Advertisement

ಸಾರ್ವಜನಿಕ ಶೌಚಾಲಯಕ್ಕೆ ಜಾಗವೇ ಇಲ್ಲ!

06:35 AM Feb 09, 2019 | Team Udayavani |

ಬಡಗನ್ನೂರು: ಬಡಗನ್ನೂರು ಹಾಗೂ ಪಡುವನ್ನೂರು ಗ್ರಾಮ ವ್ಯಾಪ್ತಿಯನ್ನೊಳಗೊಂಡ ಬಡಗನ್ನೂರು ಕಾರಣಿಕ ಪುರುಷರಾದ ಕೋಟಿ ಚೆನ್ನಯರ ನೆಲೆಬೀಡು. ಸಾವಿರಾರು ಪ್ರವಾಸಿಗಳು ಈ ಪುಣ್ಯ ಸ್ಥಳಕ್ಕೆ ವಾರ್ಷಿಕ ವಾಗಿ ಭೇಟಿ ನೀಡುತ್ತಿದ್ದು, ಇತ್ತೀಚೆಗಿನ ದಿನದಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ ಕಂಡಿದೆ. ಆದರೆ ಇಲ್ಲಿ ಅವರ ಅನುಕೂಲತೆಗೆ ತಕ್ಕಂತೆ ಸಾರ್ವಜನಿಕ ಶೌಚಾಲಯ ವಿಲ್ಲ ಎಂಬುದೂ ಅಷ್ಟೇ ಸತ್ಯ.ಕಾರಣಾಂತರಗಳಿಂದ ಈ ಕ್ಷೇತ್ರದಲ್ಲಿ ಶೌಚಾಲಯ ನಿರ್ಮಾಣ ವಾಗದೇ ಬಾಕಿ ಉಳಿದಿದೆ.

Advertisement

ಪ್ರವಾಸಿಗರ ಆಕರ್ಷಣೆಯ ಕೇಂದ್ರ ದಲ್ಲಿ ಶೌಚಾಲಯ ನಿರ್ಮಿಸುವ ವಿಚಾರ ದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್‌ ಉತ್ಸಾಹ ತೋರದೆ ಇರುವುದು ಸಾರ್ವಜನಿಕರಲ್ಲಿ ಅಚ್ಚರಿಗೆ ಕಾರಣ ವಾಗಿದೆ. ಗ್ರಾಮ ಸಭೆಯಲ್ಲಿ ಪ್ರಸ್ತಾವ ಗೊಳ್ಳುವ ವಿಷಯಗಳು ನಂತರದ ದಿನಗಳಲ್ಲಿ ಮರೆಯಾಗುತ್ತವೆ.

ನಿರ್ಮಾಣಕ್ಕೆ ಏನು ತೊಡಕು?
ಗ್ರಾಮದ ಕೆಲವೊಂದು ಆಯ ಕಟ್ಟಿನ ಸ್ಥಳಗಳಲ್ಲಿ ಸರಕಾರಿ ಜಾಗ ಇಲ್ಲದೇ ಇರುವುದು ಶೌಚಾಲಯ ನಿರ್ಮಾಣ ಬಾಕಿ ಉಳಿಯಲು ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಗ್ರಾಮ ದಲ್ಲಿ ಸುಳ್ಯಪದವು, ಬಡಗನ್ನೂರು ಪ್ರಮುಖ ಸ್ಥಳಗಳಾಗಿದ್ದು, ಅಲ್ಲಿ ರಸ್ತೆ ಬದಿ ಯಲ್ಲಿ ಸರಕಾರಿ ಜಾಗದ ಕೊರತೆ ಇದೆ. ಈ ಕಾರಣಕ್ಕೆ ಶೌಚಾಲಯ ನಿರ್ಮಾಣ ಕಾರ್ಯ ನಡೆದಿಲ್ಲ ಎಂದು ಗ್ರಾ.ಪಂ. ಮಾಹಿತಿ ನೀಡಿದೆ. ಶೌಚಾಲಯ ನಿರ್ಮಾಣಕ್ಕೆ ಅನುದಾನವನ್ನು ನೀಡಲು ಸರಕಾರ ಸಿದ್ಧವಿದ್ದು, ಜಾಗಕ್ಕೇ ಕೊರತೆ ಇದೆ ಎನ್ನುವುದು ಗ್ರಾ.ಪಂ. ಅಧಿಕಾರಿಗಳ ಉತ್ತರ.

12 ಸಾವಿರ ಜನಸಂಖ್ಯೆ
ಬಡಗನ್ನೂರು ಗ್ರಾ.ಪಂ. ಪಡು ವನ್ನೂರು ಗ್ರಾಮವನ್ನೂ ಒಳ ಗೊಂಡಿದ್ದು, 12 ಸಾವಿರ ಜನಸಂಖ್ಯೆ ಯನ್ನು ಹೊಂದಿದ್ದು, ವ್ಯಾಪ್ತಿಯೂ ವಿಶಾಲವಾಗಿದೆ. ಗ್ರಾಮಸ್ಥರ ಅನುಕೂಲಕ್ಕಾಗಿ ಪಟ್ಟೆಯಲ್ಲಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಲಾಗಿದ್ದರೂ ಅದಿನ್ನೂ ಬಳಕೆಗೆ ತೆರೆದುಕೊಂಡಿಲ್ಲ. ಪಟ್ಟೆ ಮತ್ತು ಇಲ್ಲಿನ ಗ್ರಾ.ಪಂ. ಕಚೇರಿಗೂ 6 ಕಿ.ಮೀ. ದೂರ ಕ್ರಮಿಸಬೇಕಾಗಿದೆ. ರಾಜ್ಯ ಸರಕಾರ ಪ್ರತೀ ವರ್ಷ ಗ್ರಾ.ಪಂ.ಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ಪ್ರಶಸ್ತಿ ನೀಡುತ್ತಿದೆ. ಸ್ವಚ್ಛ ಗ್ರಾಮಕ್ಕಾಗಿ ಅನುದಾನವನ್ನೂ ಹಂಚುತ್ತಿದೆ. ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವೇ ಇಲ್ಲದಿದ್ದರೆ ನಿರ್ಮಲ ಗ್ರಾಮ ರೂಪುಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

ಮನವಿ ಸಲ್ಲಿಸಲಾಗಿದೆ
ಶೌಚಾಲಯ ನಿರ್ಮಾಣ ಮಾಡುವ ಸಲುವಾಗಿ ಅನುದಾನಕ್ಕೆಂದು ಸರಕಾರಕ್ಕೆ ಮನವಿ ಮಾಡಿದ್ದೇವೆ. ಗ್ರಾ.ಪಂ. ನಿರ್ಣಯವನ್ನೂ ಕೈಗೊಂಡಿದೆ. ಆದರೆ ಸೂಕ್ತ ಸರಕಾರಿ ಜಾಗ ಸಿಗದೇ ಇರುವ ಕಾರಣ ಗ್ರಾಮಸ್ಥರ ಬೇಡಿಕೆ ಇನ್ನೂ ಈಡೇರಿಲ್ಲ. ಕಂದಾಯ ಇಲಾಖೆಯ ಗಮನಕ್ಕೆ ತರಲಾಗಿದೆ.
– ಕೇಶವ ಗೌಡ ಕನ್ನಯ,
ಗ್ರಾ .ಪಂ. ಅಧ್ಯಕ್ಷರು

Advertisement

ಸೂಕ್ತ ಜಾಗ ದೊರೆತಿಲ್ಲ
ಶೌಚಾಲಯಕ್ಕೆ ಸೂಕ್ತ ಜಾಗ ದೊರಕಿಲ್ಲ. ಸ್ಥಳ ಅಂತಿಮವಾದ ಬೆನ್ನಲ್ಲೇ  ಶೌಚಾಲಯದ ಕೆಲಸವನ್ನು ಪ್ರಾರಂಭಿಸಲಾಗುವುದು. ಗ್ರಾ.ಪಂ. ತನ್ನ ಬೇಡಿಕೆಯನ್ನು ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಿದೆ.
– ವಾಸೀಮ್‌ ಗಂಧದ,
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next