ಬದಿಯಡ್ಕ: ರಬ್ಬರ್ ಟ್ಯಾಪಿಂಗ್ ಕಾರ್ಮಿಕೆಯಾದ ಮಹಿಳೆ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೇ ವೇಳೆ ಆಕೆಯ ಜತೆಗೆ ವಾಸಿಸುತ್ತಿದ್ದ ಯುವಕ ನಾಪತ್ತೆಯಾಗಿದ್ದಾನೆ. ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.
ಬದಿಯಡ್ಕ ಠಾಣೆ ವ್ಯಾಪ್ತಿ ಏಳ್ಕಾನದ ಮನೆಯೊಂದರಲ್ಲಿ ವಾಸಿಸುತ್ತಿದ್ದ ಕೊಲ್ಲಂ ಕೊಟ್ಟಿಯಂ ಮುಖತ್ತಲ ಕಣಿಯಾಂತೋಡ್ ನಿವಾಸಿ ರಾಧಾಕೃಷ್ಣನ್ ಅವರ ಪುತ್ರಿ ನೀತು ಕೃಷ್ಣ (30) ನಿಗೂಢವಾಗಿ ಸಾವಿಗೀಡಾಗಿದ್ದು, ಈಕೆಯ ಜತೆಯಲ್ಲಿ ವಾಸಿಸುತ್ತಿದ್ದ ವಯನಾಡು ಮೇಪಾಡಿ ಠಾಣೆ ವ್ಯಾಪ್ತಿಯ ತೆಕ್ಕೆಪಟ್ಟಿ ಮುಟ್ಟಿಲ್‌ವುತಿ ನಿವಾಸಿ ಆಂಟೋ(30) ನಾಪತ್ತೆಯಾಗಿದ್ದಾನೆ.
ನಾಲ್ಕು ದಿನಗಳ ಹಿಂದೆ ಊರಿಗೆ ತೆರಳುವುದಾಗಿ ಆಂಟೋ ತೋಟದ ಮಾಲಕನಲ್ಲಿ ತಿಳಿಸಿದ್ದನೆನ್ನಲಾಗಿದೆ.
ಫೆ.1 ರಂದು ಇವರು ವಾಸಿಸುತ್ತಿದ್ದ ಮನೆಯೊಳಗಿಂದ ದುರ್ನಾತ ಬೀರುತ್ತಿದ್ದ ಹಿನ್ನೆಲೆಯಲ್ಲಿ ಶಾಜಿ ಹಾಗು ಇತರ ಕೆಲಸಗಾರರು ಮನೆಯ ಹೆಂಚು ಸರಿಸಿ ನೋಡಿದಾಗ ಕೊಠಡಿಯೊಳಗೆ ಬಟ್ಟೆಯಲ್ಲಿ ಸುತ್ತಿಟ್ಟ ಸ್ಥಿತಿಯಲ್ಲಿ ನೀತುಕೃಷ್ಣಳ ಮೃತದೇಹ ಪತ್ತೆಯಾಯಿತು. ವಿಷಯ ತಿಳಿದು ಬದಿಯಡ್ಕ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸಿದರು. ಶ್ವಾನ ದಳ ಮನೆಗೆ ತೆರಳಿ ತನಿಖೆ ನಡೆಸಿತು.
ಮೃತದೇಹವನ್ನು ಸಮಗ್ರ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ನಾಲ್ಕು ದಿನಗಳ ಹಿಂದೆ ಊರಿಗೆ ತೆರಳುವುದಾಗಿ ತಿಳಿಸಿದ್ದ ಆಂಟೋ ಇದೀಗ ನಾಪತ್ತೆಯಾಗಿರುವುದು ನಿಗೂಢತೆಗೆ ಕಾರಣವಾಗಿದೆ.
ರಬ್ಬರ್ ಟ್ಯಾಪಿಂಗ್ ಕೆಲಸಕ್ಕಾಗಿ ಮೊದಲು ಆಂಟೋ ಬಂದಿದ್ದ. ಬಳಿಕ ಒಂದೂವರೆ ತಿಂಗಳ ಹಿಂದೆ ನೀತು ಕೃಷ್ಣಳನ್ನು ಇಲ್ಲಿಗೆ ಕರೆದುಕೊಂಡು ಬಂದಿದ್ದ. ಈ ವೇಳೆ ಈಕೆ ತನ್ನ ಪತ್ನಿಯೆಂದು ಹೇಳಿಕೊಂಡಿದ್ದ. ಇವರ ಮಧ್ಯೆ ನಿತ್ಯ ಜಗಳ ನಡೆಯುತ್ತಿತ್ತೆಂದು ಸ್ಥಳೀಯರು ಹೇಳಿದ್ದಾರೆ. ಕಳೆದ ಶುಕ್ರವಾರ ಸಂಜೆಯೂ ಇವರ ಮಧ್ಯೆ ಜಗಳ ನಡೆದಿತ್ತು. ಆನಂತರ ನೀತು ಹೊರಗೆ ಕಂಡಿಲ್ಲ. ನೀತು ಕೃಷ್ಣಳಿಗೆ ಈ ಹಿಂದೆ ವಿವಾಹವಾಗಿದ್ದು, ಪ್ರಜಿ ಏಕ ಪುತ್ರಿ. ಮೊದಲ ಪತಿ ಮೃತಪಟ್ಟ ಬಳಿಕ ನಾಲ್ಕು ವರ್ಷಗಳಿಂದ ಈಕೆ ಆಂಟೋ ಜತೆಗಿದ್ದಾಳೆ.
ಸಲಿಂಗರತಿ ಕಿರುಕುಳ : ಫೋಕ್ಸೋ ಕೇಸು ದಾಖಲು
ಕಾಸರಗೋಡು: 13 ರ ಹರೆಯದ ಮದ್ರಸಾ ವಿದ್ಯಾರ್ಥಿಗೆ ಸಲಿಂಗರತಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಸಾ ಅಧ್ಯಾಪಕ ಇಸಾಮ್ ಬಾಕ್ಕವಿ ವಿರುದ್ಧ ಕಾಸರಗೋಡು ಮಹಿಳಾ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಕೇಸು ದಾಖಲಿಸಲಾಗಿದೆ.
ತರುಣಿಗೆ ಲೈಂಗಿಕ ಕಿರುಕುಳ : ಆರೋಪಿ ನ್ಯಾಯಾಲಯಕ್ಕೆ ಶರಣು
ಕಾಸರಗೋಡು: 19 ರ ಹರೆಯದ ತರುಣಿಯನ್ನು ವಿವಿಧೆಡೆ ಕರೆದೊಯ್ದು ಸರಣಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ವಿದ್ಯಾನಗರ ಕಲ್ಲಕಟ್ಟೆ ಹೌಸ್‌ನ ಟಿ.ಎ.ಮುಹಮ್ಮದ್ ಸಲೀಂ(26) ಕಾಸರಗೋಡು ಪ್ರಥಮ ದರ್ಜೆ ಮೆಜಿಸ್ಟ್ರೇಟ್ (1) ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ನ್ಯಾಯಾಲಯ ಆತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೆ 10 ಮಂದಿಯನ್ನು ಬಂಧಿಸಲಾಗಿದೆ.