಿತಿ ಯಾವ ಹಂತದಲ್ಲಿದೆ, ಮತದಾರರ ಪಟ್ಟಿ ಪರಿಷ್ಕರಣೆ ನಂತರವೂ ಕೆಲವು ವ್ಯಕ್ತಿಗಳ ಹೆಸರು ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿರುವ ಪ್ರಕರಣಗಳು, ಮೃತ ಪಟ್ಟಿರುವ ವ್ಯಕ್ತಿಯ ಹೆಸರು ಇನ್ನು ಮುಂದುವರಿದಿರುವ ಬಗ್ಗೆ, ಮತಕ್ಷೇತ್ರದಿಂದ ಬೇರೆಡೆಗೆ ಸ್ಥಳಾಂತರವಾಗಿದ್ದು ಅಂತಹ ವ್ಯಕ್ತಿಗಳು ಮೊದಲಿದ್ದ ಸ್ಥಳದಲ್ಲಿ ಸಾಮಾನ್ಯ ನಿವಾಸಿಯಾಗಿಲ್ಲದಿರುವ ಪ್ರಕರಣಗಳು ಇತ್ಯಾದಿ ದೂರು ಕರೆದಾರರು ನೀಡಿದಲ್ಲಿ ಅವುಗಳ ವಿವರಗಳನ್ನು ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಪಂ ಸಿಇಒ ಗಂಗೂಬಾಯಿ ಮಾನಕರ, ಅಪರ ಜಿಲ್ಲಾಧಿಕಾರಿ ದುರುಗೇಶ ರುದ್ರಾಕ್ಷಿ, ಚುನಾವಣಾ ತಹಶೀಲ್ದಾರ್ ಪಾಂಡವ, ಜಿಲ್ಲಾ ಅಂಕಿ ಸಂಖ್ಯೆ ಇಲಾಖೆ ಅಧಿಕಾರಿ ದಿವಟರ, ಎಂ.ಬಿ. ಗುಡೂರ ಉಪಸ್ಥಿತರಿದ್ದರು.