ಪ್ಯಾರಿಸ್: ಪ್ರಚಂಡ ಫಾರ್ಮ್ನಲ್ಲಿರುವ ಭಾರತೀಯ ಶಟ್ಲರ್ ಕಿದಂಬಿ ಶ್ರೀಕಾಂತ್ ಈ ಋತುವಿನಲ್ಲಿ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದಲ್ಲಿ ಐದು ಬಾರಿ ಫೈನಲಿಗೇರಿದ್ದು ಸತತ ನಾಲ್ಕು ಸಲ ಪ್ರಶಸ್ತಿ ಗೆದ್ದ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವದ ನಂ.1 ಸ್ಥಾನಕ್ಕೇರುವತ್ತ ಹೆಜ್ಜೆ ಇಟ್ಟಿದ್ದಾರೆ. ಆದರೆ ಅವರಿಗೆ ತಮ್ಮ ಬಲಗಾಲ ಮಂಡಿನೋವಿನ ಚಿಂತೆ ಕಾಡುತ್ತಿದೆ. ಫ್ರೆಂಚ್ ಓಪನ್‌ನಲ್ಲೂ ಅವರು ಈ ನೋವಿನಲ್ಲೇ ಆಡಿದ್ದಾರೆ. ಇದಕ್ಕೆ ಯಾವ ರೀತಿಯಲ್ಲಿ ಪರಿಹಾರ ಕಂಡುಕೊಳ್ಳುವುದೆಂದು ಗಂಭೀರವಾಗಿ ಚಿಂತಿಸಿದ್ದಾರೆ.
ಶ್ರೀಕಾಂತ್ ಅವರ ಸದ್ಯದ ನಿರ್ವಹಣೆಯನ್ನು ಗಮನಿಸಿದರೆ ಮುಂದಿನ ವಾರ ಪ್ರಕಟವಾಗುವ ನೂತನ ಬಿಡಬ್ಲ್ಯುಎಫ್ ರ್‍ಯಾಂಕಿಂಗ್‌ನಲ್ಲಿ ತನ್ನ ರ್‍ಯಾಂಕಿಂಗನ್ನು ಇನ್ನಷ್ಟು ಉತ್ತಮಪಡಿಸುವ ಸಾಧ್ಯತೆಯಿದೆ. ಆದರೆ ಅದಕ್ಕಾಗಿ ನಿದ್ದೆ ಬಿಡುವ ಪ್ರಶ್ನೆಯೇ ಇಲ್ಲ. ರ್‍ಯಾಂಕಿಂಗ್ ಬಗ್ಗೆ ಹೆಚ್ಚು ಚಿಂತೆ ಮಾಡುವುದಿಲ್ಲ. ಆದರೆ ಫಾರ್ಮ್ ಉಳಿಸಿಕೊಳ್ಳಲು ಪ್ರಯತ್ನಿಸುವೆ ಎಂದು ಶ್ರೀಕಾಂತ್ ಹೇಳಿದ್ದಾರೆ.
ವಿಶ್ವ ನಂಬರ್ ವನ್ ಗೌರವದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ನನಗೇನೂ ತಿಳಿದಿಲ್ಲ. ಖಂಡಿತವಾಗಿಯೂ ರ್‍ಯಾಂಕಿಂಗ್‌ನಲ್ಲಿ ಉನ್ನತ ಸ್ಥಾನಕ್ಕೇರಲಿದ್ದೇನೆ. ಆದರೆ ಯಾವ ಸ್ಥಾನವೆಂಬುದು ಗೊತ್ತಿಲ್ಲ ಮತ್ತು ಅದಕ್ಕಾಗಿ ಚಿಂತೆ ಮಾಡುವುದಿಲ್ಲ ಎಂದವರು ಹೇಳಿದರು.
ರವಿವಾರ ನಡೆದ ಫೈನಲ್‌ನಲ್ಲಿ ಜಪಾನಿನ ಕೆಂಟ ನಿಶಿಮೊಟೊ ಅವರನ್ನು ನೇರ ಸೆಟ್‌ಗಳಿಂದ ಕೆಡಹಿದ ಶ್ರೀಕಾಂತ್ ಅವರು ಫ್ರೆಂಚ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಕೂಟದ ಪ್ರಶಸ್ತಿ ಜಯಿಸಿದ್ದರು. ಇದು ಅವರ ಸತತ ಎರಡನೇ ಮತ್ತು ಈ ಋತುವಿನ ನಾಲ್ಕನೇ ಪ್ರಶಸ್ತಿಯಾಗಿದೆ. ಕಳೆದ ವಾರ ಅವರು ಡೆನ್ಮಾರ್ಕ್ ಓಪನ್ ಕೂಟದ ಪ್ರಶಸ್ತಿ ಜಯಿಸಿದ್ದರು. ಅವರು ಈ ಮೊದಲು ಜೂನ್‌ನಲ್ಲಿ ಸತತವಾಗಿ ಇಂಡೋನೇಶ್ಯ ಮತ್ತು ಆಸ್ಟ್ರೇಲಿಯ ಓಪನ್ ಕೂಟದ ಪ್ರಶಸ್ತಿ ಜಯಿಸಿದ್ದರು.
ವಿಶ್ವದ ನಂಬರ್ ವನ್ ಸ್ಥಾನದಲ್ಲಿರುವ ಡೆನ್ಮಾರ್ಕ್‌ನ ವಿಕ್ಟರ್ ಆ್ಯಕ್ಸೆಲ್ಸೆನ್ ಅಂಕಗಳ ಆಧಾರದಲ್ಲಿ ನನಗಿಂತ ಬಹಳಷ್ಟು ಮುನ್ನಡೆಯಲ್ಲಿದ್ದಾರೆ. ಡೆನ್ಮಾರ್ಕ್ ಓಪನ್ ಮೊದಲು ನನ್ನ ಮತ್ತು ವಿಕ್ಟರ್ ನಡುವೆ ಬಹಳಷ್ಟು ವ್ಯತ್ಯಾಸಗಳಿವೆ. ನಂಬರ್ ವನ್ ಸ್ಥಾನಕ್ಕೇರುವ ಸಾಧ್ಯತೆ ನನಗಿಲ್ಲವೆಂದು ನಂಬಿದ್ದೇನೆ. ನನ್ನ ರ್‍ಯಾಂಕಿಂಗನ್ನು ಒಂದು ಅಥವಾ ಎರಡು ಸ್ಥಾನ ಉತ್ತಮಪಡಿಸಿಕೊಳ್ಳಬಹುದು ಎಂದು ಶ್ರೀಕಾಂತ್ ತಿಳಿಸಿದರು.