Advertisement

Nidle: ಕಾಡುಕೋಣ ಹತ್ಯೆ; ಶಂಕಿತ ಆರೋಪಿಗಳು ಪರಾರಿ

12:33 AM Oct 14, 2024 | Team Udayavani |

ಉಪ್ಪಿನಂಗಡಿ: ವಲಯ ಅರಣ್ಯ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿರುವ ಆರೋಪದ ಬೆನ್ನಲ್ಲೇ, ಹಾಡಹಗಲೇ ನಾಲ್ವರು ಬೇಟೆಗಾರರ ತಂಡ ಭಾರೀ ಗಾತ್ರದ ಕಾಡುಕೋಣವನ್ನು ಕೊಂದು ಒಣ ಮಾಂಸವನ್ನಾಗಿ ಪರಿವರ್ತಿಸಿದ ಘಟನೆಯನ್ನು ಉಪ್ಪಿನಂಗಡಿ ಅರಣ್ಯಾಧಿಕಾರಿಗಳ ತಂಡ ಪತ್ತೆ ಹಚ್ಚಿದೆ.

Advertisement

ನಿಡ್ಲೆ ಗ್ರಾಮದ ಬೂಡುಜಾಲಿನಲ್ಲಿ ಅ. 11ರಂದು ಬೆಳಗ್ಗೆ ಮೀಸಲು ಅರಣ್ಯದ ಅಂಚಿನಲ್ಲಿರುವ ತೋಟ ದಲ್ಲಿ ಕಾಡುಕೋಣ ವೊಂದನ್ನು ಗುಂಡಿಕ್ಕಿ ಕೊಂದು ಕಾಡಿನಲ್ಲೇ ಕತ್ತರಿಸಿ ಪಿಕ್‌ಅಪ್‌ ವಾಹನದ ಮೂಲಕ ಸಾಗಿಸಿರುವ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿತ್ತು. ಬೂಡುಜಾಲು ಅರಣ್ಯ ಅಂಚಿನಲ್ಲಿ ಇರುವ ತೋಟಕ್ಕೆ ಬೃಹತ್‌ ಗಾತ್ರದ ಕಾಡುಕೋಣ ಬರುತ್ತಿತ್ತೆನ್ನಲಾಗಿದ್ದು, ಇದಕ್ಕಾಗಿ ಕಾದು ಕುಳಿತಿದ್ದ ಶಿಬಾಜೆ ಹಾಗೂ ಶಿರಾಡಿ ಪರಿಸರದವರನ್ನು ಒಳಗೊಂಡ ತಂಡ ಗುರುವಾರ ರಾತ್ರಿ ಬೇಟೆಯಾಡಿದೆ ಎಂದು ತಿಳಿದುಬಂದಿದೆ.

ಗುಂಡೇಟು ತಿಂದ ಕಾಡುಕೋಣ ಓಡಿ ಹೋಗಿದ್ದು, ಮರುದಿನ ಕಾಡಿನಲ್ಲಿ ಹುಡುಕಾಡಿ ಅನತಿ ದೂರದಲ್ಲಿ ಗಾಯಗೊಂಡು ಬಿದ್ದಿದ್ದ ಕಾಡುಕೋಣವನ್ನು ಪತ್ತೆ ಹಚ್ಚಿ ಕೊಲ್ಲಲಾಗಿದೆ.

ಕೊಂದ ಕಾಡುಕೋಣವನ್ನು ಅಲ್ಲೇ ತುಂಡು ಮಾಡಲಾಗಿ ಆರೋಪಿಗಳ ಪೈಕಿ ಓರ್ವನಾದ ರಾಜು ಮನೆಗೆ ಪಿಕ್‌ಅಪ್‌ ವಾಹನದಲ್ಲಿ ತಂದು ಅಲ್ಲಿ ಅದನ್ನು ಒಣ ಮಾಂಸವಾಗಿ ಪರಿವರ್ತಿಸಿ ಶೇಖರಿಸಿ ಇಡಲಾಗಿರುವುದನ್ನು ವಲಯ ಅರಣ್ಯಾಧಿಕಾರಿ ರಾಘವೇಂದ್ರ ರವರ ತಂಡ ಪತ್ತೆ ಹಚ್ಚಿದೆ.

ಮೀಸಲು ಅರಣ್ಯ ಪ್ರದೇಶದ ಅಂಚಿನಲ್ಲಿ ಇರುವ ನಿಡ್ಲೆ, ಶಿಬಾಜೆ, ಶಿರಾಡಿ ಪರಿಸರದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆಯಾಡುವ ತಂಡವೊಂದು ಕಾಡು ಪ್ರಾಣಿಗಳನ್ನು ಭೇಟಿಯಾಡಿ ಬಳಿಕ ಅದನ್ನು ಒಣ ಮಾಂಸವನ್ನಾಗಿ ಮಾಡಿ ಒಣಗಿಸಿ 3ರಿಂದ 5, 10 ಕೆ.ಜಿ.ಯ ಪ್ಯಾಕ್‌ ಮಾಡಿ ಕೇರಳ ಸಾಗಾಟ ಮಾಡಲಾಗುತ್ತಿದೆ. ಈ ರೀತಿಯಾಗಿ ಒಣಗಿಸಿದ ಮಾಂಸ 1 ಕೆ.ಜಿ.ಗೆ 1,300 ರೂಪಾಯಿಯಿಂದ 1,500 ರೂಪಾಯಿ ತನಕ ಭಾರೀ ಬೇಡಿಕೆಯಲ್ಲಿ ಮಾರಾಟ ನಡೆಯುತ್ತದೆ ಎಂದು ಹೇಳಲಾಗಿದ್ದು, ಇಲ್ಲಿನ ತಂಡವೊಂದು ಇದೇ ಕೃತ್ಯದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಲಾಗಿದೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಶಂಕಿತ ಆರೋಪಿಗಳೆಲ್ಲರೂ ಪರಾರಿಯಾಗಿದ್ದು, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿಗಳಿಂದ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next