Advertisement

ಬ್ಯಾಡಗಿ: ಜೋಡೆತ್ತು ರಕ್ಷಿಸಲು ಹೋಗಿ ಜೀವಬಿಟ್ಟ ರೈತ

06:25 PM Jul 06, 2023 | Team Udayavani |

ಬ್ಯಾಡಗಿ: ಹೊಲದಲ್ಲಿ ಉಳುಮೆ ಮಾಡುವ ವೇಳೆ ಕೊಳವೆಬಾವಿಗೆ ಅಳವಡಿಸಿದ್ದ ಸರ್ವಿಸ್‌ ವೈರ್‌ ತಗುಲಿ ಒದ್ದಾಡುತ್ತಿದ್ದ ತನ್ನ ನೆಚ್ಚಿನ ಕೊಬ್ಬರಿ ಹೋರಿ (ಬ್ಯಾಡಗಿ ಕಿಂಗ್‌) ಜೀವ ಉಳಿಸಲು ಹೋಗಿ ಯುವ ರೈತನೊಬ್ಬ ಮೃತಪಟ್ಟ ಘಟನೆ ತಾಲೂಕಿನ ಮಲ್ಲೂರ ಗ್ರಾಮದಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.

Advertisement

ಮಲ್ಲೂರ ಗ್ರಾಮದ ಸಂತೋಷಗೌಡ ಪ್ರಭುಗೌಡ ಹೊಮ್ಮರಡಿ (22) ಮೃತ ರೈತ. ಹೊಲದಲ್ಲಿ ಎಲೆಕೋಸು(ಕ್ಯಾಬೀಜ್‌) ಬೆಳೆಗೆ
ನೇಗಿಲು ಮೂಲಕ ಸಾಲು ಮಾಡಲು ಹೋಗಿದ್ದ. ಇದೇ ವೇಳೆ ಕೊಳವೆಬಾವಿಗೆ ಅಳವಡಿಸಿದ್ದ ಸರ್ವಿಸ್‌ ವೈರ್‌ ಕೈಗೆಟುಕುವಂತಿತ್ತು. ಅಲ್ಲದೇ, ಅದರ ಮೇಲಿನ ಸೇಫ್ಟಿ ಕೋಟಿಂಗ್‌ ಸಹ ಕಿತ್ತು ಹೋಗಿದೆ.ಅದರೆ ಅದನ್ನು ಗಮನಿಸದೆ ಸಂತೋಷಗೌಡ ನೆಲ ನೋಡುತ್ತಾ ಉಳುಮೆ ಮಾಡುತ್ತ ಸಾಗಿದ್ದಾನೆ.

ಇದೇ ವೇಳೆ ಎತ್ತಿನ ಕೊಂಬಿಗೆ ಸರ್ವೀಸ್‌ ವೈರ್‌ ಸಿಕ್ಕಿ ಹಾಕಿಕೊಂಡಿದೆ. ಆಗ ಅದರಲ್ಲಿನ ವಿದ್ಯುತ್‌ ಹರಿದು ಎತ್ತು ಒದ್ದಾಡಿದೆ. ಇದನ್ನು ನೋಡಲಾಗದ ಸಂತೋಷ್‌ ವೈರ್‌ ತಪ್ಪಿಸಲು ಮುಂದಾದಾಗ ದುರ್ಘ‌ಟನೆ ನಡೆದಿದೆ. ತೀವ್ರ ಸಂಕಷ್ಟದಿಂದ ಒದ್ದಾಡುತ್ತಿದ್ದ ಆತನನ್ನು ಅಕ್ಕಪಕ್ಕದವರು ಬಂದು ಆಸ್ಪತ್ರೆಗೆ ಸಾಗಿಸಲು ಮುಂದಾದರು. ಆದರೆ, ಮಾರ್ಗ ಮಧ್ಯೆ
ಮೃತಪಟ್ಟಿದ್ದಾಗಿ ಪೊಲೀಸ್‌ ಮೂಲಗಳು ತಿಳಿಸಿವೆ.

ಸಾವು ತಂದ ಹೋರಿ ಹುಚ್ಚು: ಸಂತೋಷಗೌಡನಿಗೆ ಕೊಬ್ಬರಿ ಹೋರಿ ಎಂದರೆ ಎಲ್ಲಿಲ್ಲದ ಹುಚ್ಚು. ಹೀಗಾಗಿಯೇ ತನ್ನ ಎತ್ತಿಗೆ “ಬ್ಯಾಡಗಿ ಕಿಂಗ್‌’ ಎಂದು ನಾಮಕರಣ ಮಾಡಿದ್ದ. ಮೃತ ಹೋರಿ ಬಹಳಷ್ಟು ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿತ್ತು. ತನ್ನ ನೆಚ್ಚಿನ ಹೋರಿ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದುದನ್ನು ಕಂಡು ತಡೆಯಲಾಗದೆ ಏಕಾಏಕಿ ಕೊಂಬಿಗೆ ಸಿಕ್ಕಿದ್ದ ವಿದ್ಯುತ್‌ ತಂತಿ ತಪ್ಪಿಸಲು ಮುಂದಾಗಿದ್ದಾನೆ. ಈ ವೇಳೆ ಹೊಲದಲ್ಲಿದ್ದ ಜನರೂ ಸಹ ಎತ್ತಿಗೆ ಕರೆಂಟ್‌ ಶಾಕ್‌ ಹೊಡೆದಿದೆ, ಹೋಗಬೇಡ ಎಂದು ಕೂಗಿದ್ದಾರೆ. ಆದರೂ ಕೇಳದ ಸಂತೋಷ್‌ಗೌಡ ಹೇಗಾದರೂ ಮಾಡಿ ಎತ್ತಿನ ಜೀವ ಉಳಿಸಲು ಮುಂದಾಗಿದ್ದಾನೆ. ಆಗ ಆತನಿಗೂ ವಿದ್ಯುತ್‌ ತಗುಲಿದೆ. ಜತೆಯಲ್ಲಿದ್ದ ಇನ್ನೊಂದು ಎತ್ತಿಗೂ ವಿದ್ಯುತ್‌ ತಗುಲಿ ಸಾವನ್ನಪ್ಪಿದೆ. ಘಟನೆ ಕುರಿತು ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂತಾಪ: ರೈತ ಸಂತೋಷಗೌಡ ಅವರ ನಿಧನಕ್ಕೆ ಸಂಸದ ಶಿವಕುಮಾರ ಉದಾಸಿ, ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ , ಸುರೇಶಗೌಡ ಪಾಟೀಲ, ಮುಖಂಡ ಎಸ್‌.ಆರ್‌.ಪಾಟೀಲ, ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಗಂಗಾಧರ ಎಲಿ, ರೈತ ಮುಖಂಡರು ಸಂತಾಪ ಸೂಚಿಸಿದ್ದಾರೆ.

Advertisement

ಅಪಾರ ಜನಸ್ತೋಮ
ಕೊಬ್ಬರಿ ಹೋರಿಯಿಂದ (ಬ್ಯಾಡಗಿ ಕಿಂಗ್‌) ಅಪಾರ ಜನಪ್ರಿಯತೆ ಗಳಿಸಿದ್ದ ಸಂತೋಷಗೌಡನ ಅಂತ್ಯಕ್ರಿಯೆಯಲ್ಲಿ ಹಾವೇರಿ ಮತ್ತು ಶಿವಮೊಗ್ಗ ಜಿಲ್ಲೆಯ ಕೊಬ್ಬರಿ ಹೋರಿಗಳ ಮಾಲೀಕರು ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ಮಳೆ ಲೆಕ್ಕಿಸದೆ ಅಂತಿಮಯಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು ಯುವ ರೈತ ಸಂತೋಷಗೌಡನ ಸಾವಿಗೆ ಕಂಬನಿ ಮಿಡಿದರು. ಏಕೈಕ ಪುತ್ರನನ್ನು ಕಳೆದುಕೊಂಡ ಪ್ರಭುಗೌಡ ಹೊಮ್ಮರಡಿ ದಂಪತಿ ಕಣ್ಣೀರ ಕಟ್ಟೆ ಒಡೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next