Advertisement

ಬಾದಾಮಿ ಲಾಲ್‌ಬಾಗ್‌

06:00 AM Dec 17, 2018 | |

ಬಾದಾಮಿ ರೈಲ್ವೇ ನಿಲ್ದಾಣದ ಬಳಿ ಸೆಲ್ಪಿ ಸ್ಪಾಟ್‌ ಒಂದಿದೆ. ಅದುವೇ ಈ ಪಾಟೀಲರ ಹೂವಿನ ತೋಟ. ಇಲ್ಲಿ ವರ್ಷ ಪೂರ್ತಿ ಹೂವು ಇರುವುದರಿಂದ ಈ ದಾರಿಯಲ್ಲಿ ಬಂದವರೆಲ್ಲ ಹೂವಿನ ಮಧ್ಯೆ ನಿಂತು ಪೋಟೋ ತೆಗೆದುಕೊಳ್ಳುತ್ತಲೇ ಇರುತ್ತಾರೆ. ಇವರ ತೋಟದಲ್ಲಿ ಅಂತರ ಬೆಳೆಯಾಗಿ ತೆಂಗು, ಮಾವು, ನಿಂಬೆಗಳೆಲ್ಲಾ ಇವೆ. ಹೀಗಾಗಿ, ಪಾಟೀಲರಿಗೆ ವರ್ಷ ಪೂರ್ತಿ ಕೈ ತುಂಬಾ ಆದಾಯ. 

Advertisement

ಬಾದಾಮಿ ರೈಲ್ವೇ ನಿಲ್ದಾಣದ ಹತ್ತಿರ ನಿಂತರೆ ಹೂದೋಟ ಕಾಣುತ್ತದೆ. ಕುತೂಹಲದಿಂದಲೇ ಅಲ್ಲಿಗೆ ಹೋದರೆ,  ಒಂದಷ್ಟು ಜನ ಹೂವಿನ ಮಧ್ಯೆ ನಿಂತು ಸೆಲ್ಪಿ ತೆಗೆಸಿಕೊಳ್ಳುತ್ತಿರುತ್ತಾರೆ. ಅಷ್ಟೇ ಅಲ್ಲ, ಇನ್ನೊಂದಷ್ಟು ಜನ ಸ್ಫೂರ್ತಿ ಪಡೆದು-ತೋಟ ಮಾಡುವುದು ಹೇಗೆ ಅಂತ ಆ ತೋಟದ ಮಾಲೀಕ, ಯುವ ಕೃಷಿಕ ವೈ. ಆರ್‌. ಪಾಟೀಲರನ್ನು ಕೇಳುತ್ತಿರುತ್ತಾರೆ. ಪ್ರತಿದಿನ ತೋಟದ ಮಧ್ಯೆ ಹೀಗೆ ಫೋಟೋ ಶೂಟ್‌ಗಳು ನಡೆಯುತ್ತಲೇ ಇರುತ್ತವೆ.   ಇದಕ್ಕೆ ಕಾರಣ- ವರ್ಷವಿಡೀ ಇಲ್ಲಿ ಹೂ ದೊರೆಯುವುದು. ಪಾಟೀಲರದ್ದು ಮೂರು ಎಕರೆ ಜಮೀನಿದೆ. ಇದರಲ್ಲಿ ಐದು ಬಗೆಯ ಹೂವುಗಳನ್ನು ಬೆಳೆದು ಕೈತುಂಬ ಹಣ ಸಂಪಾದಿಸುತ್ತಿದ್ದಾರೆ.  ಇದರ ಜೊತೆ  ತೆಂಗು-100 ಗಿಡ, 80 ನಿಂಬೆ ಗಿಡ, 40 ಮಾವು, 4 ಚಿಕ್ಕು, 4 ಸೀತಾಫಲ  ಮತ್ತು 3 ನೆಲ್ಲಿಕಾಯಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಕಳೆದ ಮೂರು ವರ್ಷದಿಂದ ತೆಂಗು ಬಿಟ್ಟು ಉಳಿದ ಬೆಳೆಗಳಿಂದ ಆದಾಯ ಕೈಗೆಟುಕುತ್ತಿದೆ. 

ವರ್ಷ ವಿಡೀ ಅರಳುವ ಹೂವು
ಹೂವಿನ ದರ ಒಂದು ರೀತಿ  ಶೇರುಪೇಟೆ ವ್ಯವಹಾರದಂತೆ. ಪ್ರತಿದಿನ ಒಂದೇ ಬೆಲೆ ಇರುವುದಿಲ್ಲ. ಹೀಗಾಗಿ ಪಾಟೀಲರು ಋತುಮಾನಕ್ಕೆ ತಕ್ಕಂತೆ ವರ್ಷವಿಡೀ ಹೂವಿನ ಇಳುವರಿ ಬರುವಂತೆ ಯೋಜಿಸಿದ್ದಾರೆ.  ಒಂದು ಎಕರೆಯಲ್ಲಿ ಸುಗಂಧ ರಾಜ (ವರ್ಷವೀಡಿ) ಒಂದು ಎಕರೆ, ಎರಡು ಎಕರೆಯಲ್ಲಿ ದುಂಡು ಮಲ್ಲಿಗೆ ಮತ್ತು ಕಾಕಡ (ಜನವರಿಯಿಂದ ಜೂನ್‌ವರೆಗೆ) ಎರಡು ಎಕರೆ ಕಾಕಡ (ಆಗಸ್ಟ್‌ದಿಂದ ಡಿಸೆಂಬರ್‌), ಚೆಂಡು ಹೂವು (ದೀಪಾವಳಿ ಹಬ್ಬದಲ್ಲಿ), ಗಲಾಟಿ ಹೂವು (ಅಲ್ಪಾವಧಿ ಬೆಳೆ) 25 ಗುಂಟೆಯಲ್ಲಿ ಬೆಳೆದಿದ್ದಾರೆ. ಪಾಟೀಲರು ಆರು ವರ್ಷದಿಂದ ಪುಷ್ಪಕೃಷಿಯಲ್ಲಿ ತೊಡಗಿದ್ದಾರೆ.  ವರ್ಷದಿಂದ ವರ್ಷಕ್ಕೆ ಇಳುವರಿ ಹೆಚ್ಚುತ್ತಿದ್ದು, ಕೀಟ ಬಾಧೆ ತಡೆಗೆ ವಾರದಲ್ಲಿ 1-2 ಸಲ ಔಷಧಿ ಸಿಂಪಡಿಸುತ್ತಾರೆ. ನೀರಿನ ನಿರ್ವಹಣೆ ಕಷ್ಟವೇನಿಲ್ಲ. ಇದಕ್ಕಾಗಿ ಎರಡು ಬೋರ್‌ವೆಲ್‌ಗ‌ಳಿದ್ದು, ಎಲ್ಲ ಹೂವಿನ ಗಿಡಗಳಿಗೆ ಹನಿ ನೀರಾವರಿ ವ್ಯವಸ್ಥೆ ಮಾಡಿದ್ದಾರೆ. ಇಳುವರಿ ಹೆಚ್ಚಲು ಗಿಡಗಳಿಗೆ ಕೊಟ್ಟಿಗೆ ಮತ್ತು ಬೇವಿನ ಬೀಜದಿಂದ ತಯಾರಿಸಿದ ಗೊಬ್ಬರ ಬಳಸುತ್ತಾರೆ. ಹೂವಿನ ತೋಟದಲ್ಲಿ ಮನೆಯವರೂ ದುಡಿಯುವುದರಿಂದ ಆಳುಗಳ ಸಮಸ್ಯೆ ಇವರಿಗಿಲ್ಲ.

ವ್ಯಾಪಾರಸ್ಥರೊಂದಿಗೆ ಒಪ್ಪಂದ
ಪಾಟೀಲರು ಬಾದಾಮಿ-ಬನಶಂಕರಿ ಮಾರುಕಟ್ಟೆಯ ನಿಗದಿತ ವ್ಯಾಪಾರಸ್ಥರೊಂದಿಗೆ ಮೌಖೀಕ ಒಪ್ಪಂದ ಮಾಡಿಕೊಂಡಿದ್ದಾರೆ . ಕೆ.ಜಿ. ಸುಗಂಧ ರಾಜಕ್ಕೆ 60ರೂ., ಕೆ.ಜಿ. ದುಂಡು ಮಲ್ಲಿಗೆ 200 ರೂ, ಕೆ.ಜಿ. ಕಾಕಡ 200 ರೂ. ಹೀಗೆ ಮೊದಲೇ ಮಾತುಕತೆಯಾಗಿರುತ್ತದೆ.  ಹೀಗಾಗಿ, ಇವರಿಗೆ ಮಧ್ಯವರ್ತಿಗಳ ಹಾವಳಿ ಇಲ್ಲ. ಇಳುವರಿ ಹೆಚ್ಚಿದ ಸಂದರ್ಭದಲ್ಲಿ ಅದನ್ನು ಬಾಗಲಕೋಟೆ ಮಾರುಕಟ್ಟೆಗೆ ಕಳುಹಿಸುತ್ತಾರೆ. ವಾರ್ಷಿಕವಾಗಿ ದುಂಡು ಮಲ್ಲಿಗೆಯಿಂದ 8 ಲಕ್ಷ , ಕಾಕಡ 7 ಲಕ್ಷ ರೂ., ಸುಗಂಧ ರಾಜ 40 ಸಾವಿರ ರೂ. (ತಿಂಗಳಿಗೆ) ಆದಾಯ ಗಳಿಸುತ್ತಿದ್ದಾರೆ. ಇದಲ್ಲದೇ, ಸುಗಂಧ ರಾಜದ ಗೆಡ್ಡೆ (ಬೇರೆಡೆ ನಾಟಿ ಮಾಡಲು) ಮಾರಾಟದಿಂದಲೇ 2.5 ಲಕ್ಷ ರೂ. ಸಂಪಾದನೆ ಇದೆ.  ವೈ.ಆರ್‌. ಪಾಟೀಲರ ಈ ಕ್ರಿಯಾಶೀಲ ಪ್ರಯತ್ನವನ್ನು ನೋಡಿದ ಧಾರವಾಡ ಕೃಷಿ ವಿವಿ, 2017ರಲ್ಲಿ ಅವರಿಗೆ ಶ್ರೇಷ್ಠ ಯುವ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದೆ.

ನೆಮ್ಮದಿ ಬದುಕು
ವೈ.ಆರ್‌. ಪಾಟೀಲ ಅವರದ್ದು 10 ಜನ ಗಂಡು, 6 ಜನ ಹೆಣ್ಣು ಮಕ್ಕಳಿರುವ ಅವಿಭಕ್ತ ಕುಟುಂಬ. ಒಟ್ಟು ಐದು ಎಕರೆ ಭೂಮಿಯಲ್ಲಿ 3 ಎಕರೆಯಲ್ಲಿ ಪುಷ್ಪಕೃಷಿ (ತೋಟ), ಎರಡು ಎಕರೆಯಲ್ಲಿ ದವಸ ಧಾನ್ಯ ಮತ್ತು 10 ಎಕರೆ ಲಾವಣಿ ಪಡೆದು ಸಜ್ಜೆ, ಮೆಕ್ಕಜೋಳ, ಬಿಳಿಜೋಳ, ಕಡಲೆ ಶೇಂಗಾ ಬೆಳೆಯುತ್ತಿದ್ದಾರೆ. ಇದರ ಜೊತೆಗೆ 70 ಕುರಿ, 50 ಕೋಳಿ, 5 ಆಕಳು, 2 ಎಮ್ಮೆ, 2 ಎತ್ತುಗಳನ್ನು ಸಾಕಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ಈ ಅವಿಭಕ್ತ ಕುಟುಂಬ ಕೃಷಿಯಲ್ಲಿಯೇ ನೆಮ್ಮದಿ ಕಂಡುಕೊಂಡಿದೆ.
ಮಾಹಿತಿಗೆ: 9448580714 

Advertisement

– ಶರಣು ಹುಬ್ಬಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next