Advertisement

ಮಾತಿನ ಮನೆಯಲ್ಲಿ ಬಡವ ರಾಸ್ಕಲ್‌

12:36 PM Sep 02, 2020 | Suhan S |

ನಟ ಡಾಲಿ ಧನಂಜಯ್‌ ನಾಯಕನಾಗಿ ಅಭಿನಯಿಸುತ್ತಿರುವ “ಬಡವ ರಾಸ್ಕಲ್’ ಚಿತ್ರದ ಚಿತ್ರೀಕರಣ ಮಾತಿನ ಭಾಗದ ಚಿತ್ರೀಕರಣ ಪೂರ್ಣವಾಗಿದ್ದು, ಬೆಂಗಳೂರು, ಮೈಸೂರು ಹಾಗೂ ಪಾಂಡವಪುರ ಮೊದಲಾದ ಕಡೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರದ ಕ್ಲೈಮ್ಯಾಕ್ಸ್‌ ಭಾಗದ ಚಿತ್ರೀಕರಣ ಬಾಕಿಯಿದ್ದು, ಇದೇ ತಿಂಗಳಾಂತ್ಯಕ್ಕೆ ಅದನ್ನು ಚಿತ್ರೀಕರಿಸಲು ಚಿತ್ರತಂಡ ಪ್ಲಾನ್‌ ಮಾಡಿಕೊಳ್ಳುತ್ತಿದೆ. ಇದರ ನಡುವೆಯೇ “ಬಡವ ರಾಸ್ಕಲ್‌’ ಚಿತ್ರದ ಡಬ್ಬಿಂಗ್‌ ಕೆಲಸಗಳಿಗೂ ಚಿತ್ರತಂಡ ಚಾಲನೆ ನೀಡಿದ್ದು, ಬಾಲಾಜಿ ಡಿಜಿಟಲ್‌ ಸ್ಟುಡಿಯೋದಲ್ಲಿ ಚಿತ್ರದ ಮಾತಿನ ಜೋಡಣೆ ಕಾರ್ಯ ನಡೆಯುತ್ತಿದೆ.

Advertisement

ಮಧ್ಯಮ ವರ್ಗದ ಜನರ ದಿನನಿತ್ಯದ ಜೀವನದಲ್ಲಿ ನಡೆಯುವ ಘಟನೆಗಳ ಸುತ್ತ ನಡೆಯುವ ಈ ಚಿತ್ರದಲ್ಲಿ ಧನಂಜಯ್‌ ಆಟೋ ಡ್ರೈವರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರಂತೆ. “ಡಾಲಿ ಪಿಕ್ಚರ್’ ಬ್ಯಾನರ್‌ನಲ್ಲಿ ಸಾವಿತ್ರಮ್ಮ ಅಡವಿ ಸ್ವಾಮಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶಂಕರ್‌ ಗುರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಚಿತ್ರದಲ್ಲಿ ಡಾಲಿ ಧನಂಜಯ ಅವರಿಗೆ ನಾಯಕಿಯಾಗಿ ಅಮೃತ ಅಯ್ಯಂಗಾರ್‌ ಅಭಿನಯಿಸುತ್ತಿದ್ದಾರೆ. ಉಳಿದಂತೆ ರಂಗಾಯಣ ರಘು, ತಾರಾ, ಸ್ಪರ್ಶ ರೇಖಾ, ನಾಗಭೂಷಣ್‌, ಪೂರ್ಣಚಂದ್ರ ಮುಂತಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ವಾಸುಕಿ ವೈಭವ್‌ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಪ್ರೀತ ಜಯರಾಮನ್‌ ಛಾಯಾಗ್ರಹಣ, ನಿರಂಜನ್‌ ದೇವರಮನೆ ಸಂಕಲನ ಹಾಗೂ ವಿನೋದ್‌ ಸಾಹಸ ನಿರ್ದೇಶನವಿದೆ. ಸದ್ಯ “ಬಡವ ರಾಸ್ಕಲ್‌’ ಚಿತ್ರದ ಕೆಲಸಗಳನ್ನು ಭರದಿಂದ ನಡೆಸುತ್ತಿರುವ ಚಿತ್ರತಂಡ, ಇದೇ ವರ್ಷಾಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

 

Advertisement

Udayavani is now on Telegram. Click here to join our channel and stay updated with the latest news.

Next