ಕಾರ್ಕಳ: ಹಳ್ಳಿಯ ಮನೆಯಂಗಳದಲ್ಲಿ ಅಪ್ಪನ ಜತೆ ಬ್ಯಾಡ್ಮಿಂಟನ್ ಆಟವಾಡುತ್ತ ಬೆಳೆದ ಬಾಲಕ ಇಂದು ಬಿಡಬ್ಲ್ಯೂ ಎಫ್ ಜೂನಿಯರ್ ವಿಶ್ವ ಬ್ಯಾಡ್ಮಿಂಟನ್ ಚಾಂಪಿ ಯನ್‌ಶಿಪ್‌ನಲ್ಲಿ ಭಾರತ ತಂಡದ ನಾಯಕ. ಕಾರ್ಕಳ ತಾಲೂಕಿನ ಸಾಣೂರಿನ ಆಯುಷ್ ಶೆಟ್ಟಿ ಈ ಸಾಧಕ ಆಗಿದ್ದಾರೆ.
ಸೆ. 25ರಿಂದ ಅಮೆರಿಕದಲ್ಲಿ ಆರಂಭ ವಾಗಲಿರುವ ಬಿಡಬುÉಎಫ್ ಜೂ. ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ಗೆ 16 ಆಟಗಾರರ ಭಾರತ ತಂಡವನ್ನು ಆಯ್ಕೆ ಮಾಡಲಾಗಿದ್ದು ಅದರಲ್ಲಿ ಕರ್ನಾಟಕದ ಆಯುಷ್ ಶೆಟ್ಟಿ ಹಾಗೂ ಉನ್ನತಿ ಕ್ರಮವಾಗಿ ಬಾಲಕ ಮತ್ತು ಬಾಲಕಿಯರ ತಂಡವನ್ನು ಮುನ್ನಡೆಸಲಿದ್ದಾರೆ.
ಆಟಗಾರರ ಆಯ್ಕೆ ಸಂಬಂಧ ಜು. 26ರಿಂದ 29ರ ವರೆಗೆ ಆಯ್ಕೆ ಟ್ರಯಲ್ಸ್ ನಡೆದಿತ್ತು. ಎರಡು ಬಾರಿ ಅಂಡರ್ – 19 ವಯೋಮಿತಿಯಲ್ಲಿ ಚಾಂಪಿಯನ್ ಆಗಿದ್ದ ಆಯುಷ್ ಶೆಟ್ಟಿ ಟ್ರಯಲ್ಸ್‌ನಲ್ಲಿ ಅಗ್ರಸ್ಥಾನ ಪಡೆದು ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ.
ಆಯುಷ್ ಶೆಟ್ಟಿ 2021ರಲ್ಲಿ ವಿಕ್ಟರ್ ಡೆನ್ಮಾರ್ಕ್ ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನ, 2022ರಲ್ಲಿ ಡಿಡಬ್ಲ್ಯೂಎಫ್ ವಿಶ್ವ ಜೂನಿಯರ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2022ರಲ್ಲಿ ಭಾರತ ಜೂನಿಯರ್ ಇಂಟರ್‌ನ್ಯಾಶನಲ್ ಗ್ರ್ಯಾನ್‌ಪ್ರಿಯಲ್ಲಿ ಕಂಚಿನ ಪದಕ ಪಡೆದಿದ್ದ ಅವರು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹಲವು ಪಂದ್ಯಾಟ ಗಳಲ್ಲಿ ಗಮನಾರ್ಹ ಸಾಧನೆ ತೋರಿದ್ದಾರೆ. ಡೆನ್ಮಾರ್ಕ್, ಸ್ಪೇನ್, ಪುಣೆ, ಯುಎಸ್‌ಎ, ಬೆಂಗಳೂರು, ಪಂಚಕುಲ, ಗೋವಾ ಮೊದಲಾದ ಕಡೆ ಆಡಿದ್ದಾರೆ.
ಬ್ಯಾಡ್ಮಿಂಟನ್ ಕ್ಷೇತ್ರದ ಅಪ್ರತಿಮ ಸಾಧಕ ಆಯುಷ್ ಸಾಣೂರಿನ ಕೃಷಿ ಹಿನ್ನಲೆಯ ರಾಮ್ ಪ್ರಕಾಶ್ ಶಾಲ್ಮಿಲಿ ದಂಪತಿಯ ಪುತ್ರ. ಸಣ್ಣವನಿ ದ್ದಾಗ ಅಪ್ಪನ ಜತೆ ಅಂಗಳದಲ್ಲಿ ಬ್ಯಾಡ್ಮಿಂಟನ್ ಆಟವಾಡುತ್ತ ಆಸಕ್ತಿ ಬೆಳೆಸಿಕೊಂಡ ಅವರು 3ನೇ ತರಗತಿಯಿಂದ ತರಬೇತಿ ಪಡೆ ದರು. ಪ್ರತೀ ದಿನ ಬೆಳಗ್ಗೆ 5ಕ್ಕೆ ಎದ್ದು ತರಬೇತಿಗೆ ಹೋಗುತ್ತಿದ್ದರು. ಕಾರ್ಕಳದಲ್ಲಿ ಸುಭಾಷ್ ಹಾಗೂ ಮಂಗಳೂರಿನಲ್ಲಿ ಚೇತನ್ ಅವರ ಮೂಲಕ ತರಬೇತಿ ಪಡೆದಿದ್ದರು.
ಪ್ರಸ್ತುತ ಬೆಂಗಳೂರಿನಲ್ಲಿ ರೇವಾ ವಿವಿಯಲ್ಲಿ ಬಿಎಸ್‌ಸಿ ನ್ಪೋಟ್ಸ್ ಸೈನ್ಸ್ ಪದವಿ ಶಿಕ್ಷಣ ಪಡೆಯುತ್ತಿರುವ ಅವರು ಪಡು ಕೋಣೆ ಬ್ಯಾಡ್ಮಿಂಟನ್‌ನಲ್ಲಿ ಕೋಚಿಂಗ್ ಸೆಂಟರ್‌ನಲ್ಲಿ ಅಭ್ಯಾಸ ಮತ್ತು ಸಾಗರ್ ಚೋಪ್ರ ಅವರಿಂದ ಕೋಚಿಂಗ್ ಪಡೆಯುತ್ತಿದ್ದಾರೆ.
ಹೆಮ್ಮೆ ಎನಿಸುತ್ತಿದೆ
ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವುದಕ್ಕೆ ಸಂತಸ ಜತೆಗೆ ಹೆಮ್ಮೆ ಎನಿಸುತ್ತಿದೆ. ಈ ಕೂಟದಲ್ಲಿ ಒಳ್ಳೆಯ ಸಾಧನೆ ನೀಡುವ ತವಕದಲ್ಲಿದ್ದೇವೆ. ಕಠಿನ ಅಭ್ಯಾಸದಲ್ಲಿ ತೊಡಗಿದ್ದು, ಹೆತ್ತವರು, ತರಬೇತುದಾರರು, ಅಕಾಡೆಮಿ, ಸಂಬಂಧಿಕರ ಸಹಕಾರದಿಂದ ಮತ್ತಷ್ಟೂ ಸಾಧನೆಗೆ ಪ್ರೇರಣೆ ದೊರಕಿದೆ.
– ಆಯುಷ್ ಶೆಟ್ಟಿ ಜೂ. ಚಾಂಪಿಯನ್‌ಶಿಪ್ ಭಾರತ ತಂಡದ ನಾಯಕ
*ಬಾಲಕೃಷ್ಣ ಭೀಮಗುಳಿ