ಬದಿಯಡ್ಕ: ಕಾಸರಗೋಡು ಜಿಲ್ಲೆಯ ಮಹತ್ವಾಕಾಂಕ್ಷಿ ಯೋಜನೆಯಲ್ಲಿಒಂದಾದ ಬದಿಯಡ್ಕ ಇಂಡೋರ್ ಸ್ಟೇಡಿಯಂ ಕಾಮಗಾರಿ ಅಪೂರ್ಣಗೊಂಡು ಕ್ರೀಡಾಸಕ್ತರಲ್ಲಿ ನಿರಾಸೆ ಮೂಡಿಸಿದೆ. ಬದಿಯಡ್ಕ ಬೋಳುಕಟ್ಟೆಯಲ್ಲಿ ಆರಂಭಗೊಂಡ ಒಳಾಂಗಣ ಕ್ರೀಡಾಂಗಣವು ಒಂದು ವರ್ಷದಿಂದ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಗುತ್ತಿಗೆದಾರರ ಮೇಲೆಯೂ ಹಲವು ಆರೋಪಗಳು ಕೇಳಿ ಬಂದಿದೆ. ಶಟಲ್ ಬ್ಯಾಡ್ಮಿಂಟನ್ ಕೋರ್ಟ್ ಒಳಗೊಂಡ ಇಂಡೋರ್ ಸ್ಟೇಡಿಯಂನಲ್ಲಿ ಬಾಕಿಯಿರುವ ಸಿಂತೆಟಿಕ್ ಹೊದಿಕೆ ಸೇರಿದಂತೆ ಮೂಲಭೂತ ಸೌಕರ್ಯಗಳಾದ ವಿದ್ಯುತ್ ಸಂಪರ್ಕ ಹಾಗೂ ನೀರು ಪೂರೈಕೆಯ ಕೆಲಸ ಕಾಮಗಾರಿ ಬಾಕಿ ಉಳಿದಿದೆ. ಕಾಮಗಾರಿಗೆಅಗತ್ಯವಾದ ಸುಮಾರು 4 ಲಕ್ಷರೂ. ಸ್ಥಳೀಯಾಡಳಿತದಲ್ಲಿ ಇದ್ದು ಮತ್ತಷ್ಟು ಹಣದ ಅವಶ್ಯಕತೆಇದೆ ಎಂದು ಸಂಬಂಧಿತ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಬಜೆಟ್‌ನಲ್ಲಿ ಹಣ ಮೀಸಲಿಡದ ಕಾರಣ ಕೆಲಸ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಟೆಂಡರ್ ಪಡೆದ ಕಂಪೆನಿಯು ಕಾಮಗಾರಿಯನ್ನುಅರ್ಧಕ್ಕೆ ಮೊಟಕುಗೊಳಿಸಿದ ಕಾರಣ ಇಂಡೋರ್ ಸ್ಟೇಡಿಯಂ ಲೋಕಾರ್ಪಣೆಗೊಳ್ಳದೆ ಕಾಡು-ಪೊದೆಗಳು ಬೆಳೆಯಲಾರಂಭಿಸಿದೆ. ಎರಡು ವರ್ಷಗಳ ಹಿಂದೆ 25 ಲಕ್ಷ ರೂ.ವೆಚ್ಚದಲ್ಲಿಇಂಡೋರ್ ಶಟಲ್ ಬ್ಯಾಡ್ಮಿಂಟನ್‌ಕೋರ್ಟ್ ನಿರ್ಮಿಸಲುಯೋಜನೆ ರೂಪಿಸಿಲಾಗಿತ್ತು.
ಈ ಮಧ್ಯೆಗುತ್ತಿಗೆ ಪಡೆದ ಕಂಪೆನಿ ಮಾಲಕ ಕಳಪೆ ಗುಣಮಟ್ಟದ ಮೇಲ್ಛಾವಣಿ ಹೊದಿಸಿ ಹೆಚ್ಚಿನ ಹಣ ಪಡೆದಿದ್ದಾನೆ ಎಂಬ ಆರೋಪವು ಕೇಳಿ ಬಂದಿದೆ. ಯುವ ಸಮೂಹದಲ್ಲಿ ಕ್ರೀಡಾಸಕ್ತಿ ಬೆಳೆಸುವ ಸದುದ್ದೇಶದಿಂದ, ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂಡೋರ್ ಸ್ಟೇಡಿಯಂ ನಿರ್ಮಾಣವನ್ನು ಸರಕಾರ ಸ್ಥಳೀಯಾಡಳಿತದ ಸಹಭಾಗಿತ್ವದಲ್ಲಿ ಆರಂಭಿಸಿತ್ತು. ಸ್ಥಳೀಯ ಗ್ರಾ.ಪಂ 25 ಲಕ್ಷರೂ. ಟೆಂಡರ್‌ಅನ್ನು ನೀಡಿದ್ದು, ಗುತ್ತಿಗೆ ವಹಿಸಿಕೊಂಡ ವ್ಯಕ್ತಿಕಾಮಗಾರಿ ಪೂರ್ಣಗೊಳಿಸದೆ 5 ಲಕ್ಷ ರೂ.ಗಳನ್ನು ಪಡೆದು ಪರಾರಿಯಾಗಿದ್ದಾನೆಂದು ಆರೋಪಿಸಲಾಗಿದೆ.
ಒಳಾಂಗಣ ಕ್ರೀಡಾಂಗಣದ ನಿರ್ಮಾಣದ ನಂತರ ಸ್ಥಳಿಯ ಯುವಜನ ಸಂಘ, ಕ್ರೀಡಾ ಸಂಘಗಳಿಗೆ ಸ್ಟೇಡಿಯಂ ನಿರ್ವಹಣೆಯ ಜವಾಬ್ದಾರಿ ವಹಿಸುವ ಬಗ್ಗೆ ಚಿಂತಿಸಲಾಗಿತ್ತು. ಜಿಲ್ಲೆಯಲ್ಲಿಆಧುನಿಕ ಮಾದರಿಯಲ್ಲಿ ನಿರ್ಮಿಸಬೇಕಿದ್ದಎರಡನೇ ಒಳಾಂಗಣ ಕ್ರೀಡಾಂಗಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಬೇಕಿದ್ದ ಬದಿಯಡ್ಕ ಇಂಡೋರ್ ಸ್ಟೇಡಿಯಂ ಹಲವು ನ್ಯೂನತೆಗಳ ಮೂಲಕ ಕಾಮಗಾರಿಯೂ ಪೂರ್ಣಗೊಳ್ಳದೆ ಅಪಖ್ಯಾತಿಗೆ ಒಳಗಾಗಿದೆ.
ಆಟಕ್ಕಿಲ್ಲದ ಕ್ರೀಡಾಂಗಣ
ಕಾಸರಗೋಡಿಗೆ ಲಭಿಸುವ ಯೋಜನೆಗಳು ನೀರ ಮೇಲಿಟ್ಟ ಹೋಮದಂತಾಗುವುದು ವಿಪರ್ಯಾಸ. ಹೊಸ ಹೊಸ ಬದಲಾವಣೆಯ ಗಾಳಿ ಬೀಸುತ್ತದೆಯಾದರೂ ದಿಕ್ಕುತಪ್ಪಿ ಹೋಗಿ ಯಾರಿಗೂ ದಕ್ಕದ ಪರಿಸ್ಥಿತಿ ಉಂಟಾಗುತ್ತಿರುವುದು ಸಾಮಾನ್ಯವಾಗಿಬಿಟ್ಟಿದೆ. ಅಧಿಕಾರಿಗಳ ಅನಾಸ್ಥೆ, ಟೆಂಡರ್ ವಹಿಸಿಕೊಂಡವರ ಧನದಾಹ, ಜನಪ್ರತಿನಿಧಿಗಳ ಉದಾಸೀನದ ಪರಿಣಾಮವನ್ನು ಅನುಭವಿಸಬೇಕಾದವರು ಮುಗ್ಧ ಜನರು. ಅದಕ್ಕೆ ಸಾಕ್ಷಿ ಈ ಆಟಕ್ಕಿಲ್ಲದ ಉಪಯೋಗ ಶೂನ್ಯವಾಗಿ ಉಳಿದು ಅಣಕಿಸುತ್ತಿರುವ ಒಳಾಣ ಕ್ರೀಡಾಂಗಣ.
ಇನ್ನಾದರೂ ಬದಿಯಡ್ಕ ಪ್ರದೇಶದ ಕ್ರೀಡಾಸಕ್ತರು ಎಚ್ಚೆತ್ತುಕೊಳ್ಳಬೇಕು. ಈ ಕ್ರೀಡಾಂಗಣದ ಸರಿಯಾದ ಉಪಯೋಗ ಜನರಿಗೆ ದೊರೆತಾಗಲಷ್ಟೆ ಕ್ರೀಡಾ ಪ್ರತಿಭೆಗಳು ಬೆಳೆಯಲು, ಸಾಧಿಸಲು ಸಾಧ್ಯ. ಅದಕ್ಕೂ ಮುನ್ನ ಟೆಂಡರ್ ಪಡೆದ ಮೊತ್ತವನ್ನು ಸರಿಯಾಗಿ ಉಪಯೋಗಿಸದೆ ವಂಚಿಸುವವರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು. ಹಾಗೆಯೇ ಕ್ರೀಡಾಂಗಣ ಆದಷ್ಟು ಬೇಗ ಜನೋಪಯೋಗಿಯಾಗಬೇಕು.
– ಅಖೀಲೇಶ್ ನಗುಮುಗಂ