Advertisement
ರಾಷ್ಟ್ರೀಯ ಮಾನ್ಯತೆ ಹೊಂದಿರುವ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಶೇ. 80ರಷ್ಟು ಅನುದಾನ ಭರಿಸಲಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಶೇ. 20ರಷ್ಟು ಅನುದಾನ ನೀಡಬೇಕಾಗಿದೆ ಅದರಲ್ಲಿ ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‌ನಲ್ಲಿ 3 ಸಾವಿರ ಕೋಟಿ ಅನುದಾನದ ಘೋಷಣೆ ಮಾಡಿರುವುದು ಜಗಳೂರು ತಾಲೂಕಿನ ನೀರಿನ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ.
Related Articles
Advertisement
ಭದ್ರಾ ಮೇಲ್ದಂಡೆ ಯೋಜನೆಯ ಮೂಲಕ ಜಗಳೂರು ತಾಲೂಕಿನ ಸಂಗೇನಹಳ್ಳಿ, ಬಿದರಕೆರೆ, ಭರಮಸಮುದ್ರ, ಮೆದಗಿನ ಕೆರೆ, ಜಮ್ಮಾಪುರ, ನಿಬಗೂರು, ರಸ್ತೆ ಮಾಚಿಕೆರೆ ಮತ್ತು ಜಗಳೂರು ಒಳಗೊಂಡಂತೆ ಒಟ್ಟು 9 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕೆರೆಗಳಲ್ಲಿ ನೀರು ತುಂಬಿಸಿ 2.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿಗೆ ನೀರು ಬಳಕೆ ಮಾಡಲಾಗುತ್ತದೆ. ಕೆರೆಗಳಲ್ಲಿನ ನೀರನ್ನು ಶುದ್ಧೀಕರಿಸಿ ಕುಡಿವ ನೀರಿಗೆ ಒದಗಿಸುವ ಮಹತ್ತರ ಯೋಜನೆಗೆ ಸರ್ಕಾರ ಮೂರು ಸಾವಿರ ಕೋಟಿ ಅನುದಾನ ಮೀಸಲಿಟ್ಟಿರುವುದು ತಾಲೂಕಿನ ಜನರಲ್ಲಿ ನೀರಿನ ಸಮಸ್ಯೆ ಬಗೆಹರಿಯುವ ಆಶಾಭಾವನೆ ಮೂಡಿಸಿದೆ.
ಆದಷ್ಟು ಬೇಗ ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಗತವಾಗಲಿ ಎಂಬುದು ಸಾರ್ವಜನಿಕರು, ರೈತಾಪಿ ವರ್ಗದ ಒತ್ತಾಸೆ. ಅದಕ್ಕೆ ಪೂರಕವಾಗಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ಅನುದಾನಘೋಷಣೆ ಮಾಡಿರುವುದು ಉತ್ತಮ ಬೆಳವಣಿಗೆ.
ಏನೇನು ಅನುಕೂಲ?
ಕೆರೆಗಳಲ್ಲಿ ನೀರು ನಿಲ್ಲುವುದರಿಂದ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ. ಇದರಿಂದ ಸಹಜವಾಗಿಯೇ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ. ಹೀಗೆ ಒಂದು ಯೋಜನೆ ಅನೇಕ ಲಾಭ ತಂದುಕೊಡಲಿದೆ. ಭದ್ರಾ ಮೇಲ್ದಂಡೆ ಯೋಜನೆಡಯಡಿ ಜಗಳೂರು ತಾಲೂಕಿನ ಸೇರ್ಪಡೆಗೆ ಒತ್ತಾಯಿಸಿ ಐತಿಹಾಸಿಕ ಹೋರಾಟವೇ ನಡೆದಿತ್ತು. ನಿರಂತರವಾಗಿ ನೂರಾರು ದಿನಗಳ ಕಾಲ ಇಲ್ಲಿನ ಜನರು ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಎಲ್ಲ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲೂಕು ಸೇರ್ಪಡೆ ಆಗಿದೆ. 5 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯಡಿ 2.10 ಟಿಎಂಸಿ ನೀರು ಜಗಳೂರು ತಾಲೂಕಿಗೆ ಮಂಜೂರಾಗಿದೆ. ಹದವಾದ ಮಳೆಯನ್ನೇ ಕಾಣದ ಜನರ ಪಾಲಿಗೆ 2.10 ಟಿಎಂಸಿ ನೀರು ದೊರೆಯುತ್ತಿರುವುದು ಸಹಜವಾಗಿ ಸಂತಸ ಮೂಡಿಸಿದೆ. ಭದ್ರಾ ಮೇಲ್ದಂಡೆ ಯೋಜನೆ ಜೊತೆಗೆ ದೀಟೂರು ಏತ ನೀರಾವರಿ ಯೋಜನೆಯ ಮೂಲಕವೂ ನೀರು ದೊರೆಯುವಂತಾಗುತ್ತಿರುವುದು ಜಗಳೂರು ತಾಲೂಕಿನ ಚಿತ್ರಣವೇ ಬದಲಾಗುವ ವಾತಾವರಣದ ನಿರ್ಮಾಣಕ್ಕೆ ಕಾರಣವಾಗುತ್ತಿದೆ. ತಾಲೂಕಿನ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಯ ಮೊದಲ ಹೆಜ್ಜೆಯಾಗಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚೊಚ್ಚಲ ಬಜೆಟ್‌ನಲ್ಲಿ ಮೂರು ಸಾವಿರ ಕೋಟಿ ಮೀಸಲಿ ಟ್ಟಿರುವುದು ಜಗಳೂರುಗೆ ಮಾತ್ರವಲ್ಲ ನೆರೆಯ ಚಿತ್ರದುರ್ಗ, ಮೊಳಕಾಲ್ಮೂರು ತಾಲೂಕಿನ ಭಾಗಕ್ಕೂ ಅನುಕೂಲವಾಗಲಿದೆ.
ಭದ್ರಾ ಮೇಲ್ದಂಡೆ ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆ ಪರಿಹಾರ ದೊರೆಯುವ ಜೊತೆಯಲ್ಲಿ 2.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿಗೆ ಅವಕಾಶ ಇರುವುದರಿಂದ ದುಡಿಯುವ ಕೈಗಳಿಗೆ ಕೆಲಸ ದೊರೆಯಲಿದೆ. ಆರ್ಥಿಕ ವಾತಾವರಣ ಉತ್ತಮವಾಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಜಗಳೂರು ತಾಲೂಕಿನ 9 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕುಡಿಯುವ ನೀರಿನ ಜೊತೆಗೆ 2.10 ಲಕ್ಷ ಹೆಕ್ಟೇರ್‌ನಲ್ಲಿ ಹನಿ ನೀರಾವರಿ ಆಗುವುದರಿಂದ ಸಾಕಷ್ಟು ಅನುಕೂಲ ಆಗಲಿದೆ. ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳ್ಳುವಂತಾಗಬೇಕು.
–ಕೆ.ಬಿ. ಕಲ್ಲೇರುದ್ರೇಶ್, ಸದಸ್ಯರು,
ಭದ್ರಾ ಮೇಲ್ದಂಡೆ ಯೋಜನೆ ತಾಂತ್ರಿಕ ಸಮಿತಿ