Advertisement
74 ನಿಮಿಷಗಳ ತೀವ್ರ ಪೈಪೋಟಿಯ ಹೋರಾಟದಲ್ಲಿ ಸೈನಾ 21-12, 17-21, 10-21 ಗೇಮ್‌ಗಳಿಂದ ಪಂದ್ಯ ಕಳೆದುಕೊಂಡರು. ಭರ್ಜರಿ ಆಟದ ಮೂಲಕ ಮೊದಲ ಗೇಮ್ ವಶಪಡಿಸಿಕೊಂಡ ಸೈನಾ ದ್ವಿತೀಯ ಗೇಮ್‌ನಲ್ಲಿ ಪ್ರಬಲ ಹೋರಾಟ ನಡೆಸಿದರು. ಇಬ್ಬರೂ ಸಮಬಲದ ಕಾದಾಟ ನಡೆಸಿದರೂ ಪಂದ್ಯ ಸಾಗುತ್ತಿದ್ದಂತೆ ಒಕುಹಾರಾ ಮೇಲುಗೈ ಸಾಧಿಸಿ 21-17ರಿಂದ ಗೇಮ್ ಗೆದ್ದರು. ನಿರ್ಣಾಯಕ ಗೇಮ್‌ನಲ್ಲಿ ಸೈನಾ ಮುನ್ನಡೆ ಸಾಧಿಸಿದ್ದರೂ ಆಬಳಿಕ ಸತತ 9 ಅಂಕ ಗೆಲ್ಲುವ ಮೂಲಕ ಒಕುಹಾರಾ ತಿರುಗೇಟು ನೀಡಿದರಲ್ಲದೇ 21-10ರಿಂದ ಗೇಮ್ ಗೆದ್ದು ಫೈನಲಿಗೇರಿದರು. ಒಕುಹಾರಾ ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಫೈನಲಿಗೇರಿದ ಜಪಾನಿನ ಮೊದಲ ಆಟಗಾರ್ತಿಯಾಗಿದ್ದಾರೆ.
ಸೈನಾ ಮತ್ತು ಒಕುಹಾರಾ ಈ ಹಿಂದೆ 7 ಬಾರಿ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಮುಖಾ ಮುಖೀಯಾಗಿದ್ದು ಸೈನಾ ಆರರಲ್ಲಿ ಗೆದ್ದು ಪ್ರಾಬಲ್ಯ ಸ್ಥಾಪಿಸಿದ್ದರು. ಆದರೆ ಇಲ್ಲಿ ಸೈನಾ ತೀವ್ರ ಹೋರಾಡಿದರೂ ಗೆಲುವು ಒಲಿಸಿಕೊಳ್ಳಲು ವಿಫಲರಾಗಿ ನಿರಾಶೆ ಅನುಭವಿಸಿದರು. ಒಕುಹಾರಾ ಸತತ ಎರಡನೇ ಪಂದ್ಯದಲ್ಲಿ ಮೂರು ಗೇಮ್‌ಗಳ ಕಠಿನ ಹೋರಾಟದಲ್ಲಿ ಎದುರಾಳಿಯನ್ನು ಸದೆಬಡಿದ್ದಾರೆ. ಈ ಮೊದಲು ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಅವರು ಎರಡು ಬಾರಿಯ ಹಾಲಿ ಚಾಂಪಿಯನ್ ಸ್ಪೇನ್‌ನ ಕ್ಯಾರೋಲಿನಾ ಮರಿನ್ ಅವರನ್ನು 21-18, 14-21, 21-15 ಗೇಮ್‌ಗಳಿಂದ ಉರುಳಿಸಿದ್ದರು. ಫೈನಲ್ ಹೋರಾಟದಲ್ಲಿ ಅವರು ಸಿಂಧು ಅಥವಾ ಚೀನದ ಚೆನ್ ಯುಫೆಯಿ ಅವರನ್ನು ಎದುರಿಸಲಿದ್ದಾರೆ.
Related Articles
ನಾಲ್ಕನೇ ಶ್ರೇಯಾಂಕದ ಸಿಂಧು ಚೀನದ ಸನ್ ಯು ಅವರನ್ನು 21-14, 21-9 ಗೇಮ್‌ಗಳಿಂದ ಕೆಡಹಿ ಸೆಮಿಫೈನಲಿಗೇರಿದ್ದಾರೆ. 39 ನಿಮಿಷಗಳಲ್ಲಿ ಈ ಪಂದ್ಯ ಗೆದ್ದ ಸಿಂಧು ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಹ್ಯಾಟ್ರಿಕ್ ಪದಕ ಖಚಿತಪಡಿಸಿದರು. 22ರ ಹರೆಯದ ರಿಯೋ ಬೆಳ್ಳಿ ವಿಜೇತೆ ಸಿಂಧು 2013 ಮತ್ತು 2014ರಲ್ಲಿ ಕಂಚಿನ ಪದಕ ಪಡೆದಿದ್ದರು. ಒಂದು ವೇಳೆ ಸೆಮಿಫೈನಲ್ ಪಂದ್ಯ ಗೆದ್ದರೆ ಬೆಳ್ಳಿ ಅಥವಾ ಚಿನ್ನ ಗೆಲ್ಲುವ ಸಾಧ್ಯತೆಯಿದೆ. ಪುರುಷರ ಸಿಂಗಲ್ಸ್‌ನಲ್ಲಿ ಹಾಲಿ ಚಾಂಪಿಯನ್ ಚೀನದ ಚೆನ್ ಲಾಂಗ್ ಅವರನ್ನು 21-9, 21-10 ಗೇಮ್‌ಗಳಿಂದ ಕೆಡಹಿದ ವಿಕ್ಟರ್ ಆ್ಯಕ್ಸೆಲ್ಸೆನ್ ಪುರುಷರ ವಿಭಾಗದಲ್ಲಿ ಫೈನಲಿಗೇರಿದ್ದಾರೆ.
Advertisement