ವೇಣೂರು: ದೇವಸ್ಥಾನಗಳು ಊರಿನ ಕಣ್ಣುಗಳಿದ್ದಂತೆ. ಅದು ಜೀರ್ಣೋದ್ಧಾರಗೊಂಡರೆ ಊರು ಸುಭಿಕ್ಷೆಯಾಗುತ್ತದೆ. ಅದಕ್ಕಾಗಿ ದೇಗುಲಗಳ ನಿರ್ಮಾಣದಲ್ಲಿ ಕೈಜೋಡಿಸುವಂತಾಗಬೇಕು ಎಂದು ಕಾಶಿಪಟ್ಣ ಕೇಳ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಅನಂತ ಆಸ್ರಣ್ಣ ಹೇಳಿದರು.
ಬಡಕೋಡಿ ಕಾಶಿಪಟ್ಣದ ಶ್ರೀ ಆದಿಶಕ್ತಿ ಮಹಮ್ಮಾಯಿ ಅಮ್ಮನ ನೂತನ ಶಿಲಾಮಯ ದೇಗುಲದ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ರಾತ್ರಿ ಜರಗಿದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷರು, ಶ್ರೀಕ್ಷೇತ್ರ ಪಡ್ಡ್ಯಾರಬೆಟ್ಟದ ಆನುವಂಶೀಯ ಆಡಳಿತದಾರ ಎ. ಜೀವಂಧರ ಕುಮಾರ್ ವಹಿಸಿದ್ದರು.
ಮಾರೂರು ಖಂಡಿಗದ ವೆಂಕಟರಾಜ ಆಸ್ರಣ್ಣ ಉಪಸ್ಥಿತರಿದ್ದರು. ಮುಖ್ಯ ಅತಿಥಿಯಾಗಿದ್ದ ಬೆಳ್ತಂಗಡಿ ಶ್ರೀ ಗುರುದೇವಾ ಕಾಲೇಜಿನ ಪ್ರಾಂಶುಪಾಲ ಎ. ಕೃಷ್ಣಪ್ಪ ಪೂಜಾರಿ ಮಾತನಾಡಿ, ದೇಗುಲಗಳು ಸಾಮರಸ್ಯದ ಕೇಂದ್ರ. ಆಧ್ಯಾತ್ಮಿಕ ಪ್ರಭಾವ ಪಸರಿಸುವುದೇ ಇಲ್ಲಿಂದ. ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯ ನಿರಂತರ ನಡೆಯಬೇಕು. ಅದರಲ್ಲಿ ಪಾಲ್ಗೊಳ್ಳುವ ಮೂಲಕ ಜನತೆ ದೇವರ ಅನುಗ್ರಹಕ್ಕೆ ಪಾತ್ರರಾಗಲು ಸಾಧ್ಯ ಎಂದರು. ಹೊಸಂಗಡಿ ಗ್ರಾ.ಪಂ. ಅಧ್ಯಕ್ಷೆ ಹೇಮಾ ವಸಂತ್, ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕ ಸಂದೇಶ್ ಕುಮಾರ್ ಮಾತನಾಡಿದರು. ಪೆರಾಡಿ ಪ್ರಾಥಮಿಕ ಕೃ.ಪ. ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿ ಕಾರಿ ಶೇಖ್ ಲತೀಫ್, ಉದ್ಯಮಿಗಳಾದ ಪ್ರವೀಣ್ ಪಿಂಟೋ, ಜೆರಾಲ್ಡ್ ಡಿ’ಕೋಸ್ತ, ದೇವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಕುಪ್ಪಣ್ಣ ನಾಯ್ಕ, ಅಧ್ಯಕ್ಷ ಲಿಂಗಪ್ಪ ನಾಯ್ಕ, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿ ಸಂತೋಷ್ ಕುಮಾರ್, ಅಧ್ಯಕ್ಷ ಪಿ. ಧರಣೇಂದ್ರ ಕುಮಾರ್ ಹಾಗೂ ಮತ್ತಿತರರಿದ್ದರು.
ಸಮ್ಮಾನ
ಕಲ್ಲಿನ ಶಿಲ್ಪಿ, ಮರದ ಶಿಲ್ಪಿ, ದಾನಿಗಳನ್ನು, ಸಮಿತಿ ಪದಾಧಿಕಾರಿಗಳನ್ನು ಹಾಗೂ ದೇವಸ್ಥಾನಕ್ಕೆ ವಿವಿಧ ರೀತಿಯಲ್ಲಿ ಸೇವೆ ನೀಡಿದವರಲ್ಲಿ ಗೌರವಿಸಿ ಸಮ್ಮಾನಿಸಲಾಯಿತು. ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ ಸ್ವಾಗತಿಸಿ, ಪ್ರಧಾನ ಸಂಚಾಲಕ ಶ್ರೀಪತಿ ಉಪಾಧ್ಯಾಯ ವಂದಿಸಿದರು. ಉಪನ್ಯಾಸಕ ಮಹಾವೀರ ಜೈನ್ ಮೂಡುಕೋಡಿ ನಿರೂಪಿಸಿದರು.
ದೇಗುಲ ಬೆಳಗಲಿ
ದೇವಾಲಯಗಳಲ್ಲಿ ಪಾವಿತ್ರ್ಯ ಕಾಪಾಡಿ ದಷ್ಟು ಕಾರಣಿಕ ಶಕ್ತಿ ಜಾಸ್ತಿ ಆಗುತ್ತದೆ. ಸಮಯಕ್ಕೆ ಸರಿಯಾಗಿ ಪೂಜೆ, ಪುರಸ್ಕಾರಗಳು ನಡೆಯುವಂತಾಗಲಿ, ದೇಗುಲ ಇನ್ನಷ್ಟು ಬೆಳಗಲಿ.
– ಎ. ಜೀವಂಧರ ಕುಮಾರ್,
ಪಡ್ಡ್ಯಾರಬೆಟ್ಟ