Advertisement

ನಿಗಿನಿಗಿ ಕೆಂಡವಾಗಿದ್ದ ಬ್ಯಾಡಗಿ ಥಂಡಾ: ಆರೋಪಿಗಳಿಗಾಗಿ ಶೋಧ

04:44 PM Mar 13, 2024 | Team Udayavani |

ಉದಯವಾಣಿ ಸಮಾಚಾರ
ಬ್ಯಾಡಗಿ: ಮೆಣಸಿನಕಾಯಿ ದರ ಕುಸಿದಿದ್ದರಿಂದ ರೈತರ ಆಕ್ರೋಶಕ್ಕೆ ನಿಗಿನಿಗಿ ಕೆಂಡವಾಗಿದ್ದ ಹಾವೇರಿ ಜಿಲ್ಲೆ ಬ್ಯಾಡಗಿಯ ಎಂಪಿಎಂಸಿ ಮಂಗಳವಾರ ಸಹಜ ಸ್ಥಿತಿಗೆ ಮರಳಿದ್ದು, ವ್ಯಾಪಾರ-ವಹಿವಾಟು ನಡೆದಿದೆ. ಘಟನೆಗೆ ಸಂಬಂಧಿಸಿ ಪೊಲೀಸರು 80 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Advertisement

ಬ್ಯಾಡಗಿ ಎಪಿಎಂಸಿ ಸೇರಿದಂತೆ ಇಡೀ ಪಟ್ಟಣದಲ್ಲಿ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಎಪಿಎಂಸಿಯಲ್ಲಿ ಸುಟ್ಟು ಕರಕಲಾದ ವಾಹನಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದ ಕಡತಗಳು, ಬೆಂಕಿಯ ಕೆನ್ನಾಲೆಯಿಂದ ಸುಟ್ಟ ಕಟ್ಟಡ, ಅರ್ಧಂಬರ್ಧ ಸುಟ್ಟ ಪೀಠೊಪಕರಣ ಇವೆಲ್ಲ ಸೋಮವಾರ ನಡೆದ ದುರ್ಘ‌ಟನೆಯನ್ನು ಸಾಕ್ಷೀಕರಿಸುತ್ತಿವೆ.

ಕೋಟ್ಯಂತರ ರೂ. ನಷ್ಟ: ಮೆಣಸಿನಕಾಯಿ ದರ ಕುಸಿತ ಖಂಡಿಸಿ ಏಕಾಏಕಿ ನಡೆದ ಕಲ್ಲುತೂರಾಟ, ವಾಹನ ಮತ್ತಿತರ ವಸ್ತುಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ 5 ಕೋಟಿಗೂ ಅಧಿಕ ನಷ್ಟವಾಗಿದೆ. ವಾಹನಗಳು ಸೇರಿದಂತೆ ಕೆಲ ವರ್ಷದ ಹಿಂದಷ್ಟೇ ನಿರ್ಮಿಸಲಾಗಿದ್ದ ಎಪಿಎಂಸಿ ಕಟ್ಟಡ ಸುಟ್ಟು ಕರಕಲಾಗಿದ್ದು, ಕೋಟ್ಯಂತರ ಮೌಲ್ಯದ ವಿವಿಧ ಉಪಕರಣಗಳು ಸುಟ್ಟು ಬೂದಿಯಾಗಿವೆ.

ಹಲವು ವಾಹನಗಳು ಭಸ್ಮ: ಎಪಿಎಂಸಿ ಕಚೇರಿ ಎದುರು ನಿಲ್ಲಿಸಿದ್ದ 2 ಸ್ಕಾರ್ಪಿಯೋ, 2 ಬೋಲೆರೊ ಹಾಗೂ ಒಂದು ಸ್ವೀಪಿಂಗ್‌ ಮಷಿನ್‌, ಅಗ್ನಿಶಾಮಕ ದಳದ ಒಂದು ವಾಹನ, ಎಪಿಎಂಸಿ ಕಾರ್ಯದರ್ಶಿ ಹಾಗೂ ಸಿಬ್ಬಂದಿಯ ತಲಾ 1 ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದರೆ ಹೊರಗುತ್ತಿಗೆ ಸಿಬ್ಬಂದಿಯ ಮೂರು ಬೈಕ್‌ ಹಾಗೂ ಆವರಣದಲ್ಲಿದ್ದ ಇನ್ನೊಂದು ಬೈಕ್‌
ಕಳ್ಳತನವಾಗಿದೆ.

ಅಮೂಲ್ಯ ಕಡತಗಳು ನಾಶ: ಕಚೇರಿಯೊಳಗೆ ರೈತರು ದಾಂಧಲೆ ನಡೆಸಿದ್ದಲ್ಲದೇ ಬೀರುಗಳಲ್ಲಿದ್ದ ಎಲ್ಲಾ ಕಡತಗಳನ್ನು ತೆಗೆದು ಬೆಂಕಿ ಹಚ್ಚಿ ನಾಶಪಡಿಸಿದ್ದಾರೆ. ಇದರಿಂದ ಮಾರುಕಟ್ಟೆಯ ನಿವೇಶನಗಳ ಮಾಲೀಕರಿಗೆ ಸಂಬಂಧಿಸಿದ ಹಕ್ಕಪತ್ರಗಳು ಕೋರ್ಟ್‌ ವ್ಯಾಜ್ಯಗಳ ಕಡತಗಳು ಸಂಪೂರ್ಣ ನಾಶವಾಗಿವೆ.

Advertisement

ಪೊಲೀಸ್‌ ಸರ್ಪಗಾವಲು: ದಾವಣೆಗೆರೆ ಐಜಿ ತ್ಯಾಗರಾಜ ಹಾಗೂ ಎಸ್ಪಿ ಅಂಶುಕುಮಾರ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದು ಎಲ್ಲೆಡೆ ಖಾಕಿ ಕಟ್ಟೆಚ್ಚರ ವಹಿಸಲಾಗಿದೆ. ಇಬ್ಬರ ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳ ಹೆಡೆಮುರಿ ಕಟ್ಟಲು ಮುಂದಾಗಲಾಗಿದೆ. ಮಾರುಕಟ್ಟೆ ಸೇರಿದಂತೆ ಪಟ್ಟಣದೆಲ್ಲೆಡೆ ಖಾಕಿ ಸರ್ಪಗಾವಲಿದೆ. ಮೂವರು ಎಸ್ಪಿಗಳು ನಾಲ್ಕು ಜನ ಅಡಿಶನಲ್‌ ಎಸ್ಪಿಗಳು 15 ಮಂದಿ ಸಿಪಿಐ, 30 ಜನ ಪಿಎಸ್‌ಐಗಳು, 762 ಪೊಲೀಸ್‌, 7 ಕೆಎಸ್‌ಆರ್‌ಪಿ, 8 ಜಿಲ್ಲಾ ಸಶಸ್ತ್ರ ಮೀಸಲು, 1 ಸಿ.ಆಯ್‌.ಎಸ್‌.ಎಫ್‌. ತುಕಡಿಗಳನ್ನು ನಿಯೋಜಿಸಲಾಗಿದೆ. ಮಂಗಳವಾರ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.

80 ಜನ ಕಿಡಿಗೇಡಿಗಳ ವಶಕ್ಕೆ: ಸೋಮವಾರ ನಡೆದ ಘಟನೆಗೆ ಸಂಬಂಧಿಸಿ ಬ್ಯಾಡಗಿ ಪೊಲಿಸ್‌ ಠಾಣೆಯಲ್ಲಿ 4 ಎಫ್‌.ಐ.ಆರ್‌. ದಾಖಲಾಗಿವೆ. ಆಂಧ್ರಪ್ರದೇಶ, ತೆಲಂಗಾಣ, ಬಳ್ಳಾರಿ, ಯಾದಗಿರಿ ಸೇರಿದಂತೆ ಹಲವು ಪ್ರದೇಶದಿಂದ ಆಗಮಿಸಿದ್ದ ಒಟ್ಟು 80 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಶಂಕಿತ ಆರೋಪಿಗಳ ಪತ್ತೆಗಾಗಿ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋಗಳನ್ನು ಬಳಸಿಕೊಂಡು ಶೋಧ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next